ನೀವು ಬೆಳಗಾವಿ ಕೇಳಿದ್ರೆ, ನಾವು ಮುಂಬೈ ಕೇಳಬೇಕಾಗುತ್ತೆ

| N/A | Published : Nov 02 2025, 04:15 AM IST

Kannada Rajyotsava
ನೀವು ಬೆಳಗಾವಿ ಕೇಳಿದ್ರೆ, ನಾವು ಮುಂಬೈ ಕೇಳಬೇಕಾಗುತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿ ಸುವರ್ಣಸೌಧ ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಅಧಿವೇಶನಗಳನ್ನು ನಡೆಸಲಾಗುತ್ತಿದೆ. ಆದರೆ ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಕೆಲವು ಬಾಡಿಗೆ ಹೋರಾಟಗಾರರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎನ್ನುತ್ತಿದ್ದಾರೆ.  

  ಅಥಣಿ :  ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿ ಸುವರ್ಣಸೌಧ ಸ್ಥಾಪಿಸುವ ಮೂಲಕ ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ಅಧಿವೇಶನಗಳನ್ನು ನಡೆಸಲಾಗುತ್ತಿದೆ. ಆದರೆ ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಕೆಲವು ಬಾಡಿಗೆ ಹೋರಾಟಗಾರರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎನ್ನುತ್ತಿದ್ದಾರೆ. ಇದೇ ಚಾಳಿ ಮುಂದುವರಿಸಿದರೆ ನಾವು ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಿ ಎನ್ನುವ ಚಳವಳಿ ಆರಂಭಿಸಬೇಕಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಖಡಕ್‌ ಎಚ್ಚರಿಕೆ ನೀಡಿದರು.

ಇಲ್ಲಿನ ಭೋಜರಾಜ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ೭೦ನೇ ಕರ್ನಾಟಕ ರಾಜೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಬೆಳಗಾವಿ ಎಂದೆಂದಿಗೂ ಕನ್ನಡಿಗರದ್ದೇ. ಮಹಾರಾಷ್ಟ್ರದವರಿಗೆ ಅದನ್ನು ಕೇಳುವ ಹಕ್ಕಿಲ್ಲ. ಅದು ಅವರ ಧರ್ಮವೂ ಅಲ್ಲ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರಿಗೆ ಹೆದರದೇ ಹೋರಾಟ ಮಾಡಿದ ಕೆಚ್ಚೆದೆಯ ವೀರರಾಣಿ ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನಾಡಿನ ಜನರು, ಈ ಮಹಾರಾಷ್ಟ್ರದ ಎಂಇಎಸ್ ಮತ್ತು ಶಿವ ಸೇನೆ ಪುಂಡರಿಗೆ ಹೆದರುತ್ತೇವಾ ಎಂದು ಪ್ರಶ್ನಿಸಿದರು. 

ಪ್ರತ್ಯೇಕ ಪ್ರಾಧಿಕಾರ ರಚನೆಗೆ ಒತ್ತಾಯ:

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ವಿಶೇಷ ಅನುದಾನ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ ಅವರು, ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಾದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಶಿಕ್ಷಕರು ಮೊದಲು ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕಾನೂನು ರಚಿಸಬೇಕು. ಭಾಷಣ ಮತ್ತು ಹೋರಾಟಗಳಲ್ಲಿ ಕನ್ನಡ ಕಲಿಯಿರಿ ಕನ್ನಡ ಉಳಿಸಿ ಬೆಳೆಸಿರಿ ಎಂದರೆ ಸಾಲದು, ಕನ್ನಡ ಭಾಷೆಯನ್ನು ಪ್ರತಿನಿತ್ಯ ಜೀವನದಲ್ಲಿ ಬಳಸಿದಷ್ಟು ಬೆಳೆಸಲು ಸಾಧ್ಯ ಎಂದರು.ಈ ವೇಳೆ ತಹಸೀಲ್ದಾರ್‌ ಸಿದ್ದರಾಯ ಬೋಸಗಿ ಧ್ವಜಾರೋಹಣ ನೆರವೇರಿಸಿ ಕನ್ನಡ ಬಾಷೆಯ ಇತಿಹಾಸದ ಬಗ್ಗೆ ತಿಳಿಸಿದರು. ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಂಕ್ಕಚ್ಚಿ ಮಾತನಾಡಿದರು. ಗ್ಯಾರಂಟಿ ಅನುಷ್ಠಾನದ ಅದ್ಯಕ್ಷ ಸಿದ್ದಾರ್ಥ ಶಿಂಗೆ ಮಾತನಾಡಿದರು. 

ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ:

ಕನ್ನಡಪರ ಹೋರಾಟ, ಪತ್ರಿಕಾ ರಂಗ, ಸಾಹಿತ್ಯ, ಕಲೆ, ಜನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಜನ ಸಾಧಕರಿಗೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಬಿಇಒ ಎಂ.ಆರ್.ಮುಂಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜಿ ಸ್ವಾಗತಿಸಿದರು. ಸಂಗಮೇಶ ಹಚ್ಚಡದ ನಿರೂಪಿಸಿದರು. ಅಶೋಕ ಗುಡಿಮನಿ ವoದಿಸಿದರು. 

ಸ್ತಬ್ಧ ಚಿತ್ರಗಳ ಮೆರವಣಿಗೆ:

ಪಟ್ಟಣದ ವಿವಿಧ ಶಾಲೆಗಳ ಕನ್ನಡ ನಾಡು ನುಡಿ ಕಲೆ ಸಂಸ್ಕೃತಿ ಬಿಂಬಿಸುವ ಸ್ತಬ್ಧ ಚಿತ್ರ ಮತ್ತು ರೂಪಗಳನ್ನು ಪ್ರದರ್ಶನ ಮಾಡಲಾಗಿತ್ತು. ಈ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಅಂಬೇಡ್ಕರ್ ವೃತ್ತದಲ್ಲಿ ತಹಸೀಲ್ದಾರ್ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಬಸವೇಶ್ವರ ವೃತ್ತದ ಮೂಲಕ ಹಾಯ್ದು ಭೋಜರಾಜ ಕ್ರೀಡಾಂಗಣದಲ್ಲಿ ಸಮಾವೇಶಗೊಳಲಾಯಿತು.

Read more Articles on