ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ ಅತ್ತಿಬೆಲೆ ಗಡಿಗೆ ಕಾಲ್ನಡಿಗೆ ಜಾಥಾದಲ್ಲಿ ತಮಟೆ ಸದ್ದಿಗೆ ಕನ್ನಡ ಪರ ಕಾರ್ಯಕರ್ತರು ಹೆಜ್ಜೆ ಹಾಕಿ ಕುಣಿದು ನಲಿದು ಸಂಭ್ರಮಿಸಿದರು. ಶಾಸಕ ಬಿ. ಶಿವಣ್ಣ, ಮಂಜುನಾಥ್ ದೇವಾ, ಪಟಾಪಟ್ ಪ್ರಕಾಶ್ ಮತ್ತಿತರರು ಇದ್ದಾರೆ.
ಕನ್ನಡಪ್ರಭ ವಾರ್ತೆ, ಆನೇಕಲ್ಕನ್ನಡ ಜಾಗೃತಿ ವೇದಿಕೆಯ ವತಿಯಿಂದ ಕನ್ನಡಿಗರ ಐಕ್ಯತೆ, ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕಾಗಿ ಬೃಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳೆಯರು ಮತ್ತು ಪುರುಷರು ಜಾಥಾದಲ್ಲಿ ಪಾಲ್ಗೊಂಡು ಕನ್ನಡ ಕಹಳೆ ಮುಗಿಲು ಮುಟ್ಟುವಂತೆ ಮೊಳಗಿಸಿದರು.
ಶಾಸಕ ಬಿ. ಶಿವಣ್ಣ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿ ಕನ್ನಡಿಗರು ಹೃದಯವಂತವರು. ಅನ್ಯ ರಾಜ್ಯದಿಂದ ಕರ್ನಾಟಕಕ್ಕೆ ಬಂದವರನ್ನು ಬೆಳೆಯಲು, ಬಾಳಲು ಕರ್ನಾಟಕ ಹೆಮ್ಮೆಯ ಸ್ಥಳವಾಗಿದೆ. ಅನ್ಯಭಾಷಿಕರಿಗೆ ಕನ್ನಡ ಕಲಿಸಿ ಕನ್ನಡ ಭಾಷೆಯನ್ನು ಬಳಸುವುದರಿಂದ ಮಾತ್ರ ಕನ್ನಡವನ್ನು ಬೆಳೆಸಲು ಸಾಧ್ಯವಿದೆ. ಗಡಿ ಭಾಗದಲ್ಲಿ ಕನ್ನಡ ಜಾಗೃತಿ ವೇದಿಕೆಯು ಕನ್ನಡ ಪರ ಧ್ವನಿಯಾಗಿದ್ದು ಹಲವು ಜನಪರ ಹೋರಾಟಗಳನ್ನು ನಡೆಸಿದೆ. ಕನ್ನಡಿಗರಲ್ಲಿ ಏಕತೆ, ಭಾವೈಕ್ಯತೆಯನ್ನು ಸಾರಲು ಜಾಗೃತಿ ಜಾಥಾ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.ಕನ್ನಡ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಮಂಜುನಾಥ ದೇವ ಮಾತನಾಡಿ ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ. ಅತ್ತಿಬೆಲೆ ಗಡಿ ಗೋಪುರದಲ್ಲಿ ಗಂಡ ಬೇರುಂಡ ಚಿಹ್ನೆ ಇದ್ದು ನಮ್ಮ ಅಸ್ಮಿತೆಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಗೋಪುರ ಇರಬಾರದು ಎಂದು ಕೆಲ ಇಲಾಖೆಗಳು ತಿಳಿಸುತ್ತಿದ್ದು ಗಡಿಗೋಪುರದ ವಿಷಯಕ್ಕೆ ಬಂದರೆ ಕನ್ನಡಿಗರು ದಂಗೆ ಏಳಬೇಕಾಗುತ್ತದೆ. 1993ರಲ್ಲಿ ಕನ್ನಡ ಗಡಿ ಗೋಪುರದ ಮೇಲೆ ಕನ್ನಡ ಜಾಗೃತಿ ವೇದಿಕೆಯು ಕನ್ನಡ ಬಾವುಟವನ್ನು ಹಾರಿಸಿದ್ದು 32 ವರ್ಷಗಳಿಂದ ನಿರಂತರವಾಗಿ ಕನ್ನಡ ಧ್ವಜ ಹಾರಾಡುತ್ತಿದೆ ಎಂದರು.ಆನೇಕಲ್ ವಕೀಲರ ಸಂಘದ ಅಧ್ಯಕ್ಷ ಪಟಾಪಟ್ ಪ್ರಕಾಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ದೇವೇಗೌಡ, ಪಟಾಪಟ್ ರವಿ, ನಾಗರಾಜು ಸೋನಿ, ಪಟಾಪಟ್ ಶ್ರೀನಿವಾಸ್, ಮುರಳಿ, ರವಿ, ಯುವ ಅಧ್ಯಕ್ಷ ಎಸ್.ಕೆ. ಗೌರೀಶ್, ಮಹಿಳಾ ಅಧ್ಯಕ್ಷೆ ವತ್ಸಲ, ಕವಿತಾ ಪೇಟೇಮಠ್, ಲಕ್ಷ್ಮೀ ಹುದಲಿ ಸೇರಿದಂತೆ ನೂರಾರು ಮುಖಂಡರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ತಾಲೂಕಿನ ಅತ್ತಿಬೆಲೆ ವೃತ್ತದಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾ ಅತ್ತಿಬೆಲೆ ಗಡಿಯವರೆಗೂ ಸಾಗಿತು. ತಮಟೆ ಸದ್ದಿಗೆ ಕನ್ನಡ ಪರ ಕಾರ್ಯಕರ್ತರು ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.