ಕೊಡಗು ಜಿಲ್ಲೆಯಲ್ಲಿ ಮಾಜಿ ಸೈನಿಕರು ಹಾಗೂ ಅವರುಗಳ ಕುಟುಂಬ ಸದಸ್ಯರೊಂದಿಗೆ ನೇರ ಸಂಪರ್ಕ ಹೊಂದುವ ಮೂಲಕ ಕುಂದು ಕೊರತೆಗಳನ್ನು ಪರಿಹರಿಸುವ ಸಂಬಂಧವಾಗಿ ಮದ್ರಾಸ್ ರೆಜಿಮೆಂಟ್ ಅಭಿಲೇಖಾಲಯದ ಅಧಿಕಾರಿಗಳು ಸಿಬ್ಬಂದಿಗಳ ತಂಡ ಜಿಲ್ಲೆಗೆ ಆಗಮಿಸಿದ ಸಂದರ್ಭ ಕುಶಾಲನಗರ ಗಡಿ ಭಾಗದಲ್ಲಿ ಕುಶಾಲನಗರ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಬರಮಾಡಿಕೊಂಡರು.
ಕನ್ನಡಪ್ರಭ ವಾರ್ತೆ ಕುಶಾಲನಗರ ಕೊಡಗು ಜಿಲ್ಲೆಯಲ್ಲಿ ಮಾಜಿ ಸೈನಿಕರು ಹಾಗೂ ಅವರುಗಳ ಕುಟುಂಬ ಸದಸ್ಯರೊಂದಿಗೆ ನೇರ ಸಂಪರ್ಕ ಹೊಂದುವ ಮೂಲಕ ಕುಂದು ಕೊರತೆಗಳನ್ನು ಪರಿಹರಿಸುವ ಸಂಬಂಧವಾಗಿ ಮದ್ರಾಸ್ ರೆಜಿಮೆಂಟ್ ಅಭಿಲೇಖಾಲಯದ ಅಧಿಕಾರಿಗಳು ಸಿಬ್ಬಂದಿಗಳ ತಂಡ ಜಿಲ್ಲೆಗೆ ಆಗಮಿಸಿದ ಸಂದರ್ಭ ಕುಶಾಲನಗರ ಗಡಿ ಭಾಗದಲ್ಲಿ ಕುಶಾಲನಗರ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಬರಮಾಡಿಕೊಂಡರು.
ವೆಲ್ಲಿಂಗ್ಟನ್ ನಲ್ಲಿರುವ ಮದ್ರಾಸ್ ರೆಜಿಮೆಂಟ್ ಕೇಂದ್ರದ ಕ್ಯಾಪ್ಟನ್ ಮುನೀಶ್ ಕುಮಾರ್ ಧನಕರ್ ಅವರ ನೇತೃತ್ವದಲ್ಲಿ ಸುಮಾರು 15 ಜನರ ತಂಡ ಜಿಲ್ಲೆಯ ಮಾಜಿ ಸೈನಿಕರೊಂದಿಗೆ ಪರಸ್ಪರ ಸಂಪರ್ಕ ಸುಗಮಗೊಳಿಸುವ ಗುರಿಯೊಂದಿಗೆ ಬೈಕ್ ರ್ಯಾಲಿಯಲ್ಲಿ ಜಿಲ್ಲೆಯ ಗಡಿಭಾಗ ಕುಶಾಲನಗರಕ್ಕೆ ಆಗಮಿಸಿದರು. ನಂತರ ಕುಶಾಲನಗರ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಮಾಜಿ ಸೈನಿಕರ ನಿವೃತ್ತಿಯ ದಾಖಲೆಗಳಲ್ಲಿ ತಿದ್ದುಪಡಿ, ವಿಳಾಸ ಬದಲಾವಣೆ, ಕುಟುಂಬ ಸದಸ್ಯರ ಹೆಸರುಗಳ ತಿದ್ದುಪಡಿ ಸೇರಿದಂತೆ ವಿವಿಧ ದಾಖಲೆಗಳ ಮಾಹಿತಿಯನ್ನು ಪಡೆದುಕೊಂಡರು. ತಂಡ ಕೊಡಗು ಜಿಲ್ಲೆಯಲ್ಲಿ ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರ ಕುಂದು ಕೊರತೆಗಳನ್ನು ದಾಖಲೆಗಳ ಮೂಲಕ ಸಂಗ್ರಹಿಸಿ ಪರಿಹರಿಸುವುದು ಉದ್ದೇಶವಾಗಿದೆ ಎಂದು ತಂಡದ ಮುಖ್ಯಸ್ಥರಾದ ಕ್ಯಾಪ್ಟನ್ ಮುನಿಶ್ ಕುಮಾರ್ ಧನಕರ್ ತಿಳಿಸಿದ್ದಾರೆ. ಈ ತಿಂಗಳ 20 ರಿಂದ 24ರ ತನಕ ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ತೆರಳಿ ಕುಂದು ಕೊರತೆ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿವರಗಳಿಗೆ ಪ್ರತಿ ಜಿಲ್ಲೆಗಳಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕುಟುಂಬ ಪಿಂಚಣಿ, ಮರಣ ನಿಧಿ ಮತ್ತಿತರ ಸೌಲಭ್ಯಗಳ ಬಗ್ಗೆ ಸಂಬಂಧಿಸಿದವರಿಗೆ ಮಾಹಿತಿ ಒದಗಿಸಲಾಗುತ್ತಿದೆ. ಇದರೊಂದಿಗೆ ಬಾಂಗ್ಲಾ -ಪಾಕ್ ಯುದ್ಧ ಸಂದರ್ಭ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೀಡಬೇಕಾದ ಪದಕಗಳನ್ನು ಹಸ್ತಾಂತರಿಸುವ ಕಾರ್ಯ ಕೂಡ ನಡೆಯಲಿದೆ ಎಂದು ಹೇಳಿದರು. ಇದೇ ಸಂದರ್ಭ ಬಾಂಗ್ಲಾ ಯುದ್ಧ ಸಂದರ್ಭ ಹುತಾತ್ಮರಾದ ಸಿಪಾಯಿ ಮುತ್ತಣ್ಣ ಅವರ ಮೊಮ್ಮಗ ಗೋಣಿಕೊಪ್ಪದ ಹ್ಯಾರಿ ಭೀಮಯ್ಯ ಅವರಿಗೆ ಕುಶಾಲನಗರದಲ್ಲಿ ಸಂಬಂಧಿಸಿದ ಪದಕಗಳು ದಾಖಲೆಗಳನ್ನು ಹಸ್ತಾಂತರಿಸಲಾಯಿತು. ಮಾಜಿ ಸೈನಿಕರ ಮತ್ತು ಕುಟುಂಬ ಸದಸ್ಯರ ಹಾಗೂ ವಿಧವಾ ವೇತನ ಮತ್ತಿತರ ದಾಖಲೆಗಳ ಪರಿಶೀಲನೆ ಸ್ಥಳದಲ್ಲಿ ನಡೆಯಿತು. ತಮಿಳುನಾಡಿನ ವೆಲ್ಲಿಂಗ್ಟನ್ ಎಂ ಆರ್ ಸಿ ರೆಜಿಮೆಂಟ್ ನಿಂದ ಆಗಮಿಸಿದ ತಂಡವನ್ನು ಕುಶಾಲನಗರ ಗಡಿ ಭಾಗದ ಕಾವೇರಿ ಪ್ರತಿಮೆ ಬಳಿ ಕುಶಾಲನಗರ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರಾದ ಎ ಕೆ ರಂಜಿತ್, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಸಂಘಟನಾ ಕಾರ್ಯದರ್ಶಿ ಪಿ ಎಸ್ ವಾಸು, ಮಾಜಿ ಸೈನಿಕರಾದ ಜನಾರ್ಧನ್ ಮತ್ತಿತರರು ಬರಮಾಡಿಕೊಂಡರು.ನಂತರ ಮಡಿಕೇರಿ ಗೆ ತೆರಳಿದ ತಂಡ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಾರ್ಯಾಲಯದಲ್ಲಿ ಮಾಜಿ ಸೈನಿಕರು ಹಾಗೂ ವೀರ ನಾರಿಯರು ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡ ಸಭೆಯಲ್ಲಿ ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಜಂಟಿ ನಿರ್ದೇಶಕ ಬಿ ಆರ್ ಶೆಟ್ಟಿ ಇದ್ದರು.