ಕನ್ನಡಪ್ರಭ ವಾರ್ತೆ ​ಮುದ್ದೇಬಿಹಾಳ

ನಾಗರಬೆಟ್ಟ ಏತನೀರಾವರಿ ಯೋಜನೆ ತಕ್ಷಣವೇ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿ ಜೂನ್ 8 ರಂದು ನಾಗರಬೆಟ್ಟದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ರೈತರು ಜೊತೆಗೂಡಿ ಬೃಹತ್ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.

​ತಾಲೂಕಿನ ಚವನಭಾವಿ ಗ್ರಾಮದ ಗದ್ದೇಮ್ಮದೇವಿ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ರೈತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಶಕ ಕಳೆದರೂ ಈ ನೀರಾವರಿ ಯೋಜನೆಯಡಿ ರೈತರ ಜಮೀನುಗಳಿಗೆ ನೀರು ಹರಿದಿಲ್ಲ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ಉದಾಸೀನ ಮನೋಭಾವ ಇದಕ್ಕೆ ಕಾರಣ. ಸರ್ಕಾರ ಕೋಟ್ಯಂತರ ರೂಪಾಯಿ ವ್ಯಯಿಸಿ ಅನುಷ್ಠಾನಗೊಳಿಸಿರುವ ಯೋಜನೆಗಳು ಕ್ಷುಲ್ಲಕ ಕಾರಣಕ್ಕೆ ಸ್ಥಗಿತಗೊಳಿಸುತ್ತಿರುವುದು ತೀವ್ರ ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

​ಜೂನ್ 8 ರಂದು ನಡೆಯಲಿರುವ ಈ ಬೃಹತ್ ಹೋರಾಟದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ರಾಜ್ಯ ಅಧ್ಯಕ್ಷ ಚೂನಪ್ಪ ಪೂಜಾರಿ ಮತ್ತು ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರು ಭಾಗಿಯಾಗಿ ಹೋರಾಟದ ನೇತೃತ್ವ ವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

​ಈ ಪೂರ್ವಭಾವಿ ಸಭೆಯಲ್ಲಿ ಗೋವಿಂದಗೌಡ ಪಾಟೀಲ, ಗದ್ದೇಪ್ಪ ಮಾಳಿ, ಯಲ್ಲಪ್ಪ ಕಾರಕೂರ, ಸುರೇಶ್ ಸೋಮನಾಳ, ದ್ಯಾಮಣ್ಣ ಬಿರಾದಾರ, ಭೀಮಣ್ಣ ಬಿರಾದಾರ, ಪವಡೆಪ್ಪ ಜಂಗಡಭಾವಿ, ಹಣಮಂತ ಈಳಗೇರ, ಬಸಪ್ಪ ಜಂಗಡಬಾವಿ, ಹುಲಗಪ್ಪ ತಳವಾರ, ಹುಸನಪ್ಪ ಗೋಗಿ, ಜುಮಣ್ಣ ಕಾರಕೂರ, ವೀರೇಶ ಚಲವಾದಿ ಸೇರಿ ಚವನಭಾವಿ ಗ್ರಾಮಗಳ ನೂರಾರು ರೈತರು ಹೋರಾಟದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಬೆಂಬಲ ಸೂಚಿಸಿದರು.