ಧಾರವಾಡ: ತಾಯಿಯು ನಿಸ್ವಾರ್ಥ ಪ್ರೀತಿಯ ಸಂಕೇತ. ಅವಳ ತ್ಯಾಗ, ಮಮತೆಗೆ ಸರಿ ಸಾಟಿಯೇ ಇಲ್ಲ. ಸ್ಫೂರ್ತಿಯ ಮೂಲವಾದ ತಾಯಿ ನಮಗೆಲ್ಲ ಜೀವದ ಜೀವಾಳ. ಅಂತಹ ಮಮತೆಯ ಮಾತೆಯನ್ನು ಆಧುನಿಕತೆಯ ನೆಪದಲ್ಲಿ ತಾತ್ಸಾರ ಮಾಡುವುದು ಸರಿಯಲ್ಲ ಎಂದು ಸಾಹಿತಿ ಡಾ. ನಿರ್ಮಲಾ ಶೆಟ್ಟರ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಶ್ರೀಮತಿ ಚನ್ನಮ್ಮ ಬಸಲಿಂಗಪ್ಪ ಹೊಸಕೋಟಿ ದತ್ತಿ ಉಪನ್ಯಾಸ ‘ತಾಯಿ ಸ್ಮರಣೆ’ ಕಾರ್ಯಕ್ರಮದಲ್ಲಿ ‘ಆಧುನಿಕತೆ ಮತ್ತು ತಾಯಿ’ ವಿಷಯ ಕುರಿತು ಮಾತನಾಡಿದರು.

ಹಿಂದೆ ಮಹಿಳೆಯರು ತಮ್ಮ ಗಂಡನ ಮೂಲಕವೆ ಹೊರಗಿನ ಜಗತ್ತನ್ನು ನೋಡಬೇಕಾದ ಸ್ಥಿತಿ ಇತ್ತು. ಅವರು ನಿರ್ದಿಷ್ಟ ಚೌಕಟ್ಟಿನಲ್ಲಿ ಕುಟುಂಬ ನಿರ್ವಹಣೆ ಮಾಡಬೇಕಿತ್ತು. ತಾಯಿ ಹಾಡುವ ಜೋಗುಳ ಪದಗಳು, ಲಾಲಿ ಹಾಡುಗಳು ಬಾಲ್ಯದಲ್ಲಿ ಮಕ್ಕಳನ್ನು ಸಂಸ್ಕಾರಯುತರನ್ನಾಗಿ ಮಾಡಿ, ಜೀವನ ಮೌಲ್ಯಗಳನ್ನು ಕಲಿಸುತ್ತಿದ್ದವು. ಆದರೆ, ಇಂದು ಆ ಹಾಡು ಹಾಡುವವರೇ ಇಲ್ಲದ ಸ್ಥಿತಿ ಇದ್ದು, ಮಕ್ಕಳು ಹೇಗೆ ಸಂಸ್ಕಾರವಂತರಾಗಲು ಸಾಧ್ಯ?.

ಆಧುನಿಕತೆಯ ಶರವೇಗದಲ್ಲಿ ಬದಲಾದ ಜೀವನ ಶೈಲಿಯಿಂದ ಮಕ್ಕಳು ಭಾವನಾತ್ಮಕ ಸಂಬಂಧದಿಂದ ಸೋಲುತ್ತಿದ್ದಾರೆ. ತಾಯಿಯ ಸಹಜ ಪ್ರೀತಿ ಮಗುವಿಗೆ ಸಿಗದಾಗಿದೆ. ಆಧುನಿಕ ಜೀವನ ಶೈಲಿಯಿಂದ ಸಹಜವಾಗಿ ಮಕ್ಕಳು ತಾಯಿಯ ಪ್ರೀತಿಯಿಂದ ವಂಚಿತರಾಗುತ್ತಾರೆ. ವಿಜ್ಞಾನ ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಮಕ್ಕಳು ತಾಯಿಯ ಮಡಿಲಿನಲ್ಲಿಯೇ ಬೆಳೆಯಬೇಕು ವಿನಹ ಕೃತಕತೆ ಬೇಡ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾ.ಕಾ. ಸಮಿತಿ ಸದಸ್ಯರಾದ ಗುರು ಹಿರೇಮಠ ಮಾತನಾಡಿ, ನಾವು ನೂರು ಜನ್ಮವೆತ್ತಿ ಬಂದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಅವಳ ತ್ಯಾಗಮಯಿ ಜೀವನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಸ್ವಾರ್ಥ ಭಾವದ ಅಂತಹ ತಾಯಿಯನ್ನು ಮಕ್ಕಳು ವೃದ್ಧಾಶ್ರಮಕ್ಕೆ ಕಳಿಸುವುದು ಎಷ್ಟು ಸಮಂಜಸ?. ಇದು ಒಂದು ರೀತಿ ನಾಗರಿಕತೆಯ ಅವಸಾನದ ಸಂಕೇತ. ಉನ್ನತ ಶಿಕ್ಷಣ ಪಡೆದು ಎಂತಹ ದೊಡ್ಡ ಹುದ್ದೆಯಲ್ಲಿದ್ದರೂ ಹೆತ್ತತಾಯಿಯನ್ನು ಸ್ಮರಿಸದಿದ್ದರೆ ನಾವು ಬದುಕಿಯೂ ಸತ್ತಂತೆ ಎಂದು ಹೇಳಿದರು.


ವೀರಣ್ಣ ಒಡ್ಡೀನ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಅ. ಹಡಗಲಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಂಜುನಾಥ ಮುತ್ತಿನ, ಎಂ.ಜಿ. ವಸ್ತ್ರದ ಸೇರಿದಂತೆ ಹೊಸಕೋಟಿ ಪರಿವಾದವರು ಇದ್ದರು.