ಭಾವೈಕ್ಯತೆ ಬೆಸೆಯುವ ಮೊಹರಂ ಹಬ್ಬಕ್ಕೆ ತೆರೆ

| Published : Jul 07 2025, 12:17 AM IST

ಸಾರಾಂಶ

ಮೊಹರಂ ಹಬ್ಬದ ಕಡೆಯ ದಿನವಾದ ಭಾನುವಾರ ಮುಂಡಗೋಡ ತಾಲೂಕಿನ ಬಹುತೇಕ ಕಡೆಗೆ ದೇವರು ಹೊಳೆಗೆ ಹೋಗುವ ಸಂಪ್ರದಾಯದೊಂದಿಗೆ ತೆರೆ ಬಿದ್ದಿದೆ. ಹುಲಿ ವೇಷಧಾರಿಗಳ ಆಕರ್ಷಕ ಕುಣಿತ ಹಾಗೂ ಗರ್ಜನೆ ಜನರ ಗಮನ ಸೆಳೆಯಿತು.

ಮುಂಡಗೋಡ: ಹಿಂದೂ-ಮುಸ್ಲಿಂ ಭಾವೈಕ್ಯತೆ ಬೆಸೆಯುವ ಹಬ್ಬವೆಂದೇ ಹೇಳಲಾಗುವ ಮೊಹರಂ ಹಬ್ಬಕ್ಕೆ ಕಡೆಯ ದಿನವಾದ ಭಾನುವಾರ ಬಹುತೇಕ ಕಡೆಗೆ ದೇವರು ಹೊಳೆಗೆ ಹೋಗುವ ಸಂಪ್ರದಾಯದೊಂದಿಗೆ ತೆರೆ ಬಿದ್ದಿದೆ.

ಪಟ್ಟಣ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಈ ಹಬ್ಬದ ಪ್ರಾಮುಖ್ಯತೆ ಹೆಚ್ಚು. ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ಮೆರಗುಗಳೊಂದಿಗೆ ಗ್ರಾಮ ಮಟ್ಟಗಳಲ್ಲಿ ಯಾವುದೇ ಜಾತಿ ನೀತಿಗಳ ಕಟ್ಟಳೆಗಳಿಲ್ಲದೇ ಸಂಭ್ರಮಿಸಲ್ಪಡುವ ಹಿಂದೂಗಳ ಪಾಲಿನ ಈ “ಅಲ್ಲಬ್ಬ” ಸತತ ಐದು ದಿನಗಳ ಕಾಲ ಜಾರಿಯಲ್ಲಿತ್ತು.

ಐದು ದಿನಗಳ ಹಿಂದೆ ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲಿಯೂ ಪಂಜಾಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮುಂಡಗೋಡ ಪಟ್ಟಣ ಮತ್ತು ತಾಲೂಕಿನ ಪಾಳಾ, ಮಳಗಿ, ಕಾತೂರ, ಚವಡಳ್ಳಿ, ಅಂದಲಗಿ, ಚಿಗಳ್ಳಿ, ಹುನಗುಂದ ಹಾಗೂ ಇಂದೂರ ಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಅದೇ ರೀತಿ ಈ ಬಾರಿಯೂ ಹೆಜ್ಜೆ ಮಜಲು ಸೇರಿದಂತೆ ವಿವಿಧ ಸಾಂಸ್ಕೃತಿಕ ವೇಷಗಳ ಮೆರವಣಿಗೆ ಹಾಗೂ ಹುಲಿ ವೇಷಧಾರಿಗಳ ಗರ್ಜನೆಯೊಂದಿಗೆ ಪಂಜಾಗಳ ಸವಾರಿ ಹೊರಡಿಸಲಾಗಿತ್ತು. ಗ್ರಾಮದ ಗಲ್ಲಿಗಲ್ಲಿಗಳಲ್ಲಿ ಹೊರಟ ಮೆರವಣಿಗೆಗೆ ಗ್ರಾಮಸ್ಥರೆಲ್ಲರೂ ಸಕ್ಕರೆ, ಬೆಲ್ಲ, ಊದು ಕೊಟ್ಟು ಪೂಜೆ ಸಲ್ಲಿಸಿದರು.

ಹುಲಿ ವೇಷಧಾರಿಗಳ ಗರ್ಜನೆ: ಹುಲಿ ವೇಷಧಾರಿಗಳ ಆಕರ್ಷಕ ಕುಣಿತ ಹಾಗೂ ಗರ್ಜನೆ ನೋಡುಗರ ಕಣ್ಣುಕುಕ್ಕುತ್ತದೆ. ಮೇಲ್ನೋಟಕ್ಕೆ ಇದೊಂದು ಮೋಜಿನ ಮಜಲು ಎನ್ನುವಂತೆ ಕಂಡರೂ ಇಂತಹ ಹುಲಿ ವೇಷಧಾರಿಗಳ ಕುಣಿತಗಳ ಹಿಂದೆ ಕುತೂಹಲಕಾರಿ ಕಥಾನಕಗಳಿವೆ ಎನ್ನುವುದು ತಿಳಿದು ಬರುತ್ತದೆ. ಆಶ್ಚರ್ಯವೆಂದರೆ, ಹೀಗೆ ಮೊಹರಂನಲ್ಲಿ ಹುಲಿವೇಷ ಹಾಕಿ ನರ್ತಿಸುವ ವೇಷಧಾರಿಗಳು ಬಹುತೇಕ ಹಿಂದೂಗಳೇ ಆಗಿರುತ್ತಾರೆ.

“ತಮಗೆ ರೋಗ ರುಜಿನ ಸೇರಿದಂತೆ ವಿವಿಧ ಜಾಢ್ಯಗಳು ಬಂದಾಗ ಅಲ್ಲಬ್ಬದಲ್ಲಿ ದೇವರಿಗೆ ಹರಕೆ ಹೋರುತ್ತೇವೆ. ನಮ್ಮ ಸಂಕಟಗಳು ಪರಿಹಾರವಾದಾಗ ನಾವು ಹರಕೆಯ ನಿಮಿತ್ತ ಹುಲಿ ವೇಷ ಹಾಕಿ ಪಾಂಜಾಗಳ ಮುಂದೆ ಕುಣಿದು ಹರಕೆ ತೀರಿಸುತ್ತೇವೆ ಎನ್ನುವುದು ಹುಲಿವೇಷಧಾರಿಯೊಬ್ಬರ ವಿವರಣೆ.

ಹುಲಿ ವೇಷ ಹಾಕಿಕೊಳ್ಳುವವರು ಮೊಹರಂ ಮೊದಲ ದಿನದಂದೇ ಪಂಜಾಗಳ ಪ್ರತಿಷ್ಠಾಪನೆಯ ಸಮಯಕ್ಕೆ ಚಿತ್ರಕಲಾವಿದರ ಬಳಿ ಹೋಗಿ ಬಣ್ಣದಿಂದ ಮೈಗೆಲ್ಲ ಹುಲಿಯ ಚಿತ್ತಾರಗಳನ್ನು ಬರೆಸಿಕೊಳ್ಳುತ್ತಾರೆ. ಹಳದಿ, ಕೆಂಪು, ಬಿಳಿ ಹಾಗೂ ಕಪ್ಪು ಬಣ್ಣಗಳಿಂದ ಹುಲಿಯ ಯಥಾವತ್‌ ವೇಷವನ್ನು ಕಲಾವಿದ ಹರಕೆಕಾರನ ಮೈಯಲ್ಲಿ ಚಿತ್ರಿಸುತ್ತಾನೆ. ಹೀಗೆ ಮೈಗೆ ಹುಲಿ ವೇಷ ಬರೆಸಿಕೊಂಡ ವೇಷಧಾರಿ ಸುಮಾರು ೬ ದಿನಗಳ ಕಾಲ ಅರೆಬೆತ್ತಲೆಯಾಗಿಯೇ ಸೇವೆ ಸಲ್ಲಿಸುತ್ತಾನೆ. ಈ ಆಚರಣೆ ಇವತ್ತಿಗೂ ಗ್ರಾಮೀಣ ಮಟ್ಟದಲ್ಲಿ ಪೂಜ್ಯ ಸ್ಥಾನ ಉಳಿಸಿಕೊಂಡಿದೆ.

ಮುಸ್ಲಿಮರೇ ಇಲ್ಲದ ಗ್ರಾಮದಲ್ಲಿ ಮೊಹರಂ: ಮುಸ್ಲಿಮರ ಒಂದೇ ಒಂದು ಮನೆ ಕೂಡ ಇಲ್ಲದಂತಹ ತಾಲೂಕಿನ ಬಸವನಕೊಪ್ಪ ಹಾಗೂ ಅಜ್ಜಳ್ಳಿ ಗ್ರಾಮದಲ್ಲಿ ಹಿಂದೂಗಳೇ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಕಳೆದ ಹಲವಾರು ವರ್ಷಗಳಿಂದ ಹಿಂದುಗಳೇ ೫ ದಿನಗಳ ಕಾಲ ಆಲೆ ದೇವರನ್ನು ಪ್ರತಿಷ್ಠಾಪಿಸಿ ಸಂಪ್ರದಾಯಬದ್ಧವಾಗಿ ಹಬ್ಬ ಆಚರಣೆ ಮಾಡುವುದು ವಿಶೇಷ.