ಸುಡುಬಿಸಿಲ ಧಗೆಯಲ್ಲಿ ಸಾರ್ವಜನಿಕರ ದಾಹ ತಣಿಸುವ ಒಳಕಾಡು

| Published : May 04 2024, 12:31 AM IST

ಸುಡುಬಿಸಿಲ ಧಗೆಯಲ್ಲಿ ಸಾರ್ವಜನಿಕರ ದಾಹ ತಣಿಸುವ ಒಳಕಾಡು
Share this Article
  • FB
  • TW
  • Linkdin
  • Email

ಸಾರಾಂಶ

ನೀರು ಮಾತ್ರವಲ್ಲದೇ ಅವರು ಕಳೆದೊಂದು ತಿಂಗಳಿಂದ ನಿತ್ಯವೂ ಸಾರ್ವಜನಿಕರಿಗೆ ಉಚಿತವಾಗಿ ಹಣ್ಣುಗಳ ತಂಪು ಪಾನೀಯ ವಿತರಿಸುತ್ತಿದ್ದಾರೆ. ಒಳಕಾಡು ಅವರ ಈ ಸೇವಾ ಕಾರ್ಯಕ್ಕೆ ಜೋಸ್ ಆಲೂಕ್ಕಾಸ್ ಆಭರಣ ಮಳಿಗೆ, ಶ್ರೀನಿಧಿ ಮೆಡಿಕಲ್ ಮತ್ತು ಫಾಸ್ಟ್ ನೆಟ್ ಆದಿಉಡುಪಿ ಸಹಕರಿಸುತ್ತಿವೆ.

ಕನ್ನಡಪ್ರಭ ವಾರ್ತೆ ಉಡುಪಿ

ಸುಡು ಬಿಸಿಲ ಧಗೆ, ಉಟ್ಟ ಬಟ್ಟೆ ಒದ್ದೆಯಾಗಿಸುವ ಸೆಖೆ, ತಾಪಾಮಾನ ಏರಿಕೆಯಿಂದ ಪದೇಪದೆ ಕಾಡುವ ಬಾಯಾರಿಕೆಯಿಂದ ಬಳಲುತ್ತಿರುವವರಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು, ಶುದ್ಧ ನೀರು ಮತ್ತು ತಂಪು ಪಾನೀಯಗಳ ಅರವಟ್ಟಿಗೆಯನ್ನು ನಗರದ ಮಾರುಥಿ ವೀಥಿಕಾದ ಆಯಾಕಟ್ಟಿನ ಸ್ಥಳದಲ್ಲಿ ಸ್ಥಾಪಿಸಿದ್ದಾರೆ.

ನೀರು ಮಾತ್ರವಲ್ಲದೇ ಅವರು ಕಳೆದೊಂದು ತಿಂಗಳಿಂದ ನಿತ್ಯವೂ ಸಾರ್ವಜನಿಕರಿಗೆ ಉಚಿತವಾಗಿ ಹಣ್ಣುಗಳ ತಂಪು ಪಾನೀಯ ವಿತರಿಸುತ್ತಿದ್ದಾರೆ. ಒಳಕಾಡು ಅವರ ಈ ಸೇವಾ ಕಾರ್ಯಕ್ಕೆ ಜೋಸ್ ಆಲೂಕ್ಕಾಸ್ ಆಭರಣ ಮಳಿಗೆ, ಶ್ರೀನಿಧಿ ಮೆಡಿಕಲ್ ಮತ್ತು ಫಾಸ್ಟ್ ನೆಟ್ ಆದಿಉಡುಪಿ ಸಹಕರಿಸುತ್ತಿವೆ.

ಪ್ರತಿದಿನ ನೇರಳೆ, ಪೇರಳೆ, ಅನಾನಸ್, ಶುಂಠಿ, ಲಿಂಬು, ಕಿತ್ತಳೆ, ಕೊಕ್ಕಂ, ನೆಲ್ಲಿ, ದ್ರಾಕ್ಷಿ, ಬೆಲ್ಲದ ಪಾನಕ ಹೀಗೆ ಮೊದಲಾದ ಪಾನೀಯಗಳನ್ನು ನುರಿತ ಪಾಕತಜ್ಞರಿಂದ ಸಿದ್ಧಪಡಿಸಿ ವಿತರಿಸುತ್ತಿದ್ದಾರೆ. ಮಣ್ಣಿನ ಹೂಜಿಗಳನ್ನು ಬಳಸಿಕೊಂಡು ಪ್ರಾಕೃತಿಕವಾಗಿ ಪಾನೀಯವನ್ನು ತಂಪಾಗಿಸುವ ವ್ಯವಸ್ಥೆಯನ್ನೂ ಮಾಡಿದ್ದಾರೆ. ನಿತ್ಯವೂ ನೂರಾರು ಮಂದಿ ಈ ಪಾನೀಯವನ್ನು ಕುಡಿದು ತಮ್ಮ ಬಾಯರಿಕೆ, ಆಯಾಸವನ್ನು ಪರಿಹರಿಸಿಕೊಳ್ಳುತಿದ್ದಾರೆ.

ಈ ಬೇಸಿಗೆ ಕಾಲದಲ್ಲಿ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗುವ ಪೌಷ್ಟಿಕಾಂಶಗಳನ್ನು ಬಹುವಿಧ ಹಣ್ಣಿನ ಪಾನೀಯಗಳ ಮೂಲಕ ಒದಗಿಸುತ್ತಿರುವ ಒಳಕಾಡು ಅವರ ಸೇವೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಮಳೆಗಾಲ ಆರಂಭ ಆಗುವವರೆಗೆ ಹಣ್ಣಿನ ತಂಪು ಪಾನೀಯ ವಿತರಣೆ ನಡೆಯಲಿದೆ ಎಂದು ಒಳಕಾಡು ಅವರು ಹೇಳಿದ್ದಾರೆ.