2 ವಿವಿಗಳು ಮಾಡುವಷ್ಟು ಕೆಲಸವನ್ನು ಹಳಕಟ್ಟಿ ಒಬ್ಬರೇ ಮಾಡಿದ್ದಾರೆ: ಎಚ್‌.ಕೆ.

| N/A | Published : Jul 03 2025, 01:47 AM IST / Updated: Jul 03 2025, 08:13 AM IST

2 ವಿವಿಗಳು ಮಾಡುವಷ್ಟು ಕೆಲಸವನ್ನು ಹಳಕಟ್ಟಿ ಒಬ್ಬರೇ ಮಾಡಿದ್ದಾರೆ: ಎಚ್‌.ಕೆ.
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಗಾಂಧೀಭವನದಲ್ಲಿ ನಡೆದ ಡಾ.ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆಯಲ್ಲಿ ಡಾ.ಫ.ಗು.ಹಳಕಟ್ಟಿ ಜೀವನ, ಸಾಧನೆ ಕುರಿತ ಸಾಕ್ಷ್ಯಚಿತ್ರ ಮತ್ತು ರಾವ್‌ಬಹದ್ದೂರ್‌ ಡಾ.ಫ.ಗು.ಹಳಕಟ್ಟಿ ಕೃತಿಯನ್ನು ಸಚಿವ ಎಚ್‌.ಕೆ.ಪಾಟೀಲ್, ಶಂಕರ ಬಿದರಿ ಅವರು ಲೋಕಾರ್ಪಣೆ ಮಾಡಿದರು.

 ಬೆಂಗಳೂರು :  ವಚನ ಪಿತಾಮಹ ಎಂದೇ ಖ್ಯಾತರಾದ ಡಾ.ಫ.ಗು.ಹಳಕಟ್ಟಿ ಅವರ ಮುಂದಿನ ಜನ್ಮದಿನದೊಳಗೆ ಮರಣೋತ್ತರವಾಗಿ ‘ಬಸವಶ್ರೀ’ ಪ್ರಶಸ್ತಿ ನೀಡಿದರೆ ಅವರಿಗೆ ಹೆಚ್ಚಿನ ಗೌರವ ನೀಡಿದಂತಾಗುತ್ತದೆ ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.

ಬುಧವಾರ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧೀ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಮತ್ತು ಶಂಕರ ಬಿದರಿ ಫೌಂಡೇಶನ್ ಆಯೋಜಿಸಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲಾತೀತವಾದ ಕಾಲ ಗರ್ಭದಲ್ಲಿ ಹುದುಗಿ ಹೋಗಿದ್ದ ವಚನ ಸಾಹಿತ್ಯವೆಂಬ ಅನರ್ಘ್ಯ ರತ್ನವನ್ನು ಶೋಧಿಸಿ, ಅನ್ವೇಷಿಸಿ ಸಂಗ್ರಹಿಸಿ, ಸಂಪಾದಿಸಿ ಪ್ರಕಟಿಸಿ ಸಂಶೋಧನಾ ಕ್ಷೇತ್ರಕ್ಕೆ ಫ.ಗು.ಹಳಕಟ್ಟಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ. ಎರಡು ವಿಶ್ವವಿದ್ಯಾನಿಲಯಗಳು ಮಾಡುವಂತ ಕೆಲಸವನ್ನು ಅವರೊಬ್ಬರೇ ಮಾಡಿದ್ದಾರೆ. ಅವರು ವಚನ ಸಾಹಿತ್ಯದ ಸಾರವನ್ನು ಕನ್ನಡ ನಾಡಿನ ಜನರಿಗೆ ಮೊಟ್ಟಮೊದಲು ತಿಳಿಸಿದವರು ಎಂದು ಶ್ಲಾಘಿಸಿದರು.

ಹಳಕಟ್ಟಿ ಅವರ ಮೂಲ ಪುಸ್ತಕಗಳನ್ನು ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಸಂರಕ್ಷಿಸಿ ಇಡಲಾಗಿದೆ. ವಿಜಯಪುರಕ್ಕೆ ಹೋಗುವಂತ ಸಂಶೋಧಕರು, ಪ್ರವಾಸಿಗರು ಒಳಗೊಂಡಂತೆ ಪ್ರತಿಯೊಬ್ಬರೂ ಕೇವಲ ಗೋಳಗುಮ್ಮಟ, ವೈದ್ಯಕೀಯ ಕಾಲೇಜು ನೋಡಿ ಬರುವುದಲ್ಲ. ಫ.ಗು.ಹಳಕಟ್ಟಿಯವರ ಸ್ಮಾರಕವನ್ನು ನೋಡಬೇಕು. ಹಳಕಟ್ಟಿ ಅವರು ಕೇವಲ ವಚನ ಸಾಹಿತ್ಯ ಸಂಗ್ರಹ, ಬರಹ, ಸಂಶೋಧನೆ, ಸಂಪಾದನೆ ಕ್ಷೇತ್ರದಲ್ಲಿ ಮಾತ್ರವಲ್ಲ ಜನರಿಗೆ ಏನು ಬೇಕಾಗಿತ್ತೋ ಆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಮರಾಠಿ ಪ್ರದೇಶದೊಳಗೆ ಕನ್ನಡ ಶಾಲೆಗಳನ್ನು ಕಟ್ಟಿಸಿದರು. ಕರ್ನಾಟಕ ಏಕೀಕರಣ ಆಗಭೇಕೆಂಬ ಬೀಜಾಂಕುರ ಆಗುವ ಮುನ್ನ ನವ ಕರ್ನಾಟಕ ಎಂಬ ಪತ್ರಿಕೆ ಶುರು ಮಾಡಿದ್ದರು ಎಂದು ಸ್ಮರಿಸಿದರು.

ಫ.ಗು.ಹಳಕಟ್ಟಿ ಅವರ ವ್ಯಕ್ತಿತ್ವ ಬಹುಮುಖವಾದದ್ದು. ಅವರ ಕಾರ್ಯಕ್ಷೇತ್ರ ತುಂಬಾ ವಿಸ್ತಾರವಾಗಿತ್ತು. ಅವರು ಯೋಜಿಸದ, ಸಾಧಿಸದ ಸಾರ್ವಜನಿಕ ಕ್ಷೇತ್ರವಿಲ್ಲ. ಅವರು ಹುಟ್ಟುಹಾಕಿದ ಹಲವಾರು ಸಂಘ, ಸಂಸ್ಥೆಗಳು ಇಂದಿಗೂ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿಷ್ಠಿತವಾಗಿವೆ. ಹಸಿವಿನಿಂದ ಬಳಲುವ ಜನರಿಗೆ ರಕ್ಷಣೆ ಕೊಡಬೇಕೆಂದು ಬರನಿರೋಧಕ ಸಮಿತಿಯನ್ನು ಸ್ಥಾಪನೆ ಮಾಡಿದರು ಎಂದ ಅವರು, ದಕ್ಷಿಣ ಕರ್ನಾಟಕ ಭಾಗದಲ್ಲಿ ಫ.ಗು.ಹಳಕಟ್ಟಿ ಅವರ ಕಾರ್ಯಗಳು ಇನ್ನೂ ಹೆಚ್ಚು ಪ್ರಚಾರ ಆಗಬೇಕು. ಅವರು ವಚನ ಸಾಹಿತ್ಯ ರಕ್ಷಣೆ, ಸಂಗ್ರಹ ಮತ್ತು ಪ್ರಚಾರಕ್ಕೆ ಮಾಡಿದಂತ ಸೇವೆ ಗುರುತಿಸಿ ಬಸವಶ್ರೀ ಪ್ರಶಸ್ತಿಯನ್ನು ಮರಣೋತ್ತರವಾಗಿ ಕೊಟ್ಟು ಗೌರವಿಸಬೇಕೆಂದರು.

ತಮ್ಮಣಪ್ಪ ಸ್ಫೂರ್ತಿ

ಶಂಕರ ಬಿದರಿ ಫೌಂಡೇಶನ್‌ ಅಧ್ಯಕ್ಷ ಶಂಕರ ಬಿದರಿ ಮಾತನಾಡಿ, ಫ.ಗು.ಹಳಕಟ್ಟಿ ಅವರ ಮಾವ ಚಿಕ್ಕೋಡಿ ತಮ್ಮಣಪ್ಪ ಅವರು ಮರಾಠ ಸಂಸ್ಥಾನಗಳ ಆಳ್ವಿಕೆ ಸಂದರ್ಭದಲ್ಲೇ ಕನ್ನಡಕ್ಕಾಗಿ ಹೋರಾಟ ನಡೆಸಿದ ಮೊದಲಿಗರು. ಫ.ಗು.ಹಳಕಟ್ಟಿ ಅವರಿಗೆ ಸ್ಫೂರ್ತಿಯೂ ಅವರೇ ಆಗಿದ್ದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ನಾಡೋಜ ಡಾ.ವೂಡೇ ಪಿ.ಕೃಷ್ಣ, ಡಾ.ಮಹಾಂತೇಶ ಬಿರಾದಾರ ಉಪಸ್ಥಿತರಿದ್ದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ.ಸೋಮಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು.

Read more Articles on