ಪ್ರತ್ಯೇಕ ಪಾಲಿಕೆಯ ಬೇಡಿಕೆಯು ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅಧಿಕಾರಾವಧಿಗೂ ಮುಂಚಿನದ್ದು. ಧಾರವಾಡ ಜನರ ಮುಗ್ಧತೆ, ರಾಜಕೀಯ ಉದಾಸೀನತೆಯಿಂದಾಗಿ ಈ ಪ್ರಸ್ತಾಪವು ವಿಧಾನಸೌಧದಲ್ಲಿ ವರ್ಷಗಳ ಕಾಲ ಮುಚ್ಚಿಹೋಗಿತ್ತು.
ಬಸವರಾಜ ಹಿರೇಮಠ
ಧಾರವಾಡ:ಧಾರವಾಡದ ನಾಲ್ಕು ದಶಕಗಳಷ್ಟು ಹಳೆಯ ಪ್ರತ್ಯೇಕ ಪಾಲಿಕೆಯ ಬೇಡಿಕೆಗೆ ರಾಜಕೀಯ ಗ್ರಹಣ ಹಿಡಿದಂತಿದೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ಶುರುವಾಗಿದ್ದರಿಂದ ಕಳೆದ ಹತ್ತು ತಿಂಗಳಿಂದ ರಾಜ್ಯಪಾಲರ ಅಂಗಳದಲ್ಲಿರುವ ಪ್ರತ್ಯೇಕ ಪಾಲಿಕೆಯ ಮಸೂದೆಯ ವಿಷಯವನ್ನು ವಿಧಾನಸೌಧದಲ್ಲಿ ಪ್ರಶ್ನಿಸಿ ರಾಜ್ಯಪಾಲರ ಅನುಮೋದನೆ ಪಡೆಯಲು ಪ್ರತ್ಯೇಕ ಪಾಲಿಕೆಯ ಹೋರಾಟಗಾರರು ಮುಂದಾಗಿದ್ದಾರೆ.ಪ್ರತ್ಯೇಕ ಪಾಲಿಕೆಯ ಬೇಡಿಕೆಯು ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅಧಿಕಾರಾವಧಿಗೂ ಮುಂಚಿನದ್ದು. ಧಾರವಾಡ ಜನರ ಮುಗ್ಧತೆ, ರಾಜಕೀಯ ಉದಾಸೀನತೆಯಿಂದಾಗಿ ಈ ಪ್ರಸ್ತಾಪವು ವಿಧಾನಸೌಧದಲ್ಲಿ ವರ್ಷಗಳ ಕಾಲ ಮುಚ್ಚಿಹೋಗಿತ್ತು. 2020ರಲ್ಲಿ ಸಮಾನ ಮನಸ್ಕ ನಾಗರಿಕರ ಗುಂಪೊಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಚಳವಳಿ ಮಾಡಿದ್ದು, ಪ್ರತ್ಯೇಕ ಪಾಲಿಕೆಗೆ ಜೀವ ಬಂತು.
ಧಾರವಾಡ ರಾಜ್ಯದ ಶಿಕ್ಷಣ ಕೇಂದ್ರವಾಗಿದ್ದರೂ ಮೂಲಭೂತ ಸೌಕರ್ಯ ಮತ್ತು ನಿರೀಕ್ಷಿತ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಪಾಲಿಕೆಯ ಕಚೇರಿ ಧಾರವಾಡದಲ್ಲಿದ್ದರೂ ಆಡಳಿತದ ಯಂತ್ರ ಮಾತ್ರ ಹುಬ್ಬಳ್ಳಿಗೆ ಕೇಂದ್ರೀಕೃತವಾಗಿದೆ. ಹೀಗಾಗಿ ಹು-ಧಾ ಮಹಾನಗರ ಪಾಲಿಕೆಯಲ್ಲಿ ಧಾರವಾಡ ಮಾತ್ರ ನಿರ್ಲಕ್ಷ್ಯವಾಗಿದ್ದು, ಪ್ರತ್ಯೇಕ ಪಾಲಿಕೆ ಮಾಡಿಕೊಡಿ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದು ಈಗ ಇತಿಹಾಸ.ಘೋಷಣೆ:
ಧಾರವಾಡ ಪ್ರತ್ಯೇಕ ಪಾಲಿಕೆಯ ಚಳವಳಿ ಸಮಿತಿಯ ಸದಸ್ಯರು ಕಳೆದ ಬೆಳಗಾವಿ ಅಧಿವೇಶನದ ಸಮಯದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಪಾಲಿಕೆ ಮಾಡುವಂತೆ ಒತ್ತಾಯಿಸಿದ್ದರು. ಕಾನೂನು ಸಚಿವ ಎಚ್.ಕೆ. ಪಾಟೀಲ್ ಮತ್ತು ಶಾಸಕರಾದ ವಿನಯ ಕುಲಕರ್ಣಿ ಮತ್ತು ಅರವಿಂದ ಬೆಲ್ಲದ ಬೆಂಬಲವು ಈ ಪ್ರಸ್ತಾಪಕ್ಕೆ ವೇಗ ನೀಡಿತ್ತು. ಅಂತಿಮವಾಗಿ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯನ್ನು ಸಚಿವ ಬೈರತಿ ಸುರೇಶ್ ಘೋಷಿಸಿದರು. ಈ ಪ್ರಸ್ತಾವನೆಯು ಸಚಿವ ಸಂಪುಟಕ್ಕೆ ತಲುಪಿ ಮಸೂದೆಯನ್ನು ಅನುಮೋದನೆಗೊಂಡಿತ್ತು. ಜತೆಗೆ ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಿತು. ಆದರೆ, ಕಳೆದ ಹತ್ತು ತಿಂಗಳಿಂದ ರಾಜ್ಯಪಾಲರ ಅಂಗಳದಲ್ಲಿರುವ ಮಸೂದೆಗೆ ಸಹಿಯೇ ಬೀಳುತ್ತಿಲ್ಲ ಎಂಬುದೇ ಹೋರಾಟಗಾರರ ಅಳಲು.ಏತಕ್ಕೆ ಈ ವಿಳಂಬ:
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ನೀಡುವುದರಿಂದ ಅಸ್ತಿತ್ವದಲ್ಲಿರುವ ಪರಿಷತ್ತು ವಿಸರ್ಜನೆಯಾಗಬಹುದು, ಇದರಿಂದಾಗಿ ಹೊಸ ಚುನಾವಣೆಗಳು ನಡೆಯಬಹುದು ಎಂದು ಬಿಜೆಪಿಯ ಕೆಲವು ಪಾಲಿಕೆ ಸದಸ್ಯರು ಭಯಪಡುತ್ತಿದ್ದಾರೆ. ಆದರೆ, ಅಂತಹ ಯಾವುದೇ ವಿಸರ್ಜನೆ ಪ್ರಶ್ನೆ ಬರುವುದಿಲ್ಲ. ಪಾಲಿಕೆ ಸದಸ್ಯರು ತಮ್ಮ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ನಗರಾಭಿವೃದ್ಧಿ ಕಾರ್ಯದರ್ಶಿಗಳು ಸಹ ಸ್ಪಷ್ಟಪಡಿಸಿದ್ದಾರೆ ಎಂದು ಪ್ರತ್ಯೇಕ ಪಾಲಿಕೆ ಹೋರಾಟಗಾರ ರವಿ ಮಾಳಗೇರ ಹೇಳುತ್ತಾರೆ.ಧಾರವಾಡ ನಗರ ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆ ಕಳೆದುಕೊಂಡಿದೆ ಮತ್ತು ಈಗ ಪ್ರತ್ಯೇಕ ಪಾಲಿಕೆಯಾಗದೇ ವಾರ್ಷಿಕವಾಗಿ ₹ 200 ಕೋಟಿ ಅಭಿವೃದ್ಧಿ ನಿಧಿ ಕಳೆದುಕೊಳ್ಳುತ್ತಿದೆ. ನಗರ ಬೆಳೆದಂತೆ ಅದಕ್ಕೆ ತುರ್ತಾಗಿ ಸುಧಾರಿತ ರಸ್ತೆ, ಒಳಚರಂಡಿ, ಉದ್ಯಾನವನ ಮತ್ತು ನಿರಂತರ ಕುಡಿಯುವ ನೀರಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಧಾರವಾಡಕ್ಕೆ ಬೇಕು ಪ್ರತ್ಯೇಕ ಪಾಲಿಕೆ ಎಂದವರು ಆಗ್ರಹಿಸುತ್ತಾರೆ.
ಚಳಿಗಾಲದ ಅಧಿವೇಶನದಲ್ಲಿ ಧಾರವಾಡ ಶಾಸಕರು ಪರಿಣಾಮಕಾರಿಯಾಗಿ ಈ ವಿಷಯದ ಬಗ್ಗೆ ಧ್ವನಿ ಎತ್ತುತ್ತಾರೆಯೇ ಮತ್ತು ದೀರ್ಘಕಾಲದಿಂದ ಬಾಕಿ ಇರುವ ಮಸೂದೆಗೆ ರಾಜ್ಯಪಾಲರ ಒಪ್ಪಿಗೆ ಪಡೆಯಲು ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಕ್ರೆಡಿಟ್ ವಾರ್...ಶಿಕ್ಷಣ ಇಲಾಖೆಯ ಅಪರ ಆಯುಕ್ತರಾಗಿದ್ದ, ಆಂದೋಲನ ಸಮಿತಿಯ ಅಧ್ಯಕ್ಷ ವೆಂಕಟೇಶ ಮಾಚಕನೂರ ಹೇಳುವಂತೆ, ಪ್ರತ್ಯೇಕ ಪಾಲಿಕೆಯ ಹೋರಾಟಗಾರರು ಈಗಾಗಲೇ ಮುಖ್ಯಮಂತ್ರಿ ಮತ್ತು ರಾಜ್ಯಪಾಲರನ್ನು ಭೇಟಿಯಾಗಿ ತ್ವರಿತ ಅನುಮೋದನೆಗೆ ಒತ್ತಾಯಿಸಿದ್ದೇವೆ. ಆದರೆ, ಈ ವರೆಗೆ ಯಾವುದೇ ಕ್ರಮವಾಗಿಲ್ಲ. ಸಾಕಷ್ಟು ರಾಜಕೀಯ ಮತ್ತು ಈ ವಿಷಯದಲ್ಲಿ ಕ್ರೆಡಿಟ್-ವಾರ್ ನಡೆಯುತ್ತಿದೆ. ಅದಕ್ಕಾಗಿಯೇ ಪ್ರಸ್ತಾವನೆಯು ಸ್ಥಗಿತಗೊಂಡಿದೆ. ಈ ನಿಟ್ಟಿನಲ್ಲಿ ಚಳಿಗಾಲದ ಅಧಿವೇಶನದಲ್ಲಿ ಸ್ಥಳೀಯ ಶಾಸಕರು ಮತ್ತೊಮ್ಮೆ ಪ್ರಶ್ನಿಸಬೇಕಿದೆ.