ಸಾರಾಂಶ
ಶಿವಮೊಗ್ಗ: ನಗರದೆಲ್ಲೆಡೆ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ-ಸಡಗರ ಮನೆ ಮಾಡಿದ್ದು, ಆಯುಧ ಪೂಜೆ ಹಿನ್ನೆಲೆ ಮಂಗಳವಾರ ಅಗತ್ಯವಾದ ಹೂವು-ಹಣ್ಣು, ಬೂದ ಗುಂಬಳ ಖರೀದಿ ಜೋರಾಗಿತ್ತು.
ಬುಧವಾರ ಆಯುಧ ಪೂಜೆ ಹಾಗೂ ಗುರುವಾರ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ ಕಂಡು ಬಂದಿದೆ. ಮಾರುಕಟ್ಟೆಯಲ್ಲೂ ಖರೀದಿ ಪ್ರಕ್ರಿಯೆ ಜೋರಾಗಿ ಸಾಗಿದೆ.ನವರಾತ್ರಿ ಆಚರಣೆಯ ಹಿನ್ನೆಲೆ ಹೂವಿನ ದರಗಳು ಹೆಚ್ಚಾಗಿದೆ. ಪ್ರತಿ ಕೆ.ಜಿ. ಕನಕಾಂಬರ 500 ರು., ಮಲ್ಲಿಗೆ 600 ರು., ಗುಲಾಬಿ 400 ರು., ಸೇವಂತಿಗೆ 400 ರು. ನಂತೆ ಮಾರಾಟವಾಗುತ್ತಿದೆ. ಆಯುಧ ಪೂಜೆಯ ದಿನ ಮನೆ, ವಾಹನ, ಅಂಗಡಿ, ಕಾರ್ಖಾನೆ ಬಳಿ ಒಡೆಯುವ ಬೂದುಗುಂಬಳ ಪ್ರತಿ ಕೆ.ಜಿಗೆ 40 ರು. ನಿಂದ ಗಾತ್ರದ ಆಧಾರದ ಮೇಲೆ ಒಂದಕ್ಕೆ 100 ರಿಂದ 200 ರು.ನಂತೆ ಮಾರಾಟವಾಗುತ್ತಿದೆ.ನಗರದ ಗಾಂಧಿ ಬಜಾರ್, ದುರ್ಗಿಗುಡಿ, ನೆಹರು ರಸ್ತೆ, ಬಿ.ಎಚ್.ರಸ್ತೆ, ಪೊಲೀಸ್ ಚೌಕಿ, ಗೋಪಾಳ, ವಿನೋಬನಗರ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿದ್ದವು. ತರಕಾರಿ, ದಿನಸಿ, ಆಲಂಕಾರಿಕ ವಸ್ತುಗಳು ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ಎಲೆ, ತೆಂಗಿನಕಾಯಿಯ ಖರೀದಿ ಜೋರಾಗಿತ್ತು.ಗೃಹ ಉಪಯೋಗಿ ವಸ್ತುಗಳ ಖರೀದಿ, ಆಭರಣ, ವಾಹನ, ಹೊಸ ಬಟ್ಟೆ ಖರೀದಿ ಹೆಚ್ಚಾಗಿರುವುದರಿಂದ ಮಾರಾಟ ಮಳಿಗೆಗಳಲ್ಲಿ ಭರ್ಜರಿ ವ್ಯಾಪಾರ ಸಾಗಿದೆ. ಪರ ಊರುಗಳಲ್ಲಿ ಕೆಲಸ ಮಾಡುತ್ತಿರುವವರು ಊರಿಗೆ ಹಿಂತಿರುಗುತ್ತಿರುವುದರಿಂದ ಬಸ್ಸು ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿತ್ತು.--------
ಬಾಕ್ಸ್-1ನಿರಂತರ ಪರಿಶ್ರಮದಿಂದ
ಜೀವನದಲ್ಲಿ ಉನ್ನತ ಸಾಧನೆಶಿವಮೊಗ್ಗ: ಜೀವನದಲ್ಲಿ ಉನ್ನತ ಸಾಧನೆ ಮಾಡಲು ನಿರಂತರ ಪರಿಶ್ರಮ ವಹಿಸುವುದು ಅತ್ಯಂತ ಅವಶ್ಯಕ ಎಂದು ಜಿಪಂ ಸಿಇಒ ಎನ್.ಹೇಮಂತ್ ಹೇಳಿದರು.ಕುವೆಂಪು ರಂಗಮಂದಿರದಲ್ಲಿ ಮಹಾನಗರ ಪಾಲಿಕೆ, ಸಮನ್ವಯ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಜ್ಞಾನ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಹಂತದಲ್ಲೇ ದೊಡ್ಡ ಕನಸುಗಳನ್ನು ಕಾಣಬೇಕು. ಅದಕ್ಕೆ ಬೇಕಾದ ಸಿದ್ಧತೆಯನ್ನು ಈಗಿನಿಂದಲೇ ಆರಂಭಿಸಬೇಕು. ಪೂರಕವಾಗಿ ಅಗತ್ಯವಿರುವ ತರಬೇತಿ ಮತ್ತು ಕೌಶಲಗಳನ್ನು ಪಡೆಯಬೇಕು ಎಂದು ತಿಳಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಾಧಕರ ಜೀವನದಿಂದ ಪ್ರೇರಣೆ ಪಡೆಯಬೇಕು. ನಿಮ್ಮ ಇಷ್ಟದ ಕ್ಷೇತ್ರವನ್ನು ಶಿಕ್ಷಣ ಹಂತದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಹಿರೋಗಳಾಗಬೇಕು ಎಂದರು.ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಲೈಫ್ ಇಸ್ ಬ್ಯೂಟಿಫುಲ್ ವಿಷಯ ಕುರಿತು ಉಪನ್ಯಾಸ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರೈತ ದುರ್ಗಪ್ಪ ಅಂಗಡಿ, ಕೌಶಲ್ಯ ಅಭಿವೃದ್ಧಿ ಅಧಿಕಾರಿ ಎಚ್.ಎಂ.ಸುರೇಶ್ , ಕಲಾ ದಸರಾ ಕಾರ್ಯದರ್ಶಿ ಕೆ.ಪಿ.ವಸಂತಕುಮಾರಿ , ಅಂತಾರಾಷ್ಟ್ರೀಯ ಈಜುಪಟು ಧ್ಯಾನ್ ಕಶ್ಯಪ್, ಉದ್ಯಮಿ ಸುಜಿತ್ ನಾಡಿಗ್ ಇತರರಿದ್ದರು.ಅಡುಗೆ ಸ್ಪರ್ಧೆ:
ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ದಸರಾ ಹಬ್ಬದ ಅಂಗವಾಗಿ ಮಂಗಳವಾರ ನಡೆದ ದಂಪತಿಗಳಿಂದ ಸಿರಿಧಾನ್ಯ ಬಳಸಿ ಅಡುಗೆ ಮಾಡುವ ಸ್ಪರ್ಧೆಯನ್ನು ವಿಧಾನ ಪರಿಷತ್ ಸದಸ್ಯೆ ಭಾರತೀಶೆಟ್ಟಿ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ದಂಪತಿಗಳಿಗೂ ಶುಭ ಹಾರೈಸಿದರು.
ವೇದಿಕೆಯಲ್ಲಿ ಖ್ಯಾತ ಕ್ಯಾಟರರ್ ಪ್ರಭಾಕರ್.ಎನ್.ಎಚ್., ಕಾರ್ಯದರ್ಶಿ ಕೃಷ್ಣಮೂರ್ತಿ, ಪಾಲಿಕೆ ಅಧಿಕಾರಿಗಳಾದ ವಸಂತ್ ಮತ್ತಿತರರಿದ್ದರು. 10ಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.