ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗದ ಚಾಲನೆಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ 6 ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಲಾಗಿರುವ ಅತ್ಯಾಧುನಿಕ ಸ್ಪೀಡ್ ರಾಡಾರ್ ಕ್ಯಾಮೆರಾಗಳು ಕಾರ್ಯಾಚರಣೆ ಆರಂಭಿಸಿವೆ.ಹೆದ್ದಾರಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರನ್ನು ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯಿಂದಲೇ ನೇರವಾಗಿ ಮಾನಿಟರ್ ಮಾಡಿ, ದಂಡ ವಿಧಿಸುವ ಮೂಲಕ ಈ ಅಪರಾಧಗಳನ್ನು ತಡೆಯುವುದು ಈ ಯೋಜನೆಯಾಗಿದೆ. ಸದ್ಯಕ್ಕೆ 6 ಕಡೆ ಕ್ಯಾಮೆರಾ ಅಳವಡಿಸಲಾಗಿದ್ದು, ಇನ್ನೂ 14 ಕಡೆಗಳಲ್ಲಿ ಕ್ಯಾಮೆರಾ ಅಳವಡಿಕೆಗೆ ಟೆಂಡರ್ ಆಗಿದ್ದು, ಶ್ರೀಘ್ರದಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದು ಪೊಲೀಸ್ ಇಲಾಖೆ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಈ ಹೈಟೆಕ್ ರಾಡಾರ್ ಕ್ಯಾಮೆರಾಗಳು ಕೇವಲ ಅತಿ ವೇಗವನ್ನು ಮಾತ್ರವಲ್ಲದೆ, ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವುದು, ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುವುದು, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಕೆ, ಒನ್-ವೇ ಅಥವಾ ತಪ್ಪು ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಮುಂತಾದ ಸಂಚಾರ ನಿಯಮ ಉಲ್ಲಂಘನೆಗಳನ್ನೂ ಪತ್ತೆಹಚ್ಚಲಿದೆ.

ಈ ಕ್ಯಾಮೆರಾಗಳು ಸಂಚಾರ ಉಲ್ಲಂಘನೆ ದೃಶ್ಯಗಳನ್ನು ನೇರವಾಗಿ ಕಂಟ್ರೋಲ್ ರೂಮ್‌ಗೆ ಕಳುಹಿಸುತ್ತದೆ. ಅಲ್ಲಿ ವಾಹನಗಳ ನಂಬರ್ ಪ್ಲೇಟ್‌ಗಳ ಮೂಲಕ ಮೂಲಕ ವಾಹನ ಚಾಲಕ-ಮಾಲೀಕರ ಮನೆಗೆ ಅಂಚೆ ಮೂಲಕ ದಂಡದ ಚಲನ್ ಗಳನ್ನು ಕಳುಹಿಸಲಾಗುತ್ತದೆ. ಚಲನ್ ಸ್ವೀಕರಿಸಿದ 7 ದಿನಗಳೊಳಗಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ದಂಡದ ಮೊತ್ತವನ್ನು ಪಾವತಿಸಬೇಕು.