ಪುಸ್ತಕಗಳನ್ನು ಓದುವುದರಿಂದ ನಮ್ಮ ಮನಸ್ಸಿಗೆ ಸುಖ-ಶಾಂತಿ, ನೆಮ್ಮದಿ ಪ್ರಾಪ್ತಿಯಾಗುವುದರೊಂದಿಗೆ ಮನೆಯ ವಾತಾವರಣವು ಬೆಳಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಪುಸ್ತಕಗಳನ್ನು ಓದುವುದರಿಂದ ನಮ್ಮ ಮನಸ್ಸಿಗೆ ಸುಖ-ಶಾಂತಿ, ನೆಮ್ಮದಿ ಪ್ರಾಪ್ತಿಯಾಗುವುದರೊಂದಿಗೆ ಮನೆಯ ವಾತಾವರಣವು ಬೆಳಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಭಿಪ್ರಾಯಪಟ್ಟಿದ್ದಾರೆ.ಚೇರಂಬಾಣೆಯ ಬೇಂಗ್‌ನಾಡ್ ಕೊಡವ ಸಮಾಜದಲ್ಲಿ ಆಯೋಜಿಸಿದ್ದ 10ನೇ ಕೊಡವ ಪುಸ್ತಕ ಪತ್ತಾಯ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳನ್ನು ಕೊಡವಾಮೆಯ ಪಥದಲ್ಲಿ ಬೆಳೆಸುವುದು ಒಂದು ಕರ್ತವ್ಯ ಅಥವಾ ಜವಾಬ್ದಾರಿಯಾಗಿಬಾರದು, ಇದೊಂದು ಜೀವನ ಕ್ರಮವಾಗಿರಬೇಕು. ಬಾಲ್ಯದಲ್ಲಿಯೇ ಬಾಳೋಪಾಟ್, ಕೊಡಗಿನ ಚರಿತ್ರೆ, ಪೂರ್ವಜರ ಸಾಧನೆಗಳು ಹಾಗೂ ಸಂಸ್ಕೃತಿಯ ಬಗ್ಗೆ ಅರಿತಿದ್ದರೆ ಭವಿಷ್ಯದಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ದಕ್ಷತೆಯ ಬದುಕು ರೂಪುಗೊಳ್ಳಲು ಕಾರಣವಾಗುವುದು ಎಂದರು.ನಿವೃತ್ತ ಮುಖ್ಯೋಪಾಧ್ಯಾಯ ಅಯ್ಯಂಡ ರಾಮಕೃಷ್ಣ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯ ಪುಸ್ತಕ ಪತ್ತಾಯ ಕೇವಲ ಪುಸ್ತಕಗಳ ಭಂಡಾರವಲ್ಲ, ಇದೊಂದು ಜ್ಞಾನ ಭಂಡಾರ. ಸರಸ್ವತಿಯು ನೆಲೆಸುವ ಸ್ಥಳವೆಂದರು.
ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಹಾಗೂ ಸದಸ್ಯರ ಈ ಒಂದು ವಿನೂತನ ಯೋಜನೆಯು ಮಹತ್ವದ್ದಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.ಕೊಡವ ಭಾಷೆ-ಸಾಹಿತ್ಯ ಹಾಗೂ ಈ ನೆಲ-ಜಲದ ರಕ್ಷಣೆ-ಪೋಷಣೆ ಹಾಗೂ ಬೆಳವಣಿಯಲ್ಲಿ ಕೊಡವ ಪತ್ರಿಕೆಗಳ ಕೊಡುಗೆ ಮಹತ್ವದ್ದಾಗಿದೆ ಎಂದರು. ಕೊಡವ ಭಾಷೆಯಲ್ಲಿ ತನ್ನದೇ ಆದ ಹಲವು ಶಬ್ದಗಳಿದ್ದು ಅಂತಹವುಗಳ ಸದ್ಬಳಕೆ ಆಗಬೇಕಾಗಿದೆ. ಅವೆಲ್ಲವೂ ಪುಸ್ತಕಗಳ ಓದಿನಿಂದ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಬೇಂಗ್‌ನಾಡ್ ಕೊಡವ ಸಮಾಜ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ ತಮ್ಮ ನುಡಿಗಳಲ್ಲಿ, ಕೊಡವ ಸಾಹಿತ್ಯ ಅಕಾಡೆಮಿಯಿಂದ ಸರಾಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು, ಪುಸ್ತಕ ಪತ್ತಾಯವು ಅಗ್ರಸ್ಥಾನದ್ದಾಗಿದೆ. ಬೇಂಗ್‌ನಾಡ್ ಕೊಡವ ಸಮಾಜದಲ್ಲಿ ಸ್ಥಾಪಿಸಿರುವ ಪುಸ್ತಕ ಪತ್ತಾಯದ ಪ್ರಯೋಜನವನ್ನು ಈ ನಾಡಿನ ಜನತೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದರು.ನಿವೃತ್ತ ಶಿಕ್ಷಕಿ ಬಡ್ಡಿರ ನಳಿನಿ ಪೂವಯ್ಯ ಮಾತನ್ನಾಡಿ, ಸ್ವಗೃಹದಲ್ಲಿ ಒಂದು ಕೊಡವ ಪುಸ್ತಕ ಪತ್ತಾಯವನ್ನು ತೆರೆದುಕೊಳ್ಳಲು ಆಕಾಂಕ್ಷಿಯಾಗಿದ್ದೇನೆ ಎಂದರು.
ನಾಪಂಡ, ಚೀಯಬೆರ, ಕೊಟ್ಟ್ಕತ್ತಿರ, ಮಣವಟ್ಟಿರ, ತೇಲಪಂಡ ಕುಟುಂಬಗಳಿಗೆ ಸಂಬಂಧಪಟ್ಟ ಕುಟುಂಸ್ಥರ ಆಗಮನದಲ್ಲಿ ದುಡಿಗಳನ್ನು ವಿತರಿಸಲಾಯಿತು. ಕೊಡವ ಪುಸ್ತಕ ಪತ್ತಾಯ ಸ್ಥಾಪನೆಯ ಪ್ರಯುಕ್ತ ಹತ್ತು ಸಾವಿರ ಮೊತ್ತದ ಚೆಕ್ಕನ್ನು ಅಕಾಡೆಮಿ ಅಧ್ಯಕ್ಷರಿಗೆ ನೀಡಿದ ಮೇರೆಗೆ ಪತ್ತಾಯದ ನೋಂದಣಿ ಪತ್ರವನ್ನು ಬೇಂಗ್‌ನಾಡ್ ಕೊಡವ ಸಮಾಜ ಅಧ್ಯಕ್ಷರಿಗೆ ನೀಡಲಾಯಿತು.ಅಕಾಡೆಮಿ ಸದಸ್ಯ ನಾಪಂಡ ಸಿ. ಗಣೇಶ್ ಸ್ವಾಗತಿಸಿದರು. ಬೇಂಗ್‌ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸದಸ್ಯರು ಪ್ರಾರ್ಥಿಸಿದರು. ಅಕಾಡೆಮಿಯ ಸದಸ್ಯರುಗಳಾದ ಕಂಬೆಯಂಡ ಡೀನಾ ಬೋಜಣ್ಣ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ಕುಡಿಯರ ಎಂ. ಕಾವೇರಪ್ಪ, ಪಾನಿಕುಟ್ಟಿರ ಕೆ. ಕುಟ್ಟಪ್ಪ, ಚೊಟ್ಟೆಯಂಡ ಸಂಜು ಕಾವೇರಪ್ಪ, ಬೇಂಗ್‌ನಾಡ್ ತಕ್ಕರಾದ ತೇಲಪಂಡ ನಂದ, ಸಮಾಜ ಆಡಳಿತ ಮಂಡಳಿ ನಿರ್ದೇಶಕರು, ಸದಸ್ಯರು, ಪೊಮ್ಮಕ್ಕಡ ಕೂಟದ ಸದಸ್ಯೆಯರು ಹಾಜರಿದ್ದು ನಾಪಂಡ ಸಿ. ಗಣೇಶ್ ವಂದಿಸಿದರು.
