ಮಂಗಳೂರು: ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆ, ಗ್ರಾಹಕ ಸ್ನೇಹಿ ಸೇವೆಗಳು ಹಾಗೂ ಸಿಬ್ಬಂದಿಗಳ ಸಮರ್ಪಿತ ಕಾರ್ಯನಿರ್ವಹಣೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದೆಅ ಎಂದು ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ನಗರದ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ನಡೆದ ಬ್ಯಾಂಕಿನ ಸಿಬ್ಬಂದಿಗಳಿಗೆ ಗಿಫ್ಟ್ ಕೂಪನ್ ವಿತರಣೆ ಹಾಗೂ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ರಾಜ್ಯದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಠೇವಣಿ ಸಂಗ್ರಹಣೆ, ಸಾಲ ವಿತರಣೆ ಹಾಗೂ ಸಾಲ ಮರುಪಾವತಿ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ಗೆ ಸಮಾನವಾಗಿ ಬೆಳೆಯುವ ಗುರಿ ಹೊಂದಿದೆ ಎಂದರು.ಬ್ಯಾಂಕಿನ 113 ಶಾಖೆಗಳಲ್ಲಿ ಅತ್ಯಾಧುನಿಕ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದ ಗ್ರಾಹಕರಿಗೆ ವೇಗವಾದ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಗ್ರಾಹಕರ ವಿಶ್ವಾಸ ಹಾಗೂ ಸಿಬ್ಬಂದಿಗಳ ಪರಿಶ್ರಮದಿಂದ ಬ್ಯಾಂಕ್ ರಾಷ್ಟ್ರಮಟ್ಟದಲ್ಲೂ ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.

ಡಿಜಿಟಲ್ ಸೇವೆಗಳಿಗೆ ಹೆಚ್ಚಿನ ಒತ್ತು :

ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ವಿವಿಧ ರೀತಿಯ ಸಾಲ ಸೌಲಭ್ಯಗಳು, ಠೇವಣಿಗಳ ಮೇಲೆ ಆಕರ್ಷಕ ಬಡ್ಡಿದರ, ಸುರಕ್ಷಿತ ಲಾಕರ್ ವ್ಯವಸ್ಥೆ, ಆರ್‌ಟಿಜಿಎಸ್/ನೆಫ್ಟ್ ಸೇರಿದಂತೆ ಸಂಪೂರ್ಣ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿದೆ. ಜೊತೆಗೆ ಯುಪಿಐ ಮತ್ತು ಐಎಂಪಿಎಸ್ ಸೇವೆಗಳ ಪರಿಚಯದ ಮೂಲಕ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ ಎಂದು ತಿಳಿಸಿದರು. ಬ್ಯಾಂಕಿನ ವಿವಿಧ ಯೋಜನೆಗಳು ಹಾಗೂ ಸೇವೆಗಳ ಕುರಿತು ಸಿಬ್ಬಂದಿಗಳು ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡಬೇಕು. ಇದರಿಂದ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆದು ಬ್ಯಾಂಕಿನ ಅಭಿವೃದ್ಧಿಗೂ ನೆರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.


ಸತತ ಐದನೇ ಬಾರಿ ಎಪಿವೈ ರಾಷ್ಟ್ರೀಯ ಪ್ರಶಸ್ತಿ : ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಅಟಲ್ ಪಿಂಚಣಿ ಯೋಜನೆ (ಎಪಿವೈ)ಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ಸತತ ಐದು ವರ್ಷಗಳ ಕಾಲ (2021-22ರಿಂದ 2025-26ರವರೆಗೆ) ಪ್ರತಿಷ್ಠಿತ ‘ಎಪಿವೈ ರಾಷ್ಟ್ರೀಯ ಪ್ರಶಸ್ತಿ’ ಲಭಿಸಿರುವುದು ಸಿಬ್ಬಂದಿಗಳ ಪ್ರಾಮಾಣಿಕ ಸೇವೆಗೆ ಸಾಕ್ಷಿಯಾಗಿದೆ ಎಂದು ಡಾ. ರಾಜೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಸಿಬ್ಬಂದಿಗಳ ಪರವಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಹಾಗೂ ಮಹಾಪ್ರಬಂಧಕ ಸುನಿಲ್ ಕುಮಾರ್ ಹೊಳ್ಳ ಅವರು ಅಧ್ಯಕ್ಷರಿಂದ 10,000 ರು. ಮೌಲ್ಯದ ಗಿಫ್ಟ್ ಕೂಪನ್ ಸ್ವೀಕರಿಸಿದರು. 2025-26ನೇ ಸಾಲಿನಲ್ಲಿ ತಾಲೂಕು ಮಟ್ಟದಲ್ಲಿ ಸಮಗ್ರ ಸಾಧನೆ ತೋರಿದ ಶಾಖಾ ವ್ಯವಸ್ಥಾಪಕರು, ವೈಯಕ್ತಿಕ ಠೇವಣಿ ಸಂಗ್ರಹಣೆ, ನೇರ ಸಾಲ ವಿತರಣೆ ಹಾಗೂ ಅನುತ್ಪಾದಕ ಸಾಲದ ಪ್ರಮಾಣವನ್ನು ಶೂನ್ಯ ಮಟ್ಟಕ್ಕೆ ತರುವಲ್ಲಿ ಸಾಧನೆ ಮಾಡಿದ ಸಿಬ್ಬಂದಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೋಟ್ಟು, ದೇವಿಪ್ರಸಾದ್ ಶೆಟ್ಟಿ ಬೆಳಪು, ಸದಾಶಿವ ಉಳ್ಳಾಲ್, ಎಸ್.ಬಿ. ಜಯರಾಮ್ ರೈ, ಎಂ. ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ಜೈರಾಜ್ ಬಿ. ರೈ, ರಾಜೇಶ್ ರಾವ್, ಎಸ್.ಎನ್. ಮನ್ಮಥ ಹಾಗೂ ಕುಶಾಲಪ್ಪ ಗೌಡ ಇದ್ದರು.

ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಮಹಾಪ್ರಬಂಧಕ ಸುನಿಲ್ ಕುಮಾರ್ ಹೊಳ್ಳ ವಂದಿಸಿದರು. ರಾಜೀವ್ ಕೆ. ನಿರೂಪಿಸಿದರು.