ಟಿ.ಎಸ್.ಸತ್ಯಾನಂದ ವಕೀಲರ ಸಂಘದ ನೂತನ ಸಾರಥಿ

| Published : Oct 28 2025, 12:03 AM IST

ಸಾರಾಂಶ

ಮಂಡ್ಯ ವಕೀಲರ ಸಂಘದ ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಟಿ.ಎಸ್.ಸತ್ಯಾನಂದ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ತಮ್ಮ ಎದುರಾಳಿ ಜಿ.ಮರೀಗೌಡರ ವಿರುದ್ಧ ೧೨೪ ಮತಗಳ ಅಂತರದಿಂದ ಗೆಲುವು ಸಾಧಿಸಿ ಸಂಘದ ನೂತನ ಸಾರಥಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಕೀಲರ ಸಂಘದ ಕಾರ್ಯಕಾರಿ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಟಿ.ಎಸ್.ಸತ್ಯಾನಂದ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ತಮ್ಮ ಎದುರಾಳಿ ಜಿ.ಮರೀಗೌಡರ ವಿರುದ್ಧ ೧೨೪ ಮತಗಳ ಅಂತರದಿಂದ ಗೆಲುವು ಸಾಧಿಸಿ ಸಂಘದ ನೂತನ ಸಾರಥಿಯಾಗಿದ್ದಾರೆ.

ಚುನಾವಣೆಯಲ್ಲಿ ಟಿ.ಎಸ್.ಸತ್ಯಾನಂದ ೩೯೦ ಮತಗಳನ್ನು ಪಡೆದರೆ, ಜಿ.ಮರೀಗೌಡ ೨೬೬ ಮತಗಳು, ಎ.ಪುಷ್ಪಾವತಿ ೫೨ ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನದ ಕಣದಲ್ಲಿದ್ದ ಎಸ್.ದೇವರಾಜು ೪೬೦ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ, ಗೌರೀಶ್ ೨೨೨ ಮತಗಳನ್ನು ಪಡೆದು ಸೋಲು ಕಂಡರು.

ಪ್ರಧಾನ ಕಾರ್ಯದರ್ಶಿ ರೇಸ್‌ನಲ್ಲಿದ್ದ ಬಿ.ಸತೀಶ್ ೪೧೬ ಮತಗಳೊಂದಿಗೆ ವಿಜಯಮಾಲೆ ಧರಿಸಿದರೆ, ಉಮೇಶ್‌ಚಂದ್ರ ೨೯೦ ಮತಗಳನ್ನು ಪಡೆದು ಪರಾಜಿತರಾದರು. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಂದ್ರಕಲಾ ೩೫೮ ಮತಗಳೊಂದಿಗೆ ವಿಜಯಿಯಾದರು. ಎಂ.ಜಯಲಕ್ಷ್ಮೀ ೧೮೦, ಹೆಚ್.ಕೆ.ಸೀಮಾ ೧೬೩ ಮತಗಳೊಂದಿಗೆ ಸೋಲನುಭವಿಸಿದರು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆ.ಶಂಕರ ೩೪೧ ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಶಿವಕಾಳೇಗೌಡ ೨೪೬ ಹಾಗೂ ಎಂ.ಟಿ.ಆನಂದ ೧೧೧ ಮತಗಳನ್ನು ಪಡೆಯುವುದಕ್ಕೆ ಶಕ್ತರಾದರು.

ಹಿರಿಯ ನಿರ್ದೇಶಕರ ಸ್ಥಾನಕ್ಕೆ ಕೆ.ಎನ್.ಯೋಗಾನಂದ-೩೮೯, ಕೆ.ಗೀತಾ (ಮಹಿಳಾ ಮೀಸಲು)- ೪೬೩, ಜಿ.ಪಿ.ಎಸ್.ಶೋಭಾ (ಮಹಿಳಾ ಮೀಸಲು) ೩೮೨ ಆಯ್ಕೆಯಾದರೆ, ಕಿರಿಯ ನಿರ್ದೇಶಕರ ಸ್ಥಾನಕ್ಕೆ ಯು.ಸಿ.ಜಯಂತ್‌ಗೌಡ -೪೦೨, ಹೆಚ್.ಬಿ.ಶರತ್‌ಬಾಬು- ೩೪೬, ಸ್ಮಿತಾ (ಮಹಿಳಾ ಮೀಸಲು)-೪೩೬ ಮತಗಳನ್ನು ಪಡೆದು ಆಯ್ಕೆಯಾದರು.

ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಸಂಘದ ಪದಾಧಿಕಾರಿಗಳು ಪಟಾಕಿ ಸಿಡಿಸಿ, ಬಾಣ-ಬಿರುಸುಗಳನ್ನು ಹಾರಿಸಿ ವಿಜಯೋತ್ಸವ ಆಚರಿಸಿದರು. ಗೆದ್ದ ಅಭ್ಯರ್ಥಿಗಳ ಪರವಾಗಿ ಜೈಕಾರ ಕೂಗಿದರು. ಹೂಮಾಲೆ ಹಾಕಿ ಸಿಹಿ ತಿನ್ನಿಸಿ ಅಭಿನಂದಿಸಿದರು. ಚುನಾವಣಾಧಿಕಾರಿಯಾಗಿ ಜಿ.ಕೆ.ಶಿವಕುಮಾರ್ ಕಾರ್ಯನಿರ್ವಹಿಸಿದರು.ವಕೀಲರ ಸಂಘದ ಅಧ್ಯಕ್ಷನಲ್ಲ, ಸೇವಕ- ಟಿ.ಎಸ್.ಸತ್ಯಾನಂದ

ನಾನು ವಕೀಲರ ಸಂಘದ ಅಧ್ಯಕ್ಷನಾಗಿ ಕೆಲಸ ಮಾಡದೆ ಸಂಘದ ಸೇವಕನ ರೀತಿಯಲ್ಲಿ ಕೆಲಸ ಮಾಡುತ್ತೇನೆ. ನನಗೆ ಎಲ್ಲ ವಕೀಲರೂ ಸಮಾನರೇ. ನಾನು ಯಾರನ್ನೂ ದ್ವೇಷ ಮಾಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಟಿ.ಎಸ್.ಸತ್ಯಾನಂದ ತಿಳಿಸಿದರು.

ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕೀಲರು ವೃತ್ತಿ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು. ಇದು ನನ್ನ ಗೆಲುವಲ್ಲ, ನಿಮ್ಮ ಗೆಲುವು. ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಸಂಘದ ಅಭಿವೃದ್ಧಿ ಸಾಧ್ಯವಾಗಲಿದೆ. ನನ್ನನ್ನು ರಾಜಕೀಯಕ್ಕೆ ಕರೆತಂದ ಮಹಾನ್ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ. ಅವರ ಹೆಸರಿನಲ್ಲೊಂದು ಕೊಡುಗೆ ನೀಡಬೇಕೆಂಬುದು ನನ್ನ ದೊಡ್ಡ ಕನಸು. ವಕೀಲರ ಭವನವನ್ನು ಎಸ್.ಎಂ.ಕೃಷ್ಣರವರ ಹೆಸರಿನಲ್ಲಿ ನಿರ್ಮಿಸುವ ನನ್ನ ಮಹತ್ವಾಕಾಂಕ್ಷೆ ಯೋಜನೆಗೆ ಎಲ್ಲರ ಸಹಕಾರವಿರುವುದಾಗಿ ಭಾವಿಸಿದ್ದೇನೆ. ಸಂಘದ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಚುರುಕುಗೊಳಿಸಿ ಉತ್ತರೋತ್ತರವಾಗಿ ಅಭಿವೃದ್ಧಿಪಡಿಸುವುದಾಗಿ ಹೇಳಿದರು.