ಈ ಬಾರಿ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಮಾದ ಉಂಟಾಗಿದೆ ಎಂಬ ರೈತರು ಮತ್ತು ಜನಪ್ರತಿನಿಧಿಗಳು ತೀವ್ರ ಅಸಮಾಧಾನ ಹೊರ ಹಾಕಿದ್ದರು. ಈ ರೀತಿಯ ಪ್ರಮಾದ ಯಾಕೆ ಆಯಿತು ಎಂಬ ಪ್ರಶ್ನೆಯ ಬೆನ್ನಲ್ಲೇ ಇಲ್ಲೊಂದು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೂರ್ಖತನದ ಕೆಲಸ ಬಯಲಾಗಿದೆ!

ಗೋಪಾಲ್‌ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಬಾರಿ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಜಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಮಾದ ಉಂಟಾಗಿದೆ ಎಂಬ ರೈತರು ಮತ್ತು ಜನಪ್ರತಿನಿಧಿಗಳು ತೀವ್ರ ಅಸಮಾಧಾನ ಹೊರ ಹಾಕಿದ್ದರು. ಈ ರೀತಿಯ ಪ್ರಮಾದ ಯಾಕೆ ಆಯಿತು ಎಂಬ ಪ್ರಶ್ನೆಯ ಬೆನ್ನಲ್ಲೇ ಇಲ್ಲೊಂದು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೂರ್ಖತನದ ಕೆಲಸ ಬಯಲಾಗಿದೆ!

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಸಮರ್ಪಕ ಜಾರಿಯಲ್ಲಿನ ಲೆಕ್ಕಾಚಾರಕ್ಕೆ ಮಳೆ ಮಾಪಕವೇ ದೊಡ್ಡ ವ್ಯವಸ್ಥೆ. ಬಯಲಲ್ಲಿ ಇದ್ದು, ಬೀಳುವ ಪ್ರತಿ ಹನಿ ಮಳೆಯನ್ನೂ ಲೆಕ್ಕಾಚಾರ ಮಾಡಿಕೊಡಬೇಕಾದ ಮಳೆ ಮಾಪಕಕ್ಕೆ ಕೋಟೆ ಕಟ್ಟಿ, ಮಾಡು ಮಾಡಿ ದೇವರ ಮೂರ್ತಿಯಂತೆ ಪ್ರತಿಷ್ಠಾಪಿಸಿದ ಗ್ರಾ.ಪಂ. ಅಧಿಕಾರಿಗಳು ಈ ಭಾಗದಲ್ಲಿ ಒಂದೂ ಹನಿ ಮಳೆ ಬಿದ್ದಿಲ್ಲ ವರದಿ ಬರುವಂತೆ ಮಾಡಿದ್ದಾರೆ. ಇಂತಹ ಹಲವು ಅಪಸವ್ಯಗಳೇ ಯೋಜನೆ ಜಾರಿಯಲ್ಲಿ ದೋಷ ಉಂಟಾಗಲು ಕಾರಣವಾಗಿದೆ.

ತೀರ್ಥಹಳ್ಳಿ ತಾಲೂಕಿನ ಹುಂಚದಕಟ್ಟೆ ಗ್ರಾಮದಲ್ಲಿಯೇ ಈ ಮಳೆ ಮಾಪಕಕ್ಕೆ ಮಾಡು ಮಾಡಿರುವುದು!

ಬಹುಶಃ ಈ ಮಾಪನ ಮಳೆ ಅಳೆಯುತ್ತದೆ ಎಂಬ ಪ್ರಾಥಮಿಕ ತಿಳುವಳಿಕೆಯೂ ಇಲ್ಲದ ಅಧಿಕಾರಿಗಳು ಈ ಮಾಪಕ ಹಾಳಾಗಬಾರದು ಎಂಬ ‘ಕಾಳಜಿ’ಯಿಂದ ಈ ಮಾಪಕಕ್ಕೆ ಮಳೆ ಮಾಡು ಮಾಡಿರಬಹುದು!

ಈ ಮಳೆ ಮಾಪಕ ನೀಡಿದ ವರದಿಯನ್ನು ಆಧರಿಸಿಯೇ ಈ ಭಾಗದಲ್ಲಿ ಬೆಳೆ ವಿಮೆ ನೀಡಲಾಗಿದೆ. ಬಹುಶಃ ಇತರ ಕಡೆಗಳಲ್ಲಿಯೂ ಇಂತಹದೇ ಕೆಲಸ ಅಥವಾ ಇದೇ ರೀತಿಯ ಅಸಮರ್ಪಕ ಮಳೆ ಮಾಪಕವೂ ಕಾರಣವಾಗಿದೆ.

ಕಳೆದ ಹಲವು ವರ್ಷಗಳಿಂದ ಹವಾಮಾನ ಆಧಾರಿತ ವಿಮೆ ಯೋಜನೆಯಡಿ ದೊಡ್ಡ ಮೊತ್ತದ ಹಣ ಪಡೆದು ಉಂಟಾದ ನಷ್ಟವನ್ನು ಅಲ್ಪಸ್ವಲ್ಪವಾದರೂ ಭರಿಸುವ ವ್ಯವಸ್ಥೆ ಬಂತಲ್ಲ ಎಂಬ ಸಮಾಧಾನ ರೈತರಲ್ಲಿ ಇತ್ತು. ಕಟ್ಟಿದ ಪ್ರೀಮಿಯಂ ಹಣಕ್ಕೆ ಮೋಸವಿಲ್ಲ ಎಂಬ ಸಮಾಧಾನವೂ ಇತ್ತು. ಆದರೆ ಈ ಬಾರಿ ಬಹುತೇಕ ಎಲ್ಲ ಭಾಗದಲ್ಲಿಯೂ ಅತ್ಯಂತ ಕನಿಷ್ಟ ಮೊತ್ತದ ಹಣ ಜಮೆಯಾಗಿದ್ದು, ಇದು ರೈತರಲ್ಲಿ ಆಕ್ರೋಶ ಮನೆ ಮಾಡಿತ್ತು. ಈ ವ್ಯವಸ್ಥೆಯನ್ನು ಪುನರ್‌ ಪರಿಶೀಲಿಸಬೇಕೆಂಬ ಒತ್ತಾಯವೂ ಕೇಳಿ ಬಂದಿತ್ತು. ಇಂತಹ ಸಮಯದಲ್ಲಿಯೇ ಅಧಿಕಾರಿಗಳ ಈ ಕೆಲಸ ಬಯಲಾಗಿದೆ!.