ಯುವ ಪೀಳಿಗೆ ಬಹುಬೇಗ ದುಶ್ಚಟಕ್ಕೆ ಒಳಗಾಗುತ್ತಿದೆ: ಎಸ್.ಡಿ.ಬೆನ್ನೂರ್

| Published : Oct 26 2025, 02:00 AM IST

ಸಾರಾಂಶ

ದೊಡ್ಡ, ದೊಡ್ಡ ನಟರು ಸೇರಿದಂತೆ ಸೆಲೆಬ್ರೆಟಿಗಳಿಂದ ಮಾದಕ ವಸ್ತುಗಳ ಉತ್ಪನ್ನಗಳ ಬಗ್ಗೆ ಜಾಹಿರಾತು ನೀಡಿ ಯುವ ಸಮುದಾಯ ಇಂತ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತ. ಇದನ್ನು ತಪ್ಪಿಸಲು ಪ್ರಾರಂಭದಲ್ಲಿ ಮಕ್ಕಳಿಗೆ ಸಿಗರೇಟು, ಬೀಡಿ ಮತ್ತು ತಂಬಾಕು ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಅಗತ್ಯವಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಂಬಾಕು ಹಾಗೂ ನಿಕೋಟಿನ್ ಉದ್ಯಮಗಳ ಆಕರ್ಷಕ ಉತ್ಪನ್ನಗಳ ಜಾಹಿರಾತಿಗೆ ಯುವ ಪೀಳಿಗೆ ಮಾರು ಹೋಗಿ ಬಹು ಬೇಗ ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ನೇರಳಕೆರೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಅರಕೆರೆ ಜಂಟಿಯಾಗಿ ತಂಬಾಕು ಮುಕ್ತ ಯುವ ಅಭಿಯಾನ ಹಾಗೂ ಕುಷ್ಟರೋಗ ಪತ್ತೆ ಹಾಗೂ ಚಿಕಿತ್ಸೆ ಆಂದೋಲನದ ಅಂಗವಾಗಿ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೊಡ್ಡ, ದೊಡ್ಡ ನಟರು ಸೇರಿದಂತೆ ಸೆಲೆಬ್ರೆಟಿಗಳಿಂದ ಮಾದಕ ವಸ್ತುಗಳ ಉತ್ಪನ್ನಗಳ ಬಗ್ಗೆ ಜಾಹಿರಾತು ನೀಡಿ ಯುವ ಸಮುದಾಯ ಇಂತ ದುಷ್ಚಟಗಳಿಗೆ ಬಲಿಯಾಗುತ್ತಿರುವುದು ದುರಂತ. ಇದನ್ನು ತಪ್ಪಿಸಲು ಪ್ರಾರಂಭದಲ್ಲಿ ಮಕ್ಕಳಿಗೆ ಸಿಗರೇಟು, ಬೀಡಿ ಮತ್ತು ತಂಬಾಕು ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಅಗತ್ಯವಿದೆ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ ಮಾತನಾಡಿ, ನ.3ರಿಂದ 19ರವರೆಗೆ ಕುಷ್ಟರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಕುಷ್ಟರೋಗವು ನರ ಮತ್ತು ಚರ್ಮಕ್ಕೆ ಸಂಬಂಧಿಸಿದ ಒಂದು ಸಾಂಕ್ರಾಮಿಕ ರೋಗ ಹಾಗೂ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಯಾಗಿದೆ ಸಂಪೂರ್ಣ ಚಿಕಿತ್ಸೆಯಿಂದ ಗುಣ ಪಡಿಸಬಹುದು. ಹಾಗಾಗಿ ದೇಹದ ಮೇಲೆ ತಿಳಿ, ಬಿಳಿ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳಿದ್ದವರನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.

ಬಳಿಕ ತಂಬಾಕು ಮುಕ್ತ ಯುವ ಅಭಿಯಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯ ಶಿಕ್ಷಕ ಎಂ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕರಾದ ರಮೇಶ್, ಆನಂದ, ರವಿಚಂದ್ರ, ಅನಿತಾ ಮನೋಹರಿ, ಶೋಭಾ, ಆಶಾ ಕಾರ್ಯಕರ್ತೆ ಪದ್ಮಮ್ಮ, ಲಾವಣ್ಯ ಸೇರಿದಂತೆ ಇತರರು ಹಾಜರಿದ್ದರು.