ಸಾರಾಂಶ
ಮಂಗಳೂರು: ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ದ 50ನೇ ವರ್ಷಾಚರಣೆ ನ.13ರಂದು ಪಣಂಬೂರಿನ ಡಾ.ಬಿ.ಆರ್. ಅಂಬೇಡ್ಕರ್ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಎನ್‌ಎಂಪಿಎ ಉಪಾಧ್ಯಕ್ಷೆ ಶಾಂತಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ 1500 ಕೋಟಿ ರು. ವೆಚ್ಚದ 20 ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗುತ್ತದೆ. ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೊನೋವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಜ್ಯದ ಮೀನುಗಾರಿಕಾ, ಬಂದರು, ಜಲ ಸಾರಿಗೆ ಸಚಿವ ಮಾಂಕಾಳ ವೈದ್ಯ ಸೇರಿದಂತೆ ಸಂಸದರು, ಸಚಿವರು, ಶಾಸಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಾರ್ವಜನಿಕರಿಗೆ ಮುಕ್ತ ಅವಕಾಶ:ಬಂದರು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸಾಮಾನ್ಯ ದಿನಗಳಲ್ಲಿ ಜನಸಾಮಾನ್ಯರಿಗೆ ಬಂದರಿಗೆ ಪ್ರವೇಶ ಇರುವುದಿಲ್ಲ. ಆದರೆ ಎನ್‌ಎಂಪಿಎ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಬಂದರಿನ ಒಳಹೋಗಿ ಅಲ್ಲಿನ ಚಟುವಟಿಕೆಗಳನ್ನು ನೋಡಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅದಕ್ಕಾಗಿ ಎನ್‌ಎಂಪಿಎಯ ಬೆಳವಣಿಗೆಯ ಹಾದಿಯ ಪ್ರದರ್ಶನ ಏರ್ಪಡಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು ಭಾಗವಹಿಸುವಂತೆ ಕೋರಿದರು.ಈ ಪ್ರದರ್ಶನದಲ್ಲಿ ಎನ್‌ಎಂಪಿಎಯ 50 ವರ್ಷಗಳ ಕೊಡುಗೆಗಳು, ಬೆಳವಣಿಗೆ ಹಾದಿಯ ಪಯಣದಲ್ಲಿನ ಪ್ರಮುಖ ಮೈಲಿಗಲ್ಲುಗಳು, ಅಭಿವೃದ್ಧಿ ಯೋಜನೆಗಳು ಮತ್ತು ಸಮುದ್ರಯಾನ ವಿಭಾಗದಲ್ಲಿನ ಕೊಡುಗೆಗಳ ಕುರಿತಾದ ಮಾಹಿತಿ ನೀಡಲಾಗುತ್ತದೆ. ಸಾರ್ವಜನಿಕರು ಬಂದು ವೀಕ್ಷಿಸಬಹುದು. ಬಂದರನ್ನು ಜನಸ್ನೇಹಿ ಮಾಡುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆದಿದೆ ಎಂದು ಶಾಂತಿ ತಿಳಿಸಿದರು.
ಸುಮಾರು 6 ಸಾವಿರಕ್ಕೂ ಅಧಿಕ ಜನರ ಆಗಮನದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅದಕ್ಕಿಂತಲೂ ಹೆಚ್ಚು ಜನರು ಬಂದರೂ ವ್ಯವಸ್ಥೆ ಮಾಡಲಾಗುತ್ತದೆ ಎಂದರು. ಎನ್‌ಎಂಪಿಎ ಉಪ ಸಂರಕ್ಷಕ ಮನೋಜ್ ಜೋಶಿ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))