ಗದಗ: ಮಕ್ಕಳಿಗೆ ಮಾರಕ ರೋಗಗಳು ಬರದಂತೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ರೂಪಸೇನ್ ಚವ್ಹಾಣ ಸಲಹೆ ನೀಡಿದರು.
ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಾಲಯ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ನಡೆದ ಲಸಿಕಾ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.ತಾಯಿ- ಮಗುವಿನ ಆರೋಗ್ಯಕ್ಕೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ತಂದಿದೆ. ಅದರಲ್ಲಿ 12 ರೋಗಗಳ ವಿರುದ್ಧ ಉಚಿತ (ವ್ಯಾಕ್ಸಿನೇಷನ್ ) ಲಸಿಕೆಯನ್ನು ಎಲ್ಲ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಗುರುವಾರ ಹಾಕಲಾಗುತ್ತದೆ. ಯಾವುದೇ ಮಗು ಲಸಿಕೆಯಿಂದ ವಂಚಿತರಾಗಬಾರದು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಸಿದ್ದಪ್ಪ ಎನ್. ಲಿಂಗದಾಳ ಮಾತನಾಡಿ, ಯಾವುದೇ ಮಗು, ಗರ್ಭಿಣಿ ಲಸಿಕೆಯಿಂದ ವಂಚಿತರಾಗಬಾರದು. ಪ್ರತಿ ಗುರುವಾರ ಲಕ್ಕುಂಡಿ ಮತ್ತು ಎಲ್ಲ ಉಪಕೇಂದ್ರಗಳಲ್ಲಿ ಲಸಿಕಾ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ. ಲಸಿಲಾ ಕೇಂದ್ರಕ್ಕೆ ಬೆಳಗ್ಗೆ 10ರಿಂದ ಮಧ್ಯಾಹ್ನ 12ರೊಳಗಾಗಿ ಬಂದು ಲಸಿಕೆ ಪಡೆದು ಮಾರಕ ರೋಗಗಳನ್ನು ತಡೆಗಟ್ಟಿ, ಆರೋಗ್ಯ ಸಂಪತ್ತು ಪಡೆಯಿರಿ ಎಂದರು.ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೈ.ಎನ್. ಕಡೇಮನಿ ಮಾತನಾಡಿ, ಮಕ್ಕಳು, ಗರ್ಭಿಣಿಯರಿಗೆ ಲಸಿಕೆಯನ್ನು ವರ್ಷಕ್ಕೆ 3 ಹಂತ ಫೆಬ್ರವರಿ, ಮಾರ್ಚ್, ಏಪ್ರಿಲ್ ಅಭಿಯಾನದ ಮುಖಾಂತರ ನೀಡಲಾಗುವುದು. ಜ್ವರ, ಕೆಮ್ಮು ಇದ್ದರೂ ಲಸಿಕೆ ಹಾಕಿಸಬಹುದು ಎಂದು ಹೇಳಿದರು.
ಡಾ. ನಿವೇದಿತಾ ಬಡಿಗೇರ ಮಾತನಾಡಿದರು. ವೈದ್ಯಾಧಿಕಾರಿ ಡಾ. ಶರ್ಮಿಳಾ ಅಧ್ಯಕ್ಷತೆ ವಹಿಸಿದ್ದರು. ಹುಲಿಗೆಮ್ಮ ಮಾದರ, ಎಸ್.ಬಿ. ಗಡಾದ ಇದ್ದರು. ಇಂದು 2799ನೇ ಶಿವಾನುಭವ ಕಾರ್ಯಕ್ರಮ
ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ 2799ನೇ ಶಿವಾನುಭವ ಕಾರ್ಯಕ್ರಮ ಮೇ 25ರಂದು ಸಂಜೆ 7ಕ್ಕೆ ನಗರದ ತೋಂಟದಾರ್ಯ ಮಠದಲ್ಲಿ ಜರುಗಲಿದೆ.ಕಾರ್ಯಕ್ರಮದ ಸಾನ್ನಿಧ್ಯವನ್ನು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ವಹಿಸಲಿದ್ದಾರೆ. ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಯನ್ನು ಜಲಸಂರಕ್ಷಕ ರಾಜಸ್ಥಾನದ ರಾಜೇಂದ್ರಸಿಂಗ್ ಅವರಿಗೆ ಪ್ರದಾನ ಮಾಡಲಾಗುವುದು.ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಪ್ರದಾನ ಮಾಡಲಿದ್ದಾರೆ. ಜೆ.ಕೆ. ಜಮಾದಾರ ಉಪನ್ಯಾಸ ನೀಡುವರು. ಅತಿಥಿಗಳಾಗಿ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಶಾಸಕ ಜಿ.ಎಸ್. ಗಡ್ಡದ್ದೇವರಮಠ, ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಭಾಗವಹಿಸುವರು. ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಎಲ್. ಲಿಂಬಯ್ಯಸ್ವಾಮಿಮಠ ಉಪಸ್ಥಿತಿ ವಹಿಸುವರು. ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ಅವರು ವಚನ ಸಂಗೀತ ಹಾಡುವರು. ಧರ್ಮಗ್ರಂಥ ಪಠಣವನ್ನು ಖುಷಿ ಜಗದೀಶ ಹಳ್ಳಿಕೇರಿ, ವಚನ ಚಿಂತನೆಯನ್ನು ಶ್ರಾವಣಿ ರಾಮಪ್ಪ ಕಳ್ಳಿಮನಿ ಅವರು ಮಾಡುವರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ಪ್ರಭು ಹುಚ್ಚಪ್ಪ ಹಳ್ಳಿಕೇರಿ ಅವರ ಸ್ಮರಣಾರ್ಥ ಜಯಶ್ರೀ ಪ್ರಭು ಹಳ್ಳಿಕೇರಿ ಹಾಗೂ ಪರಿವಾರ ವಹಿಸಿಕೊಂಡಿದ್ದಾರೆ ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.