ಮಹತ್ವದ ಇತಿಹಾಸ ಹೊಂದಿರುವ ವೀರಶೈವ ಸಮಾಜ

| Published : Aug 20 2024, 12:56 AM IST

ಸಾರಾಂಶ

ವೀರಶೈವ ಲಿಂಗಾಯತ ಸಮಾಜ ವಿಜ್ಞಾನದ ಜೊತೆಗೆ ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ತೊಡಗಿಕೊಂಡಿದೆ ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನೆಲಮಂಗಲ

ವೀರಶೈವ ಲಿಂಗಾಯತ ಸಮಾಜ ವಿಜ್ಞಾನದ ಜೊತೆಗೆ ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ತೊಡಗಿಕೊಂಡಿದೆ ಎಂದು ಹೊನ್ನಮ್ಮಗವಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಪವಾಡ ಶ್ರೀ ಬಸವಣ್ಣದೇವರ ಮಠದಲ್ಲಿ ಶ್ರೀ ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ, ತಾಲೂಕು ವೀರಶೈವ ಲಿಂಗಾಯತ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ಅಖಿಲ ಭಾರತ ವೀರಶೈವ ಮಹಾಸಭಾ ಸೇರಿದಂತೆ ವಿವಿಧ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೀರಶೈವ ಲಿಂಗಾಯತ ಸಮುದಾಯ ಒಂದು ಮಹತ್ವದ ಇತಿಹಾಸ ಹೊಂದಿದೆ. ಸಮುದಾಯ ಸಮಾಜದಲ್ಲಿ ಯಾರನ್ನು ಧಿಕ್ಕರಿಸಿಲ್ಲ, ಎಲ್ಲರನ್ನೂ ಒಪ್ಪಿಕೊಳ್ಳುವ ಸಮಾಜವಾಗಿದೆ. ವೀರಶೈವ ಸಮಾಜ ಬೇಡಿದ ಸಮಾಜವಲ್ಲ ನೀಡಿದ ಸಮಾಜವಾಗಿದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕೃತಜ್ಞತಾ ಭಾವನೆ ಇದ್ದಲ್ಲಿ ಸಮಾಜದದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಸಾಧ್ಯವಾಗುತ್ತದೆ. ಅವಕಾಶ ಎಲ್ಲರಿಗೂ ಸಿಗುವುದಿಲ್ಲ, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಸಮಾಜ ಏಳಿಗೆಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಬಸವಣ್ಣ ಅವರು ಮಂತ್ರಿಯಾಗಿದ್ದಕ್ಕೆ ಮಾತ್ರ ಸಮಾಜದಲ್ಲಿ ಸುಧಾರಣೆ ಕೈಗೊಳ್ಳಲು ಸಾಧ್ಯವಾಗಿತ್ತು. ನಗರದ ಪ್ರಥಮ ಪ್ರಜೆ ಹಾಗೂ ನಗರಸಭೆ ಅಧ್ಯಕ್ಷೆಯಾಗಿ ಸಮುದಾಯದ ಹೆಣ್ಣು ಮಗಳು ಪೂರ್ಣಿಮಾ ಆಯ್ಕೆಯಾಗಿರುವುದು ತುಂಬಾ ಸಂತೋಷದ ವಿಚಾರ. ನೆಲಮಂಗಲ ನಗರವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿ ಎಲ್ಲಾ ಸಮುದಾಯಗಳಿಗೂ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ಮಾಡಿದರು. ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಚಿಕ್ಕಂದಿನಿಂದಲೂ ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಅಪಾರ ಗೌರವವಿದೆ. ಪಕ್ಕ ತಾಲೂಕಿನ ಶಿಕ್ಷಕರೊಬ್ಬರ ಮಗನನ್ನು ಕ್ಷೇತ್ರಕ್ಕೆ ಶಾಸಕನ್ನಾಗಿ ಮಾಡಲು ತಾಲೂಕಾದ್ಯಂತ ವಿವಿಧ ಮಠಾಧೀಶರು ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದವರು ಸಾಕಷ್ಟು ಶ್ರಮಿಸಿದ್ದಾರೆ. ವೀರಶೈವ ಲಿಂಗಾಯತ ಸಮುದಾಯದ ಋಣ ನನ್ನ ಮೇಲಿದೆ. ಅದನ್ನು ಹಂತ ಹಂತವಾಗಿ ತೀರಿಸುತ್ತೇನೆ ಎಂದು ಹೇಳಿದರು.

ಬಸವಣ್ಣದೇವರ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯ ಸದಾ ಸಮಾಜಕ್ಕೆ ಒಳ್ಳೆಯದನ್ನು ಬಯಸುವ ಸಮುದಾಯವಾಗಿದೆ. ಸಮುದಾಯ ಹೆಣ್ಣು ಮಕ್ಕಳು ಹಾಗೂ ಶ್ರೀ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಪೂರ್ಣಿಮಾಸುಗ್ಗರಾಜು ರಾಜಕೀಯ ಪ್ರವೇಶ ಮಾಡಿ ನಗರಸಭೆ ಅಧ್ಯಕ್ಷೆಯಾಗಿರುವುದು ಸಮುದಾಯ ಪ್ರತಿಯೊಬ್ಬರು ಸಂತೋಷ, ಹೆಮ್ಮೆಪಡುವ ವಿಚಾರ ಎಂದರು.

ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು ಮಾತನಾಡಿ, ನಗರಸಭೆಯ 23 ಮಂದಿ ಸದಸ್ಯರು, ನಾಲ್ವರು ಹೆಚ್ಚುವರಿ ಸದಸ್ಯರ ಸಹಕಾರ ಹಾಗೂ ಶಾಸಕರು ಮತ್ತು ಬಸವಣ್ಣ ದೇವರ ಮಠದ ಶ್ರೀಗಳ ಬೆಂಬಲದಿಂದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ. ಅಧ್ಯಕ್ಷೆ ಸ್ಥಾನವನ್ನು ಅಧಿಕಾರವೆಂದು ಭಾವಿಸದೇ ಅವಕಾಶವೆಂದು ಭಾವಿಸಿ ನಗರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಜತೆಗೆ ಇಂದು ಅಭಿನಂದನೆ ಸಲ್ಲಿಸಿದ್ದ ಸಮುದಾಯ ಪ್ರತಿಯೊಬ್ಬರಿಗೂ ಚಿರಋಣಿಯಾಗಿರುತ್ತೇನೆ ಎಂದರು.

ನಗರಸಭೆ ನೂತನ ಅಧ್ಯಕ್ಷೆ ಪೂರ್ಣಿಮಾಸುಗ್ಗರಾಜು ಅವರಿಗೆ ಸಮುದಾಯದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಹಿರಿಯರು ಅಭಿನಂದಿಸಿ ಶುಭಕೋರಿದರು.

ಸಮಾರಂಭದಲ್ಲಿ ತ್ಯಾಮಗೊಂಡ್ಲು ಕಾಲುವೆ ಮಠದ ಶ್ರೀ ಇಮ್ಮಡಿ ಶಿವರುದ್ರ ಸ್ವಾಮೀಜಿ, ಗುಡೇಮಾರನಹಳ್ಳಿ ಜಗ್ಗಣ್ಣಯ್ಯ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಕಂಬಾಳು ಮಠದ ಶ್ರೀ ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಕಂಚುಗಲ್ ಬಂಡೇಮಠದ ಶ್ರೀ ಮಹಾಂಲಿಂಗ ಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಿದ್ದರು. ವೀರಶೈವ ಲಿಂಗಾಯತ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಗರಾಜು, ವೀರಶೈವ ಲಿಂಗಾಯತ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪರಮೇಶ್‌ ಬಿ.ಅದರಂಗಿ, ವೀರಶೈವ ಮಹಾಸಭಾ ಗ್ರಾಮಾಂತರ ಜಿಲ್ಲಾಧ್ಯಕ್ಷ ರೇವಣ್ಣಸಿದ್ದಯ್ಯ, ತಾಲೂಕು ಅಧ್ಯಕ್ಷ ರಾಜಶೇಖರ್, ಮಾಜಿ ಆಧ್ಯಕ್ಷ ಶಾಂತಕುಮಾರ್‌, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಾಜಮ್ಮ, ತಾಲೂಕು ಅಧ್ಯಕ್ಷೆ ವೇದಾವತಿ, ನಗರಸಭೆ ಸದಸ್ಯ ಸಿ.ಪ್ರದೀಪ್, ಆನಂದ್, ಚೇತನ್, ಲೋಲಾಕ್ಷಿ, ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ನಾರಾಯಣ್‌ಗೌಡ, ಕೆ.ಪಿ.ಆನಂದ್, ಮುಖಂಡರಾದ ನಟರಾಜು, ದಯಾಶಂಕರ್, ಜಯದೇವಯ್ಯ, ಕೆ.ಕೃಷ್ಣಪ್ಪ, ಟಿ.ನಾಗರಾಜು, ಎಂ.ಕೆ.ನಾಗರಾಜು, ಎಂ.ಎನ್.ಹರೀಶ್‌ಕುಮಾರ್, ಪ್ರಶಾಂತ್, ತಟ್ಟೆಕೆರೆಬಾಬು, ದ್ರುವಕುಮಾರ್, ಜಗದೀಶ್, ತೀರ್ಥೇಶ್, ಕೆ.ಪಿ.ಬೃಂಗೇಶ್, ಲೋಕೇಶ್, ಹುಣ್ಣಿಗೆರೆ ಬಸವರಾಜು, ಮಂಜುನಾಥಯ್ಯ, ಶಿವಗಂಗೆ ಸುರೇಶ್, ಶಿವಕುಮಾರ್, ಅಂಚೆಮನೆ ಪ್ರಕಾಶ್‌, ಪುರಸಭೆ ಮಾಜಿ ಅಧ್ಯಕ್ಷ ಉಮಾಶಂಕರ್, ಟೌನ್ ಕೋ ಅಪರೇಟಿವ್ ಬ್ಯಾಂಕ್‌ ಅದ್ಯಕ್ಷ ಚನ್ನವಸವರಾಜು ಮತ್ತಿತರರು ಉಪಸ್ಥಿತರಿದರು.