ಕಾಫಿ ಎಸ್ಟೇಟ್‌ ಕಾರ್ಮಿಕರ ಮೇಲೆ ಕಾಡಾನೆ ದಾಳಿ

| Published : Dec 17 2024, 12:45 AM IST

ಸಾರಾಂಶ

ಕಾಫಿ ಕೊಯ್ಲಿನ ಕೆಲಸ ಮಾಡುತ್ತಿರುವಾಗ ಒಂಟಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಶಬಾನ (45 ವರ್ಷ) ಎಂಬುವವರಿಗೆ ಕಾಲಿಗೆ ಹಾಗೂ ಜಯಂತಿ(47 ವರ್ಷ) ಎಂಬುವವರಿಗೆ ಬೆನ್ನಿಗೆ ತೀವ್ರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ತಾಲೂಕಿನ ಅರೇಹಳ್ಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಳೆ ಹಾನಿ ಜೊತೆಗೆ ಮಾನವರ ಮೇಲೂ ದಾಳಿ ನಡೆಸುತ್ತಿರುವುದು ಹೆಚ್ಚಳವಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಅರೇಹಳ್ಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೃಷಿಕರು ಬೆಳೆದಿರುವ ಬೆಳೆ ಹಾನಿ ಒಂದೆಡೆಯಾದರೆ ಮತ್ತೊಂದೆಡೆ ಮಾನವರ ಮೇಲೂ ದಾಳಿ ನಡೆಸುತ್ತಿರುವುದು ಹೆಚ್ಚಳವಾಗುತ್ತಿದೆ.

ಕೆಲ ದಿನಗಳ ಹಿಂದಯಷ್ಟೇ ತಾಲೂಕಿನ ಬಿಕ್ಕೋಡು ಗ್ರಾಮದ ಹತ್ತಿರ ಒಂಟಿ ಕಾಡಾನೆ ದಾಳಿ ನಡೆಸಿದ ಘಟನೆ ಮಾಸುವ ಮುನ್ನವೇ ಸೋಮವಾರ ಬೆಳಿಗ್ಗೆ ಹೋಬಳಿಯ ಸಿರಗುರ ಗ್ರಾಮದ ಕೆಇಎಂಎಸ್‌ ಕಾಫಿ ಎಸ್ಟೇಟ್ ಬಳಿ ಬೆಳಗ್ಗೆ 8 ಗಂಟೆ ವೇಳೆಯಲ್ಲಿ ಕಾಫಿ ಕೊಯ್ಲಿಗೆ ತೆರಳಿದ್ದ ಅರೇಹಳ್ಳಿ ಗ್ರಾಮದ ಕೂಲಿ ಕಾರ್ಮಿಕರ ಮೇಲೆ ದಾಳಿ ನಡೆಸಿದೆ.

ಬೆಳಿಗ್ಗೆ ಕಾಫಿ ಕೊಯ್ಲಿನ ಕೆಲಸ ಮಾಡುತ್ತಿರುವಾಗ ಒಂಟಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಶಬಾನ (45 ವರ್ಷ) ಎಂಬುವವರಿಗೆ ಕಾಲಿಗೆ ಹಾಗೂ ಜಯಂತಿ(47 ವರ್ಷ) ಎಂಬುವವರಿಗೆ ಬೆನ್ನಿಗೆ ತೀವ್ರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಾನವ-ಪ್ರಾಣಿ ಸಂಘರ್ಷದಿಂದ ಉಂಟಾಗುವ ಬಿಕ್ಕಟ್ಟಿನ ಸಂದರ್ಭಗಳನ್ನು ನಿಭಾಯಿಸಲು ರಚಿಸಲಾದ ಆರ್‌ಆರ್‌ಟಿ ಸಿಬ್ಬಂದಿಯೋರ್ವರ ತಾಯಿಯ ಮೇಲೂ ಕಾಡಾನೆ ದಾಳಿ ನಡೆಸಿದೆ.