ಮತ್ತೆ ವಿವಾದ ಸೃಷ್ಟಿಸಿದ ಪಿಎಸೈ ಪರೀಕ್ಷೆಯ ಡೀಲ್‌ ಆಡಿಯೋ!

KannadaprabhaNewsNetwork | Updated : Jan 20 2024, 02:54 PM IST

ಸಾರಾಂಶ

ಎರಡು ವರ್ಷಗಳಿಂದ ವಿವಾದದಲ್ಲಿ ಸಿಲುಕಿರುವ 545 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿಯಲ್ಲಿ ಮತ್ತೆ ಅಕ್ರಮದ ಆರೋಪ ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ವರ್ಷಗಳಿಂದ ವಿವಾದದಲ್ಲಿ ಸಿಲುಕಿರುವ 545 ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕಾತಿಯಲ್ಲಿ ಮತ್ತೆ ಅಕ್ರಮದ ಆರೋಪ ಕೇಳಿ ಬಂದಿದೆ. 

ಇದರ ಜತೆ ವಾಣಿಜ್ಯ ತೆರಿಗೆ ಇನ್ಸ್‌ಪೆಕ್ಟರ್‌ಗಳ (ಸಿಟಿಐ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲೂ ಅವ್ಯವಹಾರದ ಅಪಾದನೆ ಬಂದಿದ್ದು, ಈ ಎರಡು ಹುದ್ದೆಗಳು ಲಕ್ಷ ಲಕ್ಷ ರು.ಗಳಿಗೆ ಬಿಕರಿಯಾಗಿವೆ ಎಂಬ ಮಾತುಗಳು ಕೇಳಿ ಬಂದಿವೆ.

ಈ ನೇಮಕಾತಿಯಲ್ಲಿ ಗುಪ್ತದಳದ ಸಬ್ ಇನ್ಸ್‌ಪೆಕ್ಟರ್‌ ಲಿಂಗಯ್ಯ ನಡೆಸಿದ್ದಾರೆ ಎನ್ನಲಾದ ‘ಡೀಲ್‌’ ಆಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಸಿಸಿಬಿ ಕೈಗೆತ್ತಿಕೊಂಡಿದೆ.

ಇದೇ 23ರಂದು ಪಿಎಸ್‌ಐ ನೇಮಕಾತಿ ಸಂಬಂಧ ಮರು ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ 200 ಸಿಟಿಐ ಹುದ್ದೆಗಳಿಗೆ ಶನಿವಾರ ಕೆಪಿಎಸ್‌ಸಿ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಿವೆ. 

ಈ ನಡುವೆ ಪಿಎಸ್‌ಐ ಲಿಂಗಯ್ಯ ಆಡಿಯೋ ಬಹಿರಂಗವಾಗಿ ಅಭ್ಯರ್ಥಿಗಳಲ್ಲಿ ತಳಮಳ ಸೃಷ್ಟಿಸಿದೆ. ಚಂದ್ರಾಲೇಔಟ್ ಠಾಣೆಯಲ್ಲಿ ಕೆಲ ಅಭ್ಯರ್ಥಿಗಳು ದೂರು ನೀಡಿದ್ದಾರೆ.

ಸಿಟಿಐ ಹುದ್ದೆಗೆ 25 ಲಕ್ಷ ರು. ಹಾಗೂ ಪಿಎಸ್‌ಐಗೆ 80 ಲಕ್ಷ ರು. ಡೀಲ್‌ ನಡೆದಿದೆ. ಹುದ್ದೆ ಬೇಕಾದವರು ಹಣ ಕೊಟ್ಟರೇ ಪರೀಕ್ಷೆ ಹಿಂದಿನ ದಿನ ರಹಸ್ಯ ಕೊಠಡಿಯಲ್ಲಿ ಕೂರಿಸಿ ಪ್ರಶ್ನೆ ಪತ್ರಿಕೆ ಕೊಟ್ಟು ಬರೆಸುತ್ತೇವೆ. 

ಇದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯಾಗಿದೆ ಎಂದು ಪಿಎಸ್‌ಐ ಲಿಂಗಯ್ಯ ವಿವಾದಾತ್ಮಕ ಆಡಿಯೋದಲ್ಲಿ ಉಲ್ಲೇಖವಾಗಿದೆ.

ಈಗಾಗಲೇ ಪಿಎಸ್‌ಐ ನೇಮಕಾತಿ ಹಗರಣ ಸಂಬಂಧ ರಾಜ್ಯ ಪೊಲೀಸ್ ನೇಮಕಾತಿ ವಿಭಾಗದ ಮಾಜಿ ಮುಖ್ಯಸ್ಥ ಹಾಗೂ ಅಭ್ಯರ್ಥಿಗಳು ಸೇರಿದಂತೆ 100ಕ್ಕೂ ಹೆಚ್ಚಿನ ಜನರು ಬಂಧಿತರಾಗಿದೆ.

 ಈ ಹಗರಣವು ಸಾರ್ವಜನಿಕ ಹಾಗೂ ರಾಜಕೀಯ ವಲಯಗಳಲ್ಲಿ ಭಾರಿ ಬಿರುಗಾಳಿ ಎಬ್ಬಿಸಿತ್ತು. ಈಗ ಮತ್ತೆ ನೇಮಕಾತಿ ವಿಚಾರದಲ್ಲಿ ಡೀಲ್ ಮಾತುಕತೆ ಕೇಳಿ ಬಂದಿದೆ.

ಪಿಎಸ್‌ಐ-ಸಿಸಿಬಿ ವಿಚಾರಣೆ: ಡೀಲ್‌ ಆಡಿಯೋ ಬಹಿರಂಗ ಬೆನ್ನಲ್ಲೇ ಪಿಎಸ್‌ಐ ಲಿಂಗಯ್ಯ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆಗೊಳಪಡಿಸಿದೆ ಎಂದು ತಿಳಿದು ಬಂದಿದೆ.

ಆದರೆ ನೇಮಕಾತಿಯಲ್ಲಿ ಹಣದ ವಹಿವಾಟು ನಡೆದಿರುವುದು ಖಚಿತವಾಗಿಲ್ಲ. ಅಕ್ರಮ ನಡೆಸುವವರನ್ನು ಬಲೆಗೆ ಬೀಳಿಸಲು ಪಿಎಸ್‌ಐ ಲಿಂಗಯ್ಯ ಯತ್ನಿಸಿ ತಾವೇ ಖೆಡ್ಡಾಕ್ಕೆ ಬಿದ್ದಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿವೆ.

Share this article