ಪಾಲಿಶ್‌ಗೆ ನೀಡಿದ್ದ 1.277 ಕೇಜಿ ಚಿನ್ನ ದೋಚಿದ!

KannadaprabhaNewsNetwork | Published : Oct 9, 2024 1:34 AM

ಸಾರಾಂಶ

ಪಾಲೀಶ್‌ ಮಾಡಲು ಕೊಟ್ಟಿದ್ದ ಚಿನ್ನಾಭರಣ ಕರಗಿಸಿ ಮಾರಾಟ ಮಾಡಿದ ಅಕ್ಕಸಾಲಿಗ, ಬಂದ ಹಣದಲ್ಲಿ ಪ್ರೇಯಸಿಯೊಂದಿಗೆ ಮೋಜು ಮಸ್ತಿ ಮಾಡಿ ಈಗ ಜೈಲು ಸೇರಿದ್ಧಾನೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನಾಭರಣಗಳಿಗೆ ಪಾಲಿಶ್‌ ಮಾಡುವ ಹಾಗೂ ಹರಳುಗಳನ್ನು ಕೂರಿಸುವ ನೆಪದಲ್ಲಿ ಆಭರಣ ಅಂಗಡಿ ಮಾಲೀಕನಿಂದ 1 ಕೆ.ಜಿ. 277 ಗ್ರಾಂ ತೂಕದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ ಅಕ್ಕಸಾಲಿಗನೊಬ್ಬನನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ಅಂಕುರ್‌ ಕುಮಾರ್‌ ಡಂಗರ್ವಾಲ್‌ (32) ಬಂಧಿತ. ಆರೋಪಿಯಿಂದ ₹38 ಲಕ್ಷ ಮೌಲ್ಯದ 384 ಗ್ರಾಂ ತೂಕದ ಚಿನ್ನದ ಗಟ್ಟಿ ಹಾಗೂ ₹10.99 ಲಕ್ಷ ನಗದು ಜಪ್ತಿ ಮಾಡಲಾಗಿದೆ. ನಗರ್ತಪೇಟೆ ಜುವೆಲ್ಲರಿ ಅಂಗಡಿ ಮಾಲೀಕರೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಆರೋಪಿ ಅಂಕುರ್‌ ಕುಮಾರ್‌ ಕಳೆದ ಐದಾರು ವರ್ಷಗಳಿಂದ ನಗರದ ನಗರ್ತಪೇಟೆಯಲ್ಲಿ ನೆಲೆಸಿದ್ದ. ಪರಿಚಿತ ಆಭರಣ ಅಂಗಡಿ ಮಾಲೀಕರಿಂದ ಚಿನ್ನಾಭರಣಗಳನ್ನು ಪಡೆದು ಪಾಲಿಶ್‌ ಮಾಡುವುದು ಹಾಗೂ ಆಭರಣಗಳಿಗೆ ಹರಳುಗಳನ್ನು ಕೂರಿಸುವ ಕೆಲಸ ಮಾಡುತ್ತಿದ್ದ. ಕಳೆದ ಮೇ ತಿಂಗಳಲ್ಲಿ ನಗರ್ತಪೇಟೆಯ ಜುವೆಲ್ಲರಿ ಅಂಗಡಿ ಮಾಲೀಕರೊಬ್ಬರಿಂದ 1 ಕೆ.ಜಿ. 277 ಗ್ರಾಂ ಚಿನ್ನಾಭರಣಗಳನ್ನು ಪಡೆದು ಒಂದು ತಿಂಗಳೊಳಗೆ ಪಾಲಿಶ್‌ ಮಾಡಿ, ಹರಳುಗಳನ್ನು ಕೂರಿಸಿ ವಾಪಾಸ್‌ ನೀಡುವುದಾಗಿ ಹೇಳಿದ್ದ.

ಅಂಗಡಿ ಖಾಲಿ ಮಾಡಿ ಪರಾರಿ:

ಎರಡು ತಿಂಗಳು ಕಳೆದರೂ ಆರೋಪಿಯು ಚಿನ್ನಾಭರಣ ವಾಪಾಸ್‌ ನೀಡಿರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಅನುಮಾನಗೊಂಡು ಆತನ ಅಂಗಡಿ ಬಳಿ ತೆರಳಿ ನೋಡಿದಾಗ ಅಂಗಡಿ ಖಾಲಿ ಮಾಡಿಕೊಂಡು ಆರೋಪಿಯು ಪರಾರಿಯಾಗಿರುವುದು ಗೊತ್ತಾಗಿದೆ. ಬಳಿಕ ಆಭರಣ ಅಂಗಡಿ ಮಾಲೀಕರು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದರು.

ರಾಜಸ್ಥಾನದಲ್ಲಿ ಬಂಧನ

ಈ ದೂರಿನ ಸಂಬಂಧ ತನಿಖೆಗಿಳಿದ ಪೊಲೀಸರು, ಆರೋಪಿಯ ಪೂರ್ವಾಪರದ ಬಗ್ಗೆ ಮಾಹಿತಿ ಸಂಗ್ರಹಿಸಿದರು. ರಾಜಸ್ಥಾನದ ಬಿಲ್ವಾರ್‌ ಜಿಲ್ಲೆಯ ಕಲಿಯಾಸ್‌ ಗ್ರಾಮದ ಮನೆಯಲ್ಲಿ ಆರೋಪಿಯು ತಲೆಮರೆಸಿಕೊಂಡಿರುವ ಸುಳಿವು ಆಧರಿಸಿ ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನಾಭರಣ ಮಾರಾಟ ಮಾಡಿ ರಶೀದಿ ಪಡೆದಿದ್ದ

ಆರೋಪಿ ಅಂಕುರ್‌ ಕುಮಾರ್‌ 1 ಕೆ.ಜಿ. 277 ಗ್ರಾಂ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿಗಳಾಗಿ ಪರಿವರ್ತಿಸಿದ್ದ. ಬಳಿಕ ನಗರದ ಪರಿಚಿತ ವಿವಿಧ ಆಭರಣ ಅಂಗಡಿಗಳಿಗೆ ಆ ಚಿನ್ನದ ಗಟ್ಟಿ ಮಾರಾಟ ಮಾಡಿದ್ದ. ಈ ಪೈಕಿ ಕೆಲವರು ಆಭರಣ ಅಂಗಡಿಗಳಿಂದ ಹಣ ಪಡೆದರೆ, ಕೆಲವು ಅಂಗಡಿಗಳಿಂದ ತಡವಾಗಿ ಹಣ ಪಡೆಯುವುದಾಗಿ ಹೇಳಿ ಚಿನ್ನದ ಗಟ್ಟಿ ಮಾರಾಟ ಮಾಡಿರುವುದಕ್ಕೆ ರಿಶೀದಿ ಮಾತ್ರ ಪಡೆದು ನಗರದಿಂದ ಪರಾರಿಯಾಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪ್ರೇಯಸಿ ಜತೆ ಮೋಜು

ಆರೋಪಿ ಅಂಕುರ್‌ ಕುಮಾರ್‌ ನಗರದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ರಾಜಸ್ಥಾನಕ್ಕೆ ತೆರಳುವ ಮುನ್ನ ಚಿನ್ನದ ಗಟ್ಟಿ ಮಾರಾಟ ಮಾಡಿ ಪಡೆದುಕೊಂಡಿದ್ದ ಲಕ್ಷಾಂತರ ರುಪಾಯಿ ಹಣದೊಂದಿಗೆ ಪ್ರೇಯಸಿಯನ್ನು ಕರೆದುಕೊಂಡು ಮುಂಬೈ, ಗೋವಾ, ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಮೋಜು-ಮಸ್ತಿ ಮಾಡಿದ್ದಾನೆ. ಪ್ರೇಯಸಿ ಜತೆಗೆ ವಿಮಾನದಲ್ಲಿ ಸುತ್ತಾಡಿ, ಐಷಾರಾಮಿ ಹೋಟೆಲ್‌ಗಳಲ್ಲಿ ತಂಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾನೆ. ಬಳಿಕ ರಾಜಸ್ಥಾನಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

Share this article