ಬೆಂಗಳೂರು : ಮಾದಕ ವಸ್ತು ಮಾರಾಟದ ಜಾಲದಿಂದ ತಿಂಗಳ ಮಾಮೂಲಿ ಪಡೆದು ಡ್ರಗ್ಸ್ ದಂಧೆಗೆ ಸಹಕರಿಸಿದ ಆರೋಪದ ಮೇರೆಗೆ ಓರ್ವ ಇನ್ಸ್‌ಪೆಕ್ಟರ್ ಸೇರಿದಂತೆ 11 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಚಾಮರಾಜಪೇಟೆ ಠಾಣೆಯ ಇನ್ಸ್‌ಪೆಕ್ಟರ್ ಟಿ.ಮಂಜಣ್ಣ, ಹೆಡ್ ಕಾನ್‌ಸ್ಟೇಬಲ್‌ಗಳಾದ ರಮೇಶ್, ಶಿವರಾಜ್, ಕಾನ್‌ಸ್ಟೇಬಲ್‌ಗಳಾದ ಮಧುಸೂದನ್, ಪ್ರಸನ್ನ, ಶಂಕರ್, ಆನಂದ್, ಜೆ.ಜೆ.ನಗರದ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಕುಮಾರ್, ಹೆಡ್ ಕಾನ್‌ಸ್ಟೇಬಲ್ ಆನಂದ್, ಮಹೇಶ್, ಕಾನ್‌ಸ್ಟೇಬಲ್ ಬಸವನಗೌಡ ಅಮಾನತುಗೊಂಡಿದ್ದು ಈ ಬಗ್ಗೆ ಇಲಾಖಾ ವಿಚಾರಣೆ ನಡೆದಿದೆ.
ಕೆಲ ದಿನಗಳ ಹಿಂದೆ ಡ್ರಗ್ಸ್ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿ ಬ್ಯಾಟರಾಯನಪುರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಖಾಕಿ ನಂಟು ಬಯಲಾಗಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಅವರ ವರದಿ ಆಧರಿಸಿ ಇನ್ಸ್‌ಪೆಕ್ಟರ್ ಸೇರಿದಂತೆ 11 ಮಂದಿಯನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ತಿಂಗಳ ಮಾಮೂಲಿಗಿಳಿದಿದ್ದ ಪೊಲೀಸರು
ಪಶ್ಚಿಮ ವಿಭಾಗದ ಬ್ಯಾಟರಾಯನಪುರ, ಚಾಮರಾಜಪೇಟೆ ಹಾಗೂ ಜೆ.ಜಿ. ನಗರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇರಿದಂತೆ ಡ್ರಗ್ಸ್ ಮಾರಾಟ ಸಕ್ರಿಯವಾಗಿರುವ ಬಗ್ಗೆ ಕೇಳಿ ಬಂದ ಆರೋಪಗಳ ಬಗ್ಗೆ ಮಾಹಿತಿ ಪಡೆದ ಡಿಸಿಪಿ ಎಸ್. ಗಿರೀಶ್ ಅವರು, ಡ್ರಗ್ಸ್ ಪೆಡ್ಲರ್‌ಗಳ ಪತ್ತೆಗೆ ಎಸಿಪಿಗಳಾದ ಭರತ್ ರೆಡ್ಡಿ ಹಾಗೂ ಚಂದನ್ ಕುಮಾರ್ ಅವರಿಗೆ ಸೂಚಿಸಿದ್ದರು.
ಆ.22 ರಂದು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಪೂರೈಸುತ್ತಿದ್ದ ಸಲ್ಮಾನ್, ನಯಾಜ್ ಉಲ್ಲಾ, ನಯಾಜ್ ಖಾನ್, ಸಲ್ಮಾನ್, ನಯಾಜ್ ಹಾಗೂ ತಾಹೇರ್ ಪಟೇಲ್ ಸೇರಿ ಆರು ಮಂದಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ನಡೆಸಿ ಮೊಬೈಲ್ ಜಪ್ತಿ ಮಾಡಿ ಪರಿಶೀಲಿಸಿದಾಗ ಖಾಕಿ ನಂಟು ಬಯಲಾಗಿದೆ ಎಂದು ತಿಳಿದು ಬಂದಿದೆ. ಈ ಪೆಡ್ಲರ್‌ಗಳಿಂದ ತಿಂಗಳಿಗೆ 2 ರಿಂದ 3 ಲಕ್ಷ ರು. ಮಾಮೂಲಿ ಪಡೆದು ಡ್ರಗ್ಸ್ ಮಾರಾಟಕ್ಕೆ ಚಾಮರಾಜಪೇಟೆ ಇನ್ಸ್‌ಪೆಕ್ಟರ್ ಮಂಜಣ್ಣ ಹಾಗೂ ಇತರೆ ಪೊಲೀಸರು ಸಹಕರಿಸಿದ್ದರು. ಅಲ್ಲದೆ ಈ ಪೆಡ್ಲರ್‌ಗಳ ಜತೆ ಪಾರ್ಟಿ ನಡೆಸಿರುವ ಪೋಟೋಗಳು ಪತ್ತೆಯಾಗಿವೆ.
ಈ ಬಗ್ಗೆ ಬ್ಯಾಟರಾಯನಪುರ ಉಪ ವಿಭಾಗದ ಎಸಿಪಿ ಭರತ್ ರೆಡ್ಡಿ ಸಲ್ಲಿಸಿದ ವರದಿ ಪರಿಗಣಿಸಿದ ಡಿಸಿಪಿ ಹೆಚ್ಚಿನ ವಿಚಾರಣೆಗೆ ಎಸಿಪಿ ಚಂದನ್ ಕುಮಾರ್ ಅವರಿಗೆ ಸೂಚಿಸಿದರು. ಕೊನೆಗೆ ಡ್ರಗ್ಸ್ ಪೆಡ್ಲರ್‌ಗಳ ಜತೆ ಇನ್ಸ್‌ಪೆಕ್ಟರ್ ಹಾಗೂ 10 ಮಂದಿ ಸಿಬ್ಬಂದಿ ಶಾಮೀಲಾಗಿರುವುದು ಖಚಿತವಾಗಿದೆ. ಈ ಬಗ್ಗೆ ಸಮಗ್ರ ವರದಿಯನ್ನು ನಗರ ಪೊಲೀಸ್ ಆಯುಕ್ತರಿಗೆ ಡಿಸಿಪಿ ಗಿರೀಶ್ ಸಲ್ಲಿಸಿದ್ದಾರೆ. ಅದರನ್ವಯ ಚಾಮರಾಜಪೇಟೆ ಠಾಣೆ ಇನ್ಸ್‌ಪೆಕ್ಟರ್ ಮಂಜಣ್ಣ ಅವರನ್ನು ಸೀಮಂತ್ ಕುಮಾರ್ ಸಿಂಗ್ ಮನೆಗೆ ಕಳುಹಿಸಿದ್ದಾರೆ. ಇನ್ನುಳಿದ ಸಿಬ್ಬಂದಿಯನ್ನು ಡಿಸಿಪಿ ಅವರು ಅಮಾನತುಗೊಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಂದು ಟೈಡೆಲ್ ಮಾತ್ರೆ 400 ಕ್ಕೆ ಮಾರಾಟ!
ಮೈಸೂರು ರಸ್ತೆಯ ಬ್ಯಾಟರಾಯನಪುರ, ಚಾಮರಾಜಪೇಟೆ ಹಾಗೂ ಜೆ.ಜೆ. ನಗರ ಠಾಣಾ ವ್ಯಾಪ್ತಿಯಲ್ಲಿ ಪೆಡ್ಲರ್‌ಗಳು 300 ರಿಂದ 400 ರು.ಗೆ ಟೈಡೆಲ್ ಮಾತ್ರೆಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಅಲ್ಲದೆ ಗಾಂಜಾ ಸಹ ಆರೋಪಿಗಳಿಂದ ಪೂರೈಕೆಯಾಗುತ್ತಿತ್ತು. ಈ ಗ್ಯಾಂಗ್‌ಗೆ ಜೆ.ಜೆ. ನಗರದ ಸಲ್ಮಾನ್ ಲೀಡರ್ ಆಗಿದ್ದ ಎನ್ನಲಾಗಿದೆ.
ಅಮಾನತಾಗಿದ್ದ ಮಧುಸೂದನ್:
ಡ್ರಗ್ಸ್ ಪೆಡ್ಲರ್ ಜತೆ ಸ್ನೇಹ ಆರೋಪ ಹೊತ್ತು ಅಮಾನತುಗೊಂಡಿರುವ ಚಾಮರಾಜಪೇಟೆ ಮಧುಸೂದನ್ ವಿರುದ್ಧ ಅಕ್ರಮ ಮದ್ಯ ಮಾರಾಟಕ್ಕೆ ಸಹಕಾರ ನೀಡಿದ್ದ ಆರೋಪ ಕೇಳಿ ಬಂದಿತ್ತು. ಮಾಗಡಿ ರಸ್ತೆಯ ಟೌನ್ ಹಾಲ್ ಬಳಿ ಮಧುಸೂದನ್ ಸೋದರ ಸಂಬಂಧಿ ಹೋಟೆಲ್‌ನಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಲು ಕೆ.ಪಿ.ಅಗ್ರಹಾರ ಠಾಣೆ ಇನ್ಸ್‌ಪೆಕ್ಟರ್ ತೆರಳಿದ್ದರು. ಆಗ ಇನ್ಸ್‌ಪೆಕ್ಟರ್ ಜತೆ ದುಂಡಾವರ್ತನೆ ತೋರಿ ಮಧುಸೂದನ್ ಅಮಾನತುಗೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೆ.ಜೆ.ನಗರ, ಚಾಮರಾಜಪೇಟೆ ಹಾಗೂ ಬ್ಯಾಟರಾಯನಪುರ ಠಾಣೆಗಳಲ್ಲಿ ಡ್ರಗ್ಸ್ ಮಾರಾಟ ಜಾಲದ ಜತೆ ಕೆಲ ಪೊಲೀಸರು ಶಾಮೀಲಾಗಿರುವುದು ಖಚಿತವಾಗಿದೆ. ಡ್ರಗ್ಸ್ ಪೆಡ್ಲರ್‌ಗಳ ಜತೆ ಪೊಲೀಸರ ಸ್ನೇಹ ಸಹಿಸುವುದಿಲ್ಲ. ಹೀಗಾಗಿ ಆರೋಪಿತ ಪೊಲೀಸರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗಿದೆ. ಇಲಾಖೆ ಎಚ್ಚರಿಕೆ ಸಂದೇಶ ರವಾನಿಸಿದೆ.
-ಎಸ್. ಗಿರೀಶ್, ಡಿಸಿಪಿ, ಪಶ್ಚಿಮ ವಿಭಾಗ