ಹೂಡಿಕೆ ಹೆಸರಿನಲ್ಲಿ ಅಧಿಕ ಲಾಭದ ಅಮಿಷವೊಡ್ಡಿ ₹20.62 ಲಕ್ಷ ವಂಚನೆ

KannadaprabhaNewsNetwork | Published : Feb 26, 2025 1:34 AM

ಸಾರಾಂಶ

ಷೇರುಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 20.62 ಲಕ್ಷ ರು. ಪಡೆದು ವಂಚಿಸಿದ ಆರೋಪದಡಿ ವೈಟ್‌ಫೀಲ್ಡ್‌ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಷೇರುಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 20.62 ಲಕ್ಷ ರು. ಪಡೆದು ವಂಚಿಸಿದ ಆರೋಪದಡಿ ವೈಟ್‌ಫೀಲ್ಡ್‌ ವಿಭಾಗದ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆಗೊಳಗಾದ ಬೆಳ್ಳಂದೂರಿನ ಎಡ್ವಿನ್‌ ಭಾಸ್ಕರ್‌ ವಸಂತ್‌ ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂ 66 ಡಿ, ಬಿಎನ್‌ಎಸ್‌ ಕಾಯ್ದೆ ಕಲಂ 318(4) ಮತ್ತು 319(2) ಅಡಿ ಪ್ರಕರಣ ದಾಖಲಿಸಿ ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ:

ಎಡ್ವಿನ್‌ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಅವರ ವಾಟ್ಸಾಪ್‌ಗೆ ಅಪರಿಚಿತ ಸಂಖ್ಯೆಯಿಂದ ಬಂದ ಸಂದೇಶದ ಲಿಂಕ್‌ ಬಳಸಿ ಎಸ್‌ಎಂಸಿ ಗ್ಲೋಬಲ್‌ ಸೆಕ್ಯೂರಿಟೀಸ್‌ ಎಂಬ ವಾಟ್ಸಾಪ್‌ ಗ್ರೂಪ್‌ಗೆ ಎಡ್ವಿನ್‌ ಸೇರಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಗಳಿಸಬಹುದು ಎಂದು ನಂಬಿಸಿದ್ದಾನೆ. ಈತನ ಮಾತು ನಂಬಿದ ಎಡ್ವಿನ್‌, ಅಪರಿಚಿತರು ನೀಡಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಒಟ್ಟು ₹21.57 ಲಕ್ಷ ವರ್ಗಾಯಿಸಿದ್ದಾರೆ. ನಂತರ ಅಪರಿಚಿತರು ಲಾಂಭಾಂಶದ ರೂಪದಲ್ಲಿ ಎಡ್ವಿನ್‌ಗೆ ₹1.95 ಲಕ್ಷ ನೀಡಿದ್ದಾರೆ.

ಉಳಿದ ₹20.62 ಲಕ್ಷ ಹೂಡಿಕೆಗೆ ಲಾಭಾಂಶ ನೀಡಿಲ್ಲ. ಹೀಗಾಗಿ ಎಡ್ವಿನ್‌ ಈ ಹೂಡಿಕೆ ಹಣವನ್ನು ವಿತ್‌ ಡ್ರಾ ಮಾಡಲು ಮುಂದಾದಾಗ ಹೆಚ್ಚಿನ ಹಣ ನೀಡಿದರಷ್ಟೇ ಉಳಿಕೆ ವಾಪಾಸ್‌ ನೀಡುವುದಾಗಿ ಬೇಡಿಕೆ ಇರಿಸಿದ್ದಾರೆ. ಬಳಿಕ ಸಂಪರ್ಕ ಕಡಿದುಕೊಂಡಿದ್ದಾರೆ. ಈ ವೇಳೆ ತಾನು ಸೈಬರ್‌ ವಂಚನೆಗೆ ಒಳಗಾಗಿರುವುದು ಎಡ್ವಿನ್‌ ಅರಿವಿಗೆ ಬಂದಿದೆ. ಈ ಸಂಬಂಧ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ಸೈಬರ್‌ ವಂಚಕರ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article