3 ಕೋಟಿ ರು. ಮೌಲ್ಯದ ತಿಮಿಂಗಲ ವಾಂತಿ ಸಂಗ್ರಹ: ಓರ್ವ ಪೊಲೀಸರ ವಶಕ್ಕೆ

KannadaprabhaNewsNetwork |  
Published : Dec 17, 2024, 12:47 AM IST
16ಕೆಎಂಎನ್ ಡಿ25,26,27 | Kannada Prabha

ಸಾರಾಂಶ

ನಿಷೇಧಿತ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ಸೋಮವಾರ ಮಧ್ಯಾಹ್ನ ದಾಳಿ ನಡೆಸಿರುವ ಬೆಂಗಳೂರು ಮತ್ತು ಮೈಸೂರು ವಿಭಾಗದ ಅರಣ್ಯ ಇಲಾಖೆ ಜಾಗೃತ ದಳದ ಅಧಿಕಾರಿಗಳ ತಂಡ 3 ಕೋಟಿ ರು. ಮೌಲ್ಯದ ತಿಮಿಂಗಲ ವಾಂತಿ ಜೊತೆಗೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ನಿಷೇಧಿತ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ಸೋಮವಾರ ಮಧ್ಯಾಹ್ನ ದಾಳಿ ನಡೆಸಿರುವ ಬೆಂಗಳೂರು ಮತ್ತು ಮೈಸೂರು ವಿಭಾಗದ ಅರಣ್ಯ ಇಲಾಖೆ ಜಾಗೃತ ದಳದ ಅಧಿಕಾರಿಗಳ ತಂಡ 3 ಕೋಟಿ ರು. ಮೌಲ್ಯದ ತಿಮಿಂಗಲ ವಾಂತಿ ಜೊತೆಗೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಟ್ಟಣದ ಪಡುವಲಪಟ್ಟಣ ರಸ್ತೆಯ ಶ್ರೀಬಡಗೂಡಮ್ಮದೇವಿ ದೇವಸ್ಥಾನದ ಪಕ್ಕದ ವಾಸಿ ಲೇಟ್ ಚಲುವರಾಜು ಪುತ್ರ ವಿನಯ್‌ಕುಮಾರ್ (31) ಆರೋಪಿ.

ಪಟ್ಟಣದ ಪಡುವಲಪಟ್ಟಣ ರಸ್ತೆಯಲ್ಲಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ ವಿನಯ್‌ಕುಮಾರ್ ಕಳೆದ ಮೂರು ತಿಂಗಳಿಂದ ಮಿಲ್ಕ್ ಪಾರ್ಲರ್ ಮುಚ್ಚಿದ್ದನು. ಆಗಿದ್ದಾಂಗ್ಗೆ ಕಾರಿನಲ್ಲಿ ಓಡಾಡುತ್ತಿದ್ದ ಈತನ ಚಲನವಲನ ತಿಳಿದುಕೊಳ್ಳಲು ಕಳೆದ 15 ದಿನಗಳಿಂದಲೇ ಅರಣ್ಯ ಇಲಾಖೆಯ ಜಾಗೃತ ದಳದ ಸಿಬ್ಬಂದಿ ಪಟ್ಟಣದಲ್ಲೇ ಬೀಡು ಬಿಟ್ಟಿದ್ದರು ಎನ್ನಲಾಗಿದೆ.

ಸೋಮವಾರ ಮಧ್ಯಾಹ್ನ ವಿನಯ್‌ಕುಮಾರ್ ಮನೆ ಮೇಲೆ ದಿಢೀರ್ ದಾಳಿ ನಡೆಸಿದ ಅರಣ್ಯ ಇಲಾಖೆ ಜಾಗೃತದಳದ ಅಧಿಕಾರಿಗಳ ತಂಡ 1 ಗಂಟೆಗೂ ಹೆಚ್ಚು ಕಾಲ ಶೋಧ ಕಾರ್ಯ ನಡೆಸಿದರು. ಈ ವೇಳೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 3 ಕೋಟಿ ಮೌಲ್ಯದ 3 ಕೆ.ಜಿ. ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಪತ್ತೆಯಾಗುತ್ತಿದ್ದಂತೆ ಮಾಲು ಸಮೇತ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಈ ದಂಧೆಯ ಮೂಲ ಜಾಡು ಕಂಡು ಹಿಡಿಯಲು ಯಾರಿಗೂ ಮಾಹಿತಿ ನೀಡದೆ ಆರೋಪಿಯನ್ನು ಬೇರೊಂದು ಸ್ಥಳಕ್ಕೆ ಕರೆದೊಯ್ದಿದ್ದಾರೆನ್ನಲಾಗಿದೆ.ಪಾಶ್ಚಾತ್ಯ ದೇಶಗಳಲ್ಲಿ ದೊಡ್ಡ ಮಟ್ಟದ ಸ್ಮಗ್ಲಿಂಗ್‌ಗೆ ದಾರಿ ಮಾಡಿಕೊಟ್ಟಿರುವ ಅಂಬರ್ ಗ್ರೀಸ್ ಅಥವಾ ತಿಮಿಂಗಲ ವಾಂತಿಯನ್ನು 1972ರ ವನ್ಯಜೀವಿ ಕಾಯ್ದೆಯಡಿ ದೇಶದಲ್ಲಿ ನಿಷೇಧಿಸಲಾಗಿದೆ.

ಬೆಂಗಳೂರಿನಿಂದ ಹಿಡಿದು ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯವರೆಗೂ ಸ್ಮಗ್ಲಿಂಗ್ ವಹಿವಾಟು ಬೇರು ಬಿಟ್ಟಿರುವ ಈ ದಂಧೆ ದೇವಾಲಯಗಳ ನಾಡು ನಾಗಮಂಗಲಕ್ಕೂ ಕಾಲಿಟ್ಟಿದ್ದಾದರೂ ಹೇಗೆಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಏನಿದು ಅಂಬರ್ ಗ್ರೀಸ್:

ಸಮುದ್ರದಲ್ಲಿರುವ ತಿಮಿಂಗಲವು ತಾನು ಸೇವಿಸುವ ಕೆಲ ಆಹಾರವನ್ನು ಜೀರ್ಣಿಸಿಕೊಳ್ಳಲಾಗದೆ ಮತ್ತೆ ಹೊರ ಹಾಕುತ್ತದೆ. ದ್ರವರೂಪದಲ್ಲಿ ಗಟ್ಟಿಯಾಗಿರುವ ಇದನ್ನು ಅಂಬರ್ ಗ್ರೀಸ್ ಅಥವಾ ತಿಮಿಂಗಲ ವಾಂತಿ ಎನ್ನುತ್ತಾರೆ. ಈ ದ್ರವರೂಪದ ಗಟ್ಟಿ ಆಹಾರ ಮೊದಲು ಸಮುದ್ರದ ಆಳದಲ್ಲಿರುತ್ತದೆ. ಬಳಿಕ ಕೆಲ ರಾಸಾಯನಿಕ ಕ್ರಿಯೆ ಮೂಲಕ ಸಮುದ್ರದ ಮೇಲ್ಭಾಗದಲ್ಲಿ ತೇಲುತ್ತದೆ.

1 ಕೆಜಿ ಅಂಬರ್ ಗ್ರೀಸ್‌ಗೆ 1 ಕೋಟಿ:

ಹೊರ ದೇಶಗಳಲ್ಲಿ ಸುಗಂಧ ದ್ರವ್ಯ ತಯಾರಿಸಲು, ಚಾಕೋಲೆಟ್ ಹಾಗೂ ಕೆಲ ಔಷಧಗಳಿಗೆ ಬಳಸುವ ಅಂಬರ್ ಗ್ರೀಸ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರು. ಬೆಲೆಬಾಳುವ ವಸ್ತು. 1 ಕೆ.ಜಿ. ತಿಮಿಂಗಲ ವಾಂತಿಗೆ ಬರೋಬ್ಬರಿ ಒಂದು ಕೋಟಿ ರು. ಮೌಲ್ಯವಿದೆ. ನಮ್ಮ ದೇಶದಲ್ಲಿ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಮಾರಾಟ ಅಥವಾ ಸಾಗಾಟ ಮಾಡುವುದು ಶಿಕ್ಷಾರ್ಹ ಅಪರಾಧ.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!