3 ಪ್ರತ್ಯೇಕ ಮನೆಗಳವು ಪ್ರಕರಣ: 6 ಮಂದಿ ಸೆರೆ, ಚಿನ್ನಾಭರಣ ವಶ

KannadaprabhaNewsNetwork | Published : Mar 26, 2025 1:39 AM

ಸಾರಾಂಶ

ಮೂರು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ತಲಘಟ್ಟಪುರ ಠಾಣೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಒಟ್ಟು ₹58 ಲಕ್ಷ ಮೌಲ್ಯದ 614 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೂರು ಪ್ರತ್ಯೇಕ ಮನೆಗಳವು ಪ್ರಕರಣಗಳಲ್ಲಿ ತಲಘಟ್ಟಪುರ ಠಾಣೆ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಒಟ್ಟು ₹58 ಲಕ್ಷ ಮೌಲ್ಯದ 614 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಆರೋಪಿ ಹಾಗೂ ಅವುಗಳನ್ನು ವಿಲೇವಾರಿ ಮಾಡುತ್ತಿದ್ದ ಟೆಕಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಸುಬ್ರಹ್ಮಣ್ಯಪುರದ ಹನುಮಗಿರಿ ಬೆಟ್ಟದ ಬಳಿಯ ನಿವಾಸಿ ಪ್ರವೀಣ್ ಅಲಿಯಾಸ್ ಗುಳ್ಳೆ (30) ಮತ್ತು ಕಳವು ಮಾಲು ವಿಲೇವಾರಿ ಮಾಡುತ್ತಿದ್ದ ಟೆಕಿ ಯಶವಂತಪುರ ನಿವಾಸಿಗಳಾದ ನಿಖಿಬ್ರೌನ್ (28), ಡಿಪ್ಲೋಮಾ ಎಂಜಿನಿಯರ್ ಪ್ರಶಾಂತ್ (26) ಹಾಗೂ ರಾಜಾಜಿನಗರ ನಿವಾಸಿ ಲಿಖಿತ್ (30) ಬಂಧಿತರು. ಆರೋಪಿಗಳಿಂದ ₹40 ಲಕ್ಷ ಮೌಲ್ಯದ 460 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಬಾಲಾಜಿ ಲೇಔಟ್‌ನ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ. ತನಿಖೆ ವೇಳೆ ಬಾತ್ಮೀದಾರರ ಖಚಿತ ಮಾಹಿತಿ ಮೇರೆಗೆ ಆರೋಪಿ ಪ್ರವೀಣ್‌ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ತಾನೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಈತ ಕದ್ದ ಮಾಲುಗಳನ್ನು ವಿಲೇವಾರಿ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ವಿಲೇವಾರಿಗೆ ಶೇ.15ರಷ್ಟು ಕಮಿಷನ್‌:

ಆರೋಪಿಗಳಾದ ಟೆಕಿ ನಿಖಿ ಬ್ರೌನ್‌ ಹಾಗೂ ಸ್ನೇಹಿತರು ಪ್ರಮುಖ ಆರೋಪಿ ಪ್ರವೀಣ್‌ ಕಳವು ಮಾಡಿ ತರುತ್ತಿದ್ದ ಚಿನ್ನಾಭರಣಗಳನ್ನು ಸ್ನೇಹಿತರ ಮುಖಾಂತರ ವಿಲೇವಾರಿ ಮಾಡುತ್ತಿದ್ದರು. ಶೇ.15ರಷ್ಟು ಕಮಿಷನ್‌ ಕಡಿತ ಮಾಡಿಕೊಂಡು ಉಳಿದ ಹಣವನ್ನು ಆರೋಪಿ ಪ್ರವೀಣ್‌ಗೆ ನೀಡುತ್ತಿದ್ದರು. ಬಳಿಕ ಮೂವರು ಸೇರಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಬೀಗ ಹಾಕಿದ ಮನೆ

ಕದಿಯುತ್ತಿದ್ದ ತಮಿಳಿಗ

ಮತ್ತೊಂದು ಪ್ರಕರಣದಲ್ಲಿ ಬೀಗ ಹಾಕಿದ ಮನೆಗಳಲ್ಲಿ ಕಳವು ಮಾಡುತ್ತಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಜಗ್ಗ ಅಲಿಯಾಸ್ ಮೆಡಿಕಲ್ ಜಗ್ಗ (35) ಬಂಧಿತ. ಆರೋಪಿಯಿಂದ ₹10 ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣ, 1 ಕೆ.ಜಿ. ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಮಾರುತಿನಗರದ ಮನೆಯೊಂದರಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಆರೋಪಿ ಜಗ್ಗ ವೃತ್ತಿಪರ ಕಳ್ಳನಾಗಿದ್ದು, ಈತನ ವಿರುದ್ಧ ತಮಿಳುನಾಡಿನ ವಿವಿಧ ಪೊಳೀಸ್‌ ಠಾಣೆಗಳಲ್ಲಿ 10ಕ್ಕೂ ಅಧಿಕ ಮನೆಗಳವು ಪ್ರಕರಣಗಳು ಹಾಗೂ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಐದಕ್ಕೂ ಅಧಿಕ ಮನೆಗಳವು ಪ್ರಕರಣಗಳು ದಾಲಾಗಿವೆ. ಈತನ ವಿರುದ್ಧ ಏಳು ಪ್ರಕರಣಗಳಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಿರುವುದು ಬೆಳಕಿಗೆ ಬಂದಿದೆ.

ಕೆಲಸಕ್ಕಿದ್ದ ಮನೆಯಲ್ಲಿ

ಆಭರಣ ದೋಚಿದ ಮಹಿಳೆ

ಮಗದೊಂದು ಪ್ರಕರಣಗಳಲ್ಲಿ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ದೋಚಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸುಂದರವಲ್ಲಿ(35) ಬಂಧಿತೆ. ಆರೋಪಿಯಿಂದ ₹8 ಲಕ್ಷ ಮೌಲ್ಯದ 74 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಹೆಮ್ಮಿಗೆಪುರದ ಎಚ್.ಗೊಲ್ಲಹಳ್ಳಿಯಲ್ಲಿ ವಾಸವಾಗಿದ್ದ ವೃದ್ಧೆಯೊಬ್ಬರ ಮನೆಗೆ ಕೆಲಸಕ್ಕೆ ಸೇರಿಕೊಂಡಿದ್ದ ಈಕೆ ಆರಂಭದಲ್ಲಿ ವೃದ್ಧೆಯ ನಂಬಿಕೆ ಗಳಿಸಿದ್ದಳು. ಅದನ್ನೇ ದುರುಪಯೋಗ ಪಡಿಸಿಕೊಂಡು ವೃದ್ಧೆಯ ಗಮನಕ್ಕೆ ಬಾರದಂತೆ ಚಿನ್ನಾಭರಣ ಕಳವು ಮಾಡಿದ್ದಳು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿತೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article