ಯಶ್‌ ಕಟೌಟ್‌ ಕಟ್ಟುವ ವೇಳೆ ಕರೆಂಟ್‌ ಶಾಕ್‌: 3 ಜನ ಬಲಿ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ರಾಕಿಂಗ್‌ ಸ್ಟಾರ್‌ ಯಶ್ ಜನ್ಮದಿನದ ನಿಮಿತ್ತ ಕಟೌಟ್‌ ಕಟ್ಟುವಾಗ ವಿದ್ಯುತ್‌ ತಗುಲಿ ಮೂವರು ಯುವಕರು ದುರ್ಮರಣ ಹೊಂದಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ನಡೆದಿದೆ. ನಟ ಯಶ್‌ ಮೃತರ ಮನೆಗೆ ತೆರಳಿ ಸಾಂತ್ವಾನ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

‘ರಾಕಿಂಗ್ ಸ್ಟಾರ್’ ಯಶ್‌ ಅವರ ಜನ್ಮದಿನಾಚರಣೆಗೆ ಬೃಹತ್‌ ಕಟೌಟ್‌ ನಿಲ್ಲಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್‌ ತಂತಿ ಸ್ಪರ್ಶಿಸಿ ಮೂವರು ಯುವಕರು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಹೃದಯ ವಿದ್ರಾವಕ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ಸೂರಣಗಿ ಗ್ರಾಮದ ಅಂಬೇಡ್ಕರ್‌ ಕಾಲನಿ ನಿವಾಸಿಗಳಾದ ಹನುಮಂತಪ್ಪ ಮಜ್ಜೂರಪ್ಪ ಹರಿಜನ (21), ಮುರಳಿ ನೀಲಪ್ಪ ನಡುವಿನಮನಿ (22) ಹಾಗೂ ನವೀನ ನೀಲಪ್ಪ ಗಾಜಿ (22) ಮೃತರು.

ಘಟನೆ ಹಿನ್ನೆಲೆಯಲ್ಲಿ ನಟ ಯಶ್‌ ಅವರು ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅವರಿಗೆ ಎಲ್ಲಾ ರೀತಿಯ ನೆರವಿನ ಭರವಸೆ ನೀಡಿದ್ದಾರೆ. ಈ ಮಧ್ಯೆ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರು. ಹಾಗೂ ಗಾಯಗೊಂಡವರ ಕುಟುಂಬಕ್ಕೆ ತಲಾ 50 ಸಾವಿರ ಪರಿಹಾರ ಘೋಷಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.

ಆಗಿದ್ದೇನು?:

ಸೋಮವಾರ(ಜ.8) ಯಶ್‌ ಅವರ ಜನ್ಮದಿನ. ಹೀಗಾಗಿ, ಭಾನುವಾರ ರಾತ್ರಿ 11.30ರ ವೇಳೆಗೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆಗೆ ಯುವಕರೆಲ್ಲ ಸೇರಿ ಸಿದ್ಧತೆಯಲ್ಲಿ ತೊಡಗಿದ್ದರು. ಗೆಳೆಯರೇ ಸೇರಿಕೊಂಡು ಒಂದಿಷ್ಟು ಹಣ ಕೂಡಿಸಿಕೊಂಡು ಬೃಹತ್ ಗಾತ್ರದ ಫ್ಲೆಕ್ಸ್ ಮಾಡಿಸಿದ್ದರು. ಎತ್ತರದ ಈ ಕಟೌಟ್ ಅಳವಡಿಸುವ ಸಂದರ್ಭದಲ್ಲಿ ಅವರ ಕೈಯಲ್ಲಿದ್ದ ಫ್ಲೆಕ್ಸ್‌ ಚೌಕಟ್ಟಿನ ಕಬ್ಬಿಣದ ಸಲಾಕೆಗೆ ವಿದ್ಯುತ್ ತಂತಿ ಸ್ಪರ್ಶಿಸಿ ಶಾಕ್‌ ಹೊಡೆದಿದೆ. ಇದರಿಂದ ಮೂವರು ಕುಸಿದು ಬಿದ್ದು ಸ್ಥಳದಲ್ಲೇ ಪ್ರಾಣ ಬಿಟ್ಟರೆ, ಅವರನ್ನು ರಕ್ಷಿಸಲು ಮುಂದಾದ ಉಳಿದ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಡಿಯೋ ವೈರಲ್‌: ಫ್ಲೆಕ್ಸ್ ಅಳವಡಿಸುವ ಈ ಸಂಭ್ರಮಾಚರಣೆಯ ದೃಶ್ಯಗಳನ್ನು ಅವರ ಗೆಳೆಯರು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದರು. ಆಗಲೇ ಈ ದುರಂತ ಸಂಭವಿಸಿದೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಡಾ.ಚಂದ್ರು ಲಮಾಣಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ನಂತರ ನಟ ಯಶ್‌ ಕೂಡ ಮೃತರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ನಿಮ್ಮ ಜತೆಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದರು.

Share this article