ಮುಂಬೈ : ಭಾನುವಾರ ಮೈಸೂರಿನ ಹೊರವಲಯದಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ವಶ ಪ್ರಕರಣದ ಸಂಪೂರ್ಣ ಚಿತ್ರಣವನ್ನು ದಾಳಿ ನಡೆಸಿದ್ದ ಮುಂಬೈ ಪೊಲೀಸರು ಸೋಮವಾರ ನೀಡಿದ್ದು ‘ಒಟ್ಟು 390 ಕೋಟಿ ರು. ಮೌಲ್ಯದ 192 ಕೆ.ಜೆ. ಮೆಫೆಡ್ರೋನ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. 8 ಜನರನ್ನು ಬಂಧಿಸಲಾಗಿದೆ’ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉಪ ಪೊಲೀಸ್ ಆಯುಕ್ತರ ದತ್ತಾ ನಲವಾಡೆ, ‘ಮೈಸೂರು ದಾಳಿಗೂ ಮುಂಚೆ 8 ಕೋಟಿ ರು. ಮೌಲ್ಯದ 5 ಕೇಜಿ ಮಫೆಡ್ರೋನ್ ಡ್ರಗ್ಸ್ ಸಿಕ್ಕಿತ್ತು. ಮೈಸೂರು ದಾಳಿ ನಂತರ 187 ಕೇಜಿ ಮೆಥೆಡ್ರೋನ್ ಡ್ರಗ್ಸ್ ಸಿಕ್ಕಿದ್ದು, ಅದರ ಮೌಲ್ಯ 382 ಕೋಟಿ ರುಪಾಯಿ. ಒಟ್ಟಾರೆ 390 ಕೋಟಿ ರು. ಮೌಲ್ಯದ 192 ಕೇಜಿ ಡ್ರಗ್ಸ್ ಇಡೀ ಪ್ರಕರಣದಲ್ಲಿ ಈವರೆಗೆ ಸಿಕ್ಕಿದೆ’ ಎಂದಿದ್ದಾರೆ.
‘ಈ ವರ್ಷದ ಏಪ್ರಿಲ್‌ನಲ್ಲಿ ಪಶ್ಚಿಮ ಮುಂಬೈನ ಸಾಕಿನಾಕಾದಲ್ಲಿ 52 ಗ್ರಾಂ ಮೆಫೆಡ್ರೋನ್‌ನೊಂದಿಗೆ ವ್ಯಕ್ತಿಯನ್ನು ಬಂಧಿಸಿದ ನಂತರ ಪ್ರಕರಣದ ತನಿಖೆ ಪ್ರಾರಂಭವಾಯಿತು ಮತ್ತು ಆತನ ವಿಚಾರಣೆಯ ಸಮಯದಲ್ಲಿ ಪೊಲೀಸರು ಇನ್ನೂ ಮೂವರು ವ್ಯಕ್ತಿಗಳನ್ನು ಪತ್ತೆಹಚ್ಚಿದರು. ಅವರಿಂದ 8 ಕೋಟಿ ರು. ಮೌಲ್ಯದ 4.53 ಕಿಲೋಗ್ರಾಂ ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
‘ಈ ಜಾಲದ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ಜು.25ರಂದು ಬಾಂದ್ರಾ ರಿಕ್ಲಮೇಶನ್‌ನ ಸಲೀಂ ಇಮ್ತಿಯಾಜ್ ಶೇಖ್ ಅಲಿಯಾಸ್ ಸಲೀಂ ಲ್ಯಾಂಡ್ಗಾ (45) ಬಂಧನಕ್ಕೆ ಒಳಗಾದ. ಆತ ನೀಡಿದ ಮಾಹಿತಿ ಆಧರಿಸಿ ಮೈಸೂರಿಗೆ ಪೊಲೀಸರು ಹೋದರು. ಮೈಸೂರು ರಿಂಗ್ ರಸ್ತೆಯ ಕಟ್ಟಡದ ಮುಂಭಾಗವು ಹೋಟೆಲ್ ಮತ್ತು ಗ್ಯಾರೇಜ್‌ನಂತೆ ಕಾಣುತ್ತಿತ್ತು. ಆದರೆ, ಅದನ್ನು ಪ್ರವೇಶಿಸಿದಾಗ, ನಮಗೆ ಮೆಫೆಡ್ರೋನ್ ಉತ್ಪಾದನಾ ಘಟಕ ಸಿಕ್ಕಿತು. ಇಲ್ಲಿಂದ ಅಕ್ರಮವಾಗಿ ಮುಂಬೈ ಮತ್ತು ಪಕ್ಕದ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಒಟ್ಟಾರೆಯಾಗಿ, ನಾವು 8 ಜನರನ್ನು ಬಂಧಿಸಿದ್ದೇವೆ ಮತ್ತು 390 ಕೋಟಿ ರು. ಮೌಲ್ಯದ 192 ಕೇಜಿ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದ್ದೇವೆ’ ಎಂದು ಡಿಸಿಪಿ ಮಾಹಿತಿ ನೀಡಿದರು.
‘ಮೈಸೂರಿನಲ್ಲಿ ಕಾರ್ಯಾಚರಣೆ ಜುಲೈ 26 ರಂದು ನಡೆದಿದ್ದು, ಶೇಖ್ ಜೊತೆಗೆ ಇನ್ನೂ 3 ವ್ಯಕ್ತಿಗಳನ್ನು ಬಂಧಿಸಲಾಗಿದೆ’ ಎಂದು ಅವರು ಹೇಳಿದರು.
‘ಇದು ದೊಡ್ಡ ಸರಪಳಿಯಾಗಿದ್ದು, ಹೆಚ್ಚಿನ ಬಂಧನಗಳ ಸಾಧ್ಯತೆಯಿದೆ. ಮೆಫೆಡ್ರೋನ್ ತಯಾರಿಸಲು ಅವರು ಎಲ್ಲಿಂದ ಮೂಲವಸ್ತು ಪಡೆದರು ಎಂಬುದನ್ನು ನಾವು ಪರಿಶೀಲಿಸುತ್ತಿದ್ದೇವೆ. ಇಲ್ಲಿಯವರೆಗೆ ಬಂಧಿಸಲಾದ 8 ಜನರ ಮೇಲೆ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (ಎನ್‌ಡಿಪಿಎಸ್) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ’ ಎಂದು ನಲವಾಡೆ ಹೇಳಿದರು.