ರಸ್ತೆ ಬದಿ ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದ ದಂಪತಿಗೆ ಅಪರಿಚಿತ ದುಷ್ಕರ್ಮಿಗಳು ಚಾಕು ತೋರಿಸಿ ಚಿನ್ನಾಭರಣ ಕಳವು

KannadaprabhaNewsNetwork | Updated : Oct 14 2024, 05:17 AM IST

ಸಾರಾಂಶ

ರಸ್ತೆ ಬದಿ ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದ ದಂಪತಿಗೆ ಅಪರಿಚಿತ ದುಷ್ಕರ್ಮಿಗಳು ಚಾಕು ತೋರಿಸಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ, ನಗದು ಹಣ ದೋಚಿರುವ ಘಟನೆ ತಾಲೂಕಿನ ಹಳೇಬೂದನೂರು ಬಳಿ ಮುಂಜಾನೆ ನಡೆದಿದೆ.

  ಮಂಡ್ಯ : ರಸ್ತೆ ಬದಿ ಕಾರು ನಿಲ್ಲಿಸಿ ನಿದ್ರೆಗೆ ಜಾರಿದ್ದ ದಂಪತಿಗೆ ಅಪರಿಚಿತ ದುಷ್ಕರ್ಮಿಗಳು ಚಾಕು ತೋರಿಸಿ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ, ನಗದು ಹಣ ದೋಚಿರುವ ಘಟನೆ ತಾಲೂಕಿನ ಹಳೇಬೂದನೂರು ಬಳಿ ಮುಂಜಾನೆ ನಡೆದಿದೆ.

ತುಮಕೂರಿನ ರೋಹಿತ್ ಮತ್ತು ಆತನ ಸಹೋದರ  ದಂಪತಿ ಚಿನ್ನಾಭರಣ, ಹಣ ಮತ್ತು ಮೊಬೈಲ್ ಕಳೆದುಕೊಂಡವರಾಗಿದ್ದಾರೆ. ರೋಹಿತ್ ಮತ್ತು ಆತನ ಸಹೋದರ  ದಂಪತಿ ಹಾಗೂ ಮಕ್ಕಳು ಸೇರಿ 7 ಮಂದಿ ಕಾರಿನಲ್ಲಿ ಮೈಸೂರಿಗೆ ತೆರಳಿದ್ದರು. ದಸರಾ ಉತ್ಸವವನ್ನು ನೋಡಿಕೊಂಡು ರಾತ್ರಿ ಮೈಸೂರಿನಲ್ಲೇ ಊಟ ಮಾಡಿ ತುಮಕೂರಿನತ್ತ ಪ್ರಯಾಣ ಬೆಳೆಸಿದ್ದರು. ಕಾರು ಚಾಲನೆ ಮಾಡುತ್ತಿದ್ದ ರೋಹಿತ್‌ಗೆ ಆಯಾಸವಾಗಿ ನಿದ್ದೆ ಬಂದಿತ್ತೆನ್ನಲಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರೂ ನಿದ್ರಿಸುತ್ತಿದ್ದರು.

ರೋಹಿತ್ ಕೂಡ ಪ್ರಯಾಣವನ್ನು ನಿಲ್ಲಿಸಿ ಹಳೇ ಬೂದನೂರು ಗ್ರಾಮದಿಂದ ಸ್ವಲ್ಪ ಮುಂದೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ನಿದ್ರೆಗೆ ಜಾರಿದ್ದರು.

ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ರಾತ್ರಿ ವೇಳೆ ಕಾರು ನಿಲ್ಲಿಸಿರುವುದನ್ನು ಕಂಡ ಮೂವರು ಅಪರಿಚಿತ ದುಷ್ಕರ್ಮಿಗಳು ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಬಳಿ ಬಂದು ಕಾರಿನಲ್ಲಿದ್ದವರನ್ನು ಎಚ್ಚರಗೊಳಿಸಿ ಚಾಕು ತೋರಿಸಿ ಬೆದರಿಸಿದರು. ಅವರ ಬಳಿ ಇದ್ದ ಒಂದು ಉಮಾ ಗೋಲ್ಡ್  ಸರ, ಮತ್ತೊಂದು 16 ಗ್ರಾಂ ತೂಕದ ಚಿನ್ನದ ಸರ, ಮೊಬೈಲ್ ಮತ್ತು ಅವರ ಬಳಿ ಇದ್ದ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಸುದ್ದಿ ತಿಳಿದು ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆರೋಪಿಗಳಿಗಾಗಿ ಶೋಧ ನಡೆಸಿದರೂ, ಪತ್ತೆಯಾಗಲಿಲ್ಲ. ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದರು. ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this article