ಬೆಂಗಳೂರು : ಮದುವೆಯಾಗುವಂತೆ ಕಿರುತೆರೆ ನಟಿ ಕಾಡಿಸಿದ್ದಕ್ಕೆ ಬೇಸತ್ತ ಸ್ನೇಹಿತ ಆತ್ಮಹತ್ಯೆ

KannadaprabhaNewsNetwork | Updated : Oct 03 2024, 05:16 AM IST

ಸಾರಾಂಶ

ತನ್ನನ್ನು ವಿವಾಹವಾಗುವಂತೆ ಕಿರುತೆರೆ ನಟಿ ಒತ್ತಾಯಿಸುತ್ತಿದ್ದರಿಂದ ಬೇಸರಗೊಂಡು ಆಕೆಯ ಮನೆಯಲ್ಲೇ ಗೆಳೆಯನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  ಬೆಂಗಳೂರು : ತನ್ನನ್ನು ವಿವಾಹವಾಗುವಂತೆ ಕಿರುತೆರೆ ನಟಿ ಒತ್ತಾಯಿಸುತ್ತಿದ್ದರಿಂದ ಬೇಸರಗೊಂಡು ಆಕೆಯ ಮನೆಯಲ್ಲೇ ಗೆಳೆಯನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಣನಕುಂಟೆ ನಿವಾಸಿ ಮದನ್ (25) ಮೃತ ದುರ್ದೈವಿ. ಬನ್ನೇರುಘಟ್ಟ ರಸ್ತೆಯ ಸಿ.ಕೆ.ಪಾಳ್ಯದ ಮಂಡಿ ಲೇಔಟ್‌ ನಿವಾಸಿ ನಟಿ ವೀಣಾ ಮನೆಯಲ್ಲಿ ಮಂಗಳವಾಳ ರಾತ್ರಿ ಈ ದುರಂತ ಸಂಭವಿಸಿದೆ. ಈ ಘಟನೆ ಸಂಬಂಧ ಮೃತನ ಪೋಷಕರ ದೂರು ಆಧರಿಸಿ ನಟಿ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಇ‍ವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮದನ್‌, ತನ್ನ ಪೋಷಕರ ಜತೆ ಕೋಣನಕುಂಟೆ ಸಮೀಪ ನೆಲೆಸಿದ್ದ. ತನ್ನ ಕಂಪನಿಯಿಂದ ಧಾರವಾಹಿಗಳಿಗೆ ಸೆಟ್ ಹಾಕಲು ತೆರಳಿದ್ದಾಗ ಆತನಿಗೆ ನಟಿ ವೀಣಾ ಪರಿಚಯವಾಗಿತ್ತು. ಕಾಲ ಕ್ರಮೇಣ ಇಬ್ಬರಲ್ಲೂ ಆತ್ಮೀಯತೆ ಮೂಡಿಸಿತ್ತು. ಈ ಸ್ನೇಹದಲ್ಲೇ ನಟಿ ಮನೆಗೆ ಮದನ್ ಭೇಟಿ ನೀಡುತ್ತಿದ್ದ. ಇನ್ನು ಮದನ್‌ ಜತೆ ಗೆಳೆತನಕ್ಕೂ ಮುನ್ನ ಬೇರೊಬ್ಬನ ಜತೆ ವೀಣಾ ಸ್ನೇಹದಲ್ಲಿದ್ದಳು. ಆದರೆ ವೈಯಕ್ತಿಕ ಕಾರಣಗಳಿಗೆ ಆತನಿಂದ ದೂರವಾಗಿದ್ದ ವೀಣಾ, ಮದನ್ ಪರಿಚಯವಾದ ಬಳಿಕ ಆತನೊಟ್ಟಿಗೆ ಸಲುಗೆ ಬೆಳೆಸಿದ್ದಳು ಎಂದು ತಿಳಿದು ಬಂದಿದೆ.

ಮದ್ಯ ಸೇವಿಸಿ ಆತ್ಮಹತ್ಯೆ: ಕೆಲ ದಿನಗಳಿಂದ ವೀಣಾ ಜತೆಯಲ್ಲೇ ಮದನ್ ಲಿವಿಂಗ್‌ ಟುಗೆದರ್‌ನಲ್ಲಿದ್ದ. ಇತ್ತೀಚೆಗೆ ಮದುವೆ ಮಾಡಿಕೊಳ್ಳುವಂತೆ ಮದನ್‌ಗೆ ಆಕೆ ಒತ್ತಾಯಿಸುತ್ತಿದ್ದಳು. ಆದರೆ ಈ ಪ್ರಸ್ತಾಪಕ್ಕೆ ಮದನ್ ಸಮ್ಮಿತಿಸಲಿಲ್ಲ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಸಣ್ಣ ಮಟ್ಟದ ಜಗಳವೂ ಆಗಿತ್ತು ಎನ್ನಲಾಗಿದೆ. ಎಂದಿನಂತೆ ಮಂಗಳವಾರ ರಾತ್ರಿ ವೀಣಾ ಮನೆಗೆ ಮದನ್ ತೆರಳಿದ್ದ. ಆ ವೇಳೆ ಇಬ್ಬರು ಮದ್ಯ ಸೇವಿಸಿದ್ದಾರೆ. ಸುಮಾರು 7 ಬಾಟಲ್‌ ಬಿಯರನ್ನು ಅವರು ಸೇವಿಸಿದ್ದರು. ಆಗ ಮದ್ಯದ ಮತ್ತಿನಲ್ಲಿ ಮದುವೆ ವಿಷಯ ಪ್ರಸ್ತಾಪವಾಗಿ ಮಾತಿನ ಚಕಮಕಿ ನಡೆದಿದೆ. ಇದಾದ ಬಳಿಕ ಕೋಣೆಗೆ ತೆರಳಿ ನೇಣು ಬಿಗಿದುಕೊಂಡು ಮದನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆಲ ಹೊತ್ತಿನ ಬಳಿಕ ಆತನ ಕೋಣೆಗೆ ವೀಣಾ ತೆರಳಿದ್ದಾಗ ನೇಣಿನ ಕುಣಿಕೆಯಲ್ಲಿ ಮೃತದೇಹ ಕಂಡು ಗಾಬರಿಗೊಂಡಿದ್ದಾಳೆ. ಕೂಡಲೇ ಮದನ್ ಪೋಷಕರಿಗೆ ಆಕೆ ವಿಷಯ ತಿಳಿಸಿದ್ದಾಳೆ.

ಆತನಿಂದಲೇ ಮದುವೆಗೆಒತ್ತಾಯ: ವೀಣಾ ಹೇಳಿಕೆ ಪ್ರಕರಣ ಸಂಬಂಧ ಕಿರುತೆರೆ ನಟಿ ವೀಣಾಳನ್ನು ವಶಕ್ಕೆ ಪಡೆದು ಹುಳಿಮಾವು ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೆ ತನ್ನ ಮೇಲೆ ಆರೋಪವನ್ನು ಆಕೆ ನಿರಾಕರಿಸಿದ್ದಾಳೆ. ನಾನು ವಿವಾಹವಾಗುವಂತೆ ಕಾಟ ಕೊಟ್ಟಿಲ್ಲ. ತನಗೆ ಆತ ಮದುವೆ ಆಗುವಂತೆ ಒತ್ತಾಯಿಸುತ್ತಿದ್ದ ಎಂದು ವೀಣಾ ಹೇಳಿರುವುದಾಗಿ ತಿಳಿದು ಬಂದಿದೆ.

Share this article