ಕನ್ನಡಪ್ರಭ ವಾರ್ತೆ ಆನೇಕಲ್
ತಾಲೂಕಿನಲ್ಲಿ ಒಂದೇ ದಿನ ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರ ಹತ್ಯೆಯಾಗಿದೆ. ಸೂರ್ಯನಗರ ಠಾಣಾ ವ್ಯಾಪ್ತಿಯ ಮರಸೂರಿನಲ್ಲಿ ಯುವಕನ ಹತ್ಯೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಯನ್ನು ಕೊಂದು ಸುಟ್ಟು ಹಾಕಲಾಗಿದೆ.
ಎರಡು ದಿನಗಳ ಹಿಂದಷ್ಟೇ ರೌಡಿಶೀಟರ್ ಮೆಂಟಲ್ ಮಂಜನನ್ನು ಇರಿದು ಹತ್ಯೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಮತ್ತೆರಡು ಕೊಲೆ ಆಗಿರುವುದು ತಾಲೂಕಿನ ಜನರಲ್ಲಿ ಆತಂಕ ಸೃಷ್ಟಿಸಿದೆ.
ಕೊಲೆ ಕೇಸಿನಲ್ಲಿ ಶಿಕ್ಷೆಗೆ ಒಳಗಾಗಿದ್ದ ಮರಸೂರಿನ ವಿಜಯಕುಮಾರ್ 5 ವರ್ಷಗಳ ನಂತರ ಬಿಡುಗಡೆ ಆಗಿ ಸ್ವಗ್ರಾಮಕ್ಕೆ ಬಂದಿದ್ದ. 10 ತಿಂಗಳಿನಿಂದ ತಾನಾಯಿತು ತನ್ನ ಪಾಡಾಯಿತು ಎಂದು ಇದ್ದ ವಿಜಯ್‌ಗೆ ಭಾನುವಾರ ಬೆಳಗಿನ ಜಾವ ಅನಾಮಿಕರು ಕರೆ ಮಾಡಿ ಮನೆಯಿಂದ ಹೊರ ಬರುವಂತೆ ತಿಳಿಸಿದ್ದಾರೆ.
ಆಟೋದಲ್ಲಿ ಬಂದರು ಎನ್ನಲಾದ ಆಗಂತಕರು ವಿಜಯ್‌ನನ್ನು ಮನಸೋ ಇಚ್ಛೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆತನ ತಂದೆ ತಿಳಿಸಿದ್ದಾರೆ.
ನಂತರ ಠಾಣೆಗೆ ಕರೆ ಮಾಡಿ ತನ್ನ ಮಗನ ಕೊಲೆಯಾಗಿರುವ ಬಗ್ಗೆ ತಿಳಿಸಿ, ರತ್ನತಟ್ಟನಹಳ್ಳಿ ನಿವಾಸಿ ಅರ್ಜುನ್ ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.
ಅರ್ಜುನ್ ಅಣ್ಣ ಮನೋಜ್ ಕೊಲೆಯಲ್ಲಿ ವಿಜಯ್ 2ನೇ ಆರೋಪಿಯಾಗಿದ್ದ. ಸ್ಥಳಕ್ಕೆ ಹಾಜರಾದ ಪೋಲಿಸರು ದೂರು ದಾಖಲಿಸಿಕೊಂಡು ಆರೋಪಿಗಳನ್ನು ಪತ್ತೆ ಮಾಡುವುದಾಗಿ ತಿಳಿಸಿದರು. ಸಮೀಪದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದು, ಒಂದಷ್ಟು ಮಾಹಿತಿ ದೊರೆತಿದೆ ಎಂದು ಎಸ್ಪಿ ಬಾಲದಂಡಿ ತಿಳಿಸಿದರು.
ಕೊಲೆ ಮಾಡಿ ಪೆಟ್ರೋಲ್ ಸುರಿದು ವಿದ್ಯಾರ್ಥಿಗೆ ಬೆಂಕಿ
ಅಲಯನ್ಸ್ ಕಾಲೇಜಿನಲ್ಲಿ ಬಿಟೆಕ್ ಓದುತ್ತಿದ್ದ ವಿದ್ಯಾರ್ಥಿ ಹರ್ಶಿತ್ ಕೊನಾಲ (22)ನನ್ನು ಅಪಹರಿಸಿ ಕೊಲೆ ಮಾಡಿ ಆನೇಕಲ್ ಸಮೀಪದ ಕಾಲನಾಯಕನಹಳ್ಳಿಯ ನೀಲಗಿರಿ ತೋಪಿನಲ್ಲಿ ಎಸೆದು ಹೋಗಿದ್ದಾರೆ.
ಮೂಲತಃ ಉತ್ತರಾಖಂಡದ ಹಾಲ್ದನಿ ಜಿಲ್ಲೆಯ ಹರ್ಷಿತ್ ಫೆ.22ರ ಸಂಜೆ ಕಾಲೇಜಿನಿಂದ ನಾಪತ್ತೆ ಆಗಿದ್ದ. ಕಾಲೇಜು ಮಂಡಳಿಯವರು ಪೋಷಕರಿಗೆ ಕರೆ ಮಾಡಿ ಹರ್ಷಿತ್ ಬಗ್ಗೆ ವಿಚಾರಿಸಿದಾಗ ಆತ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ಕಾಲೇಜಿನ ಆಡಳಿತ ಮಂಡಳಿಯವರು ಕೆಲ ಮಾಹಿತಿ ಆಧರಿಸಿ ನೆರೆಯ ತಮಿಳುನಾಡಿನ ಥಳಿ ಠಾಣೆಯಲ್ಲಿ ಹರ್ಶಿತ್ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಈ ನಡುವೆ ಭಾನುವಾರ ಬೆಳಗ್ಗೆ ದಾರಿಹೋಕನೊಬ್ಬ ತೋಪಿನೊಳಗೆ ಹೋದಾಗ ಕೆಟ್ಟ ವಾಸನೆ ಬಂದಿದೆ. ಬಳಿಕ ಅರೆ ಬೆಂದು ಕೊಳೆತ ಶವವನ್ನು ಕಂಡು ಆನೇಕಲ್ ಠಾಣೆಗೆ ಕರೆ ಮಾಡಿದ್ದಾನೆ.
ಪೋಲಿಸರು ಶವದ ಬಳಿ ಕಂಡು ಬಂದ ಬ್ಯಾಗ್, ಐಡಿ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನೋಡಿ ಸಮೀಪದ ಠಾಣೆಗಳಿಗೆ ಕರೆ ಮಾಡಿ ನಾಪತ್ತೆ ಕೇಸ್ ದಾಖಲಾಗಿದೆಯಾ ಎಂದು ವಿಚಾರಿಸಿದಾಗ ಥಳಿ ಠಾಣೆಯಿಂದ ಮಾಹಿತಿ ಸಿಕ್ಕಿದೆ.
ಕೆಲ ದಿನಗಳ ಮೊದಲೇ ಕೊಲೆ ಮಾಡಿ ಶವವನ್ನು ನೀಲಗಿರಿ ತೋಪಿಗೆ ತಂದು ಗುರುತು ಸಿಗದಂತೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದು ಕಂಡು ಬಂದಿದೆ.
ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲ ದಂಡಿ ಎಎಸ್ಪಿ ಪುರುಷೋತ್ತಮ್ ಭೇಟಿ ನೀಡಿ ಮುಂದಿನ ಕ್ರಮಕ್ಕೆ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿಗೆ ತಿಳಿಸಿದ್ದಾರೆ.