ಡ್ರಗ್ಸ್ ಮಾರಾಟಕ್ಕೆ ಬಂದಿದ್ದಾನೆ ಎಂದು ಶಂಕಿಸಿ ವಿದೇಶಿ ಪ್ರಜೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆ

KannadaprabhaNewsNetwork | Updated : Feb 21 2025, 04:19 AM IST

ಸಾರಾಂಶ

ಡ್ರಗ್ಸ್ ಮಾರಾಟಕ್ಕೆ ಬಂದಿದ್ದಾನೆ ಎಂದು ಶಂಕಿಸಿ ವಿದೇಶಿ ಪ್ರಜೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದ ಕೋಳಿ ಅಂಗಡಿ ಕೆಲಸಗಾರನೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

 ಬೆಂಗಳೂರು : ಡ್ರಗ್ಸ್ ಮಾರಾಟಕ್ಕೆ ಬಂದಿದ್ದಾನೆ ಎಂದು ಶಂಕಿಸಿ ವಿದೇಶಿ ಪ್ರಜೆ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದ ಕೋಳಿ ಅಂಗಡಿ ಕೆಲಸಗಾರನೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬೆಳ್ಳಹಳ್ಳಿ ಗ್ರಾಮದ ಯಾಸೀನ್ ಖಾನ್‌ ಅಲಿಯಾಸ್ ಡ್ರ್ಯಾಗನ್ ಬಂಧಿತನಾಗಿದ್ದು, ತನ್ನ ಕೋಳಿ ಮಾರಾಟ ಮಳಿಗೆ ಬಳಿ ಬುಧವಾರ ನೈಜೇರಿಯಾದ ಅಡೆವಲೆ ಸಿಕಿರು ಬಂದಿದ್ದಾಗ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಸ್ನೇಹಿತ ಜತೆ ಕಾರಿನಲ್ಲಿ ಬೆಳಗ್ಗೆ ಬೆಳ್ಳಹಳ್ಳಿಗೆ ಸಿಕಿರು ಬಂದ ವೇಳೆ ಕೋಳಿ ಅಂಗಡಿಯಲ್ಲಿದ್ದ ಯಾಸೀನ್, ‘ಯಾಕೆ ಬಂದಿರೋದು?’ ಎಂದು ಪ್ರಶ್ನಿಸಿದ್ದಾನೆ. ಈ ಮಾತಿಗೆ ಆತ ಜವಾಬು ಕೊಟ್ಟಿದ್ದಾನೆ. ‘ನೀನು ಡ್ರಗ್ಸ್ ಮಾರಾಟಕ್ಕೆ ಬಂದಿದ್ದೀಯಾ’ ಎಂದು ಯಾಸೀನ್‌ ಕೇಳಿದ್ದಾನೆ. ಆತ ಪ್ರತಿಕ್ರಿಯೆ ನೀಡದಿದ್ದಾಗ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಸಿಟ್ಟಿಗೆದ್ದ ವಿದೇಶಿ ಪ್ರಜೆ, ಯಾಸಿನ್‌ಗೆ ಎರಡು ಬಾರಿಸಿದ್ದಾನೆ. ಇದರಿಂದ ಕೆರಳಿದ ಯಾಸಿನ್‌, ಅಲ್ಲೇ ಬಿದ್ದಿದ್ದ ಮರದ ತುಂಡುಗಳನ್ನು ತೆಗೆದುಕೊಂಡು ವಿದೇಶಿಗನ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಹಲ್ಲೆಯಿಂದ ಗಾಯಗೊಂಡು ಆತ ಮೃತಪಟ್ಟಿದ್ದಾನೆ.

ಪೊಲೀಸರಿಗೆ ಆರೋಪಿಯೇ ತಿಳಿಸಿದ:

ಈ ಘಟನೆ ಬಳಿಕ ಡ್ರಗ್ಸ್ ಮಾರಾಟಕ್ಕೆ ಬಂದಿದ್ದ ನೈಜೀರಿಯಾ ಪ್ರಜೆಯನ್ನು ಹಿಡಿದಿರುವುದಾಗಿ ಪೊಲೀಸರಿಗೆ ಯಾಸಿನ್ ಕರೆ ಮಾಡಿ ಮಾಹಿತಿ ಕೊಟ್ಟಿದ್ದಾನೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ತೆರಳುವ ಮುನ್ನ ವಿದೇಶಿ ಪ್ರಜೆ ಮೃತಪಟ್ಟಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿದೇಶಿಗನ ಬಳಿ ಡ್ರಗ್ಸ್‌ ಸಿಕ್ಕಿಲ್ಲ: ಡಿಸಿಪಿ ಸ್ಪಷ್ಟನೆ 

ಮೃತ ವಿದೇಶಿ ಪ್ರಜೆ ನೈಜೀರಿಯಾ ದೇಶದವನು ಎಂಬುದು ಗೊತ್ತಾಗಿದೆ. ಆತನ ಪಾಸ್‌ಪೋರ್ಟ್ ಪತ್ತೆಯಾಗಿದ್ದು, ಈತನ ಪೂರ್ವಾಪರ ಮಾಹಿತಿ ನೀಡುವಂತೆ ವಿದೇಶಿಯರ ಪ್ರಾದೇಶಿಕ ಕಚೇರಿಗೆ (ಎಫ್‌ಆರ್‌ಓ) ಕೋರಿದ್ದೇವೆ. ಮೃತನ ಬಳಿ ಡ್ರಗ್ಸ್ ಪತ್ತೆಯಾಗಿಲ್ಲ. ಅಲ್ಲದೆ ರಾಜ್ಯದ ಯಾವುದೇ ಠಾಣೆಯಲ್ಲಿ ಆತನ ಮೇಲೆ ಡ್ರಗ್ಸ್ ಕೇಸ್ ಸಹ ದಾಖಲಾಗಿಲ್ಲ ಎಂಬುದು ಖಚಿತವಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಎ.ಜೆ.ಸಜೀತ್‌ ತಿಳಿಸಿದ್ದಾರೆ.

Share this article