ಕನ್ನಡಪ್ರಭ ವಾರ್ತೆ ಬೆಂಗಳೂರು
ಸರಕು ಸಾಗಣೆ ಆಟೋ ಪಲ್ಟಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಪಾದಚಾರಿ ಮಾರ್ಗದಲ್ಲಿ ಒದ್ದಾಡಿ ಪ್ರಾಣಬಿಟ್ಟಿರುವ ಅಮಾನವೀಯ ಘಟನೆ ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ವಯಸ್ಸು ಸುಮಾರು 35 ವರ್ಷ ಇರಬಹುದು. ಶನಿವಾರ ರಾತ್ರಿ ಸುಮಾರು 11.30ಕ್ಕೆ ಡೈರಿ ಸರ್ಕಲ್ ಕಡೆಯಿಂದ ತಾವರೆಕೆರೆ ಕಡೆಗೆ ತೆರಳುವಾಗ ಮಾರ್ಗ ಮಧ್ಯೆ ಕೆಎಂಎಫ್ ಎದುರು ಈ ಘಟನೆ ನಡೆದಿದೆ. ಘಟನೆ ಬಳಿಕ ಸರಕು ಸಾಗಣೆ ಆಟೋ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ. ಮೃತ ಅಪರಿಚಿತ ವ್ಯಕ್ತಿಯ ಈ ಸರಕು ಸಾಗಣೆ ಆಟೋ ಚಾಲಕನ ಸ್ನೇಹಿತ ಇರಬಹುದು ಶಂಕಿಸಲಾಗಿದೆ.
ಏನಿದು ಘಟನೆ?ಆಹಾರ ಸಾಮಗ್ರಿಗಳನ್ನು ತುಂಬಿಕೊಂಡು ಹೊರಟ್ಟಿದ್ದ ಆಟೋ, ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿದೆ. ಈ ವೇಳೆ ಚಾಲಕನ ಎಡಭಾಗದಲ್ಲಿ ಕುಳಿತ್ತಿದ್ದ ವ್ಯಕ್ತಿಯ ಮೇಲೆ ಆಟೋ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ವೇಳೆ ಸ್ಥಳೀಯರ ನೆರವಿನಿಂದ ಆ ಆಟೋವನ್ನು ಮೇಲಕ್ಕೆ ಎತ್ತಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸ್ನೇಹಿತನನ್ನು ಪಾದಚಾರಿ ಮಾರ್ಗದಲ್ಲಿ ಕೂರಿಸಲಾಗಿದೆ. ಬಳಿಕ ಸ್ಥಳೀಯರು ಸ್ಥಳದಿಂದ ತೆರಳಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಸ್ನೇಹಿತನನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಸರಕು ಸಾಗಣೆ ಆಟೋದೊಂದಿಗೆ ಪರಾರಿಯಾಗಿದ್ದಾನೆ.
ಬೆಳಗ್ಗೆ ದಾರಿಹೋಕರಿಂದ ಮಾಹಿತಿ:ಭಾನುವಾರ ಬೆಳಗ್ಗೆ ದಾರಿಹೋಕರು ಪಾದಚಾರಿ ಮಾರ್ಗದಲ್ಲಿ ಅಪರಿಚಿತ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ನೀಡಿದ ಮಾಹಿತಿ ಮೇರೆಗೆ ಮೈಕೋ ಲೇಔಟ್ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಮೃತ ವ್ಯಕ್ತಿಯ ಹೆಸರು, ವಿಳಾಸ, ಗುರುತು ಪತ್ತೆಯಾಗಿಲ್ಲ.
ಚಿಕಿತ್ಸೆ ಸಿಕ್ಕಿದ್ದರೆ ಬದುಕುವ ಸಾಧ್ಯತೆ ಇತ್ತು:ರಾತ್ರಿ ಘಟನೆ ಬಳಿಕ ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು. ಆದರೆ, ಸರಕು ಸಾಗಣೆ ಆಟೋ ಚಾಲಕ ಎಸ್ಕೇಪ್ ಆಗಿದ್ದಾನೆ. ಸ್ಥಳೀಯರು ಸಹ ಅಪಘಾತದ ಬಗ್ಗೆ ಮಾಹಿತಿ ನೀಡಿಲ್ಲ. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿಲ್ಲ. ಹೀಗಾಗಿ ಗಾಯಾಳು ವ್ಯಕ್ತಿ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.
ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮರಾ ಆಧರಿಸಿ ಆ ಸರಕು ಸಾಗಣೆ ಆಟೋ ಹಾಗೂ ಅದರ ಚಾಲಕನ ಪತ್ತೆಗೆ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಮೈಕೋ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.