ಕನ್ನಡಪ್ರಭ ವಾರ್ತೆ ಬೆಂಗಳೂರು
ಕದ್ದ ದ್ವಿಚಕ್ರ ವಾಹನಗಳಲ್ಲಿ ಸುತ್ತಾಡಿ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡುತ್ತಿದ್ದ ರೌಡಿ ಶೀಟರ್‌ನನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಗಡಿ ರಸ್ತೆ ನಿವಾಸಿ ಕುಮಾರೇಶ್(33) ಬಂಧಿತ. ಆರೋಪಿಯಿಂದ ₹3 ಲಕ್ಷ ಮೌಲ್ಯದ ಏಳು ದ್ವಿಚಕ್ರ ವಾಹನಗಳು ಹಾಗೂ ಆರು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಅಶೋಕನಗರ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನವಾಗಿತ್ತು.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಕುಮಾರೇಶ್ ಕಾಟನ್‌ಪೇಟೆ ಠಾಣೆ ರೌಡಿ ಶೀಟರ್ ಆಗಿದ್ದಾನೆ. ಅಪರಾಧ ಹಿನ್ನೆಲೆಯ ಈತ ಈ ಹಿಂದೆ ಹಲವು ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ.
ಜಾಮೀನು ಪಡೆದು ಹೊರಬಂದ ಬಳಿಕವೂ ಅಪರಾಧ ಕೃತ್ಯಗಳನ್ನು ಮುಂದುವರೆಸಿದ್ದ. ನಗರದ ವಿವಿಧೆಡೆ ಸುತ್ತಾಡಿ ಮನೆ, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ.
ಬಳಿಕ ಆ ದ್ವಿಚಕ್ರ ವಾಹನ ಬಳಸಿಕೊಂಡು ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡುತ್ತಿದ್ದ. ಬಳಿಕ ನಿರ್ಜನ ಪ್ರದೇಶಗಳಲ್ಲಿ ಆ ದ್ವಿಚಕ್ರ ವಾಹನ ಬಿಟ್ಟು ಪರಾರಿಯಾಗುವ ಪ್ರವೃತ್ತಿ ಹೊಂದಿದ್ದಾನೆ.
ಈತನ ಬಂಧನದಿಂದ ಅಶೋಕನಗರ, ಕಲಾಸಿಪಾಳ್ಯ, ಕಾಟನ್‌ಪೇಟೆ, ರಾಜಗೋಪಾಲನಗರ, ಅತ್ತಿಬೆಲೆ ಠಾಣೆಗಳಲ್ಲಿ ದಾಖಲಾಗಿದ್ದ ಏಳು ದ್ವಿಚಕ್ರ ವಾಹನ ಕಳವು ಹಾಗೂ ಆರು ಮೊಬೈಲ್ ಸುಲಿಗೆ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.