ಭಾರತದ ವಿರುದ್ಧ ಜಿಹಾದಿ ಯುದ್ಧಕ್ಕೆ ಮುಸ್ಲಿಂ ಯುವ ಸಮುದಾಯ ಸಜ್ಜುಗೊಳಿಸುತ್ತಿದ್ದ ಶಂಕಿತ ಉಗ್ರ ಬಂಧನ

KannadaprabhaNewsNetwork |  
Published : Sep 01, 2024, 01:58 AM ISTUpdated : Sep 01, 2024, 04:31 AM IST
terrorist

ಸಾರಾಂಶ

ಪಾಕಿಸ್ತಾನ ಮೂಲದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಶಂಕಿತ ಉಗ್ರನನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ತಮಿಳುನಾಡು ಮೂಲದ ಅಜೀಜ್ ಅಹ್ಮದ್‌ ಅಲಿಯಾಸ್‌ ಜಲೀಲ್ ಅಜೀಜ್‌ ಬಂಧಿತ 

 ಬೆಂಗಳೂರು : ಭಾರತದ ವಿರುದ್ಧ ಜಿಹಾದಿ ಯುದ್ಧಕ್ಕೆ ಇಲ್ಲಿನ ಮುಸ್ಲಿಂ ಯುವ ಸಮುದಾಯವನ್ನು ಸಜ್ಜುಗೊಳಿಸುತ್ತಿದ್ದ ಪಾಕಿಸ್ತಾನ ಮೂಲದ ಸಂಘಟನೆಯಲ್ಲಿ ಸಕ್ರಿಯನಾಗಿದ್ದ ಶಂಕಿತ ಉಗ್ರನೊಬ್ಬನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಅಜೀಜ್ ಅಹ್ಮದ್‌ ಅಲಿಯಾಸ್‌ ಜಲೀಲ್ ಅಜೀಜ್‌ ಬಂಧಿತನಾಗಿದ್ದು, ಸೌದಿ ಅರೇಬಿಯಾಕ್ಕೆ ಪರಾರಿಯಾಗಲು ಮುಂದಾಗಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಅಜೀಜ್‌ನನ್ನು ಕೆಐಎ ವಲಸೆ ವಿಭಾಗದ ಸಹಕಾರದಲ್ಲಿ ಎನ್‌ಐಎ ಶುಕ್ರವಾರ ರಾತ್ರಿ ಸೆರೆಹಿಡಿದು ಕರೆದೊಯ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂಲಭೂತವಾದಿ ಸಂಘಟನೆ ಕಟ್ಟಿದ್ದ ಅಜೀಜ್‌:  ಹಲವು ದಿನಗಳಿಂದ ಪಾಕಿಸ್ತಾನ ಮೂಲದ ‘ಹಿಜಬ್‌-ಉತ್‌-ಥರಿರ್‌’ ಹೆಸರಿನ ಸಂಘಟನೆಯಲ್ಲಿ ಅಜೀಜ್ ಸಕ್ರಿಯವಾಗಿದ್ದ. ಈ ಸಂಘಟನೆ ಮೂಲಕ ಮೂಲಕ ಮುಸ್ಲಿಂ ಸಮುದಾಯದ ಯುವ ಸಮೂಹಕ್ಕೆ ಮೂಲಭೂತವಾದ ಬೋಧಿಸಿ ಭಾರತದ ವಿರುದ್ಧ ಜಿಹಾದಿ ಯುದ್ಧಕ್ಕೆ ಆತ ಸಜ್ಜುಗೊಳಿಸುತ್ತಿದ್ದ. ಈ ಸಂಘಟನೆಯು ಪಾಕಿಸ್ತಾನ ಇಸ್ಲಾಂ ಧಾರ್ಮಿಕ ಗುರು ತಾಖಿ ಅಲ್‌ ದಿನಾಲ್‌ ನಭಾನಿ ಸಂದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಶ್ರಮಿಸುತ್ತಿದೆ ಎಂದು ಎನ್‌ಐಎ ಹೇಳಿದೆ.

ಈ ಜಿಹಾದಿ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದ ಎನ್‌ಎಐ, ಕೆಲ ದಿನಗಳ ಹಿಂದೆ ತಮಿಳುನಾಡಿನಲ್ಲಿ 6 ಮಂದಿ ಶಂಕಿತ ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿಯಿತು. ತನ್ನ ಬೆನ್ನ ಹಿಂದೆ ಎನ್‌ಐಎ ಬಿದ್ದಿರುವ ವಿಷಯ ತಿಳಿದು ಭೀತಿಗೊಂಡ ಅಜೀಜ್‌, ಕೂಡಲೇ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಶುಕ್ರವಾರ ರಾತ್ರಿ ಸೌದಿ ಅರೇಬಿಯಾಕ್ಕೆ ಪರಾರಿಯಾಗಲು ಯೋಜಿಸಿದ್ದ. ಆದರೆ ಆತನ ಬೆನ್ನಟ್ಟಿದ್ದ ಎನ್‌ಐಎಗೆ ಅಜೀಜ್‌ ಪಲಾಯನದ ಕುರಿತು ಸುಳಿವು ಸಿಕ್ಕಿತು. ಕೂಡಲೇ ಎನ್‌ಐಎ ಈ ಬಗ್ಗೆ ಕೆಐಎ ವಲಸೆ ವಿಭಾಗದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಅಂತಿಮವಾಗಿ ರಾತ್ರಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾಗ ಅಜೀಜ್‌ ಎನ್‌ಐಎ ಬಲೆಗೆ ಬಿದ್ದಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು