ಯಲ್ಲಾಪುರ ಬಳಿ ಭೀಕರ ಅಪಘಾತ: 10 ಜನರ ಸಾವು ! ಸಂತೆಗೆ ಹೊರಟ ಲಾರಿ ಉರುಳಿ ದುರ್ಘಟನೆ

Published : Jan 23, 2025, 05:33 AM IST
tipper lorry accident

ಸಾರಾಂಶ

ತರಕಾರಿ - ಹಣ್ಣು ತುಂಬಿದ್ದ ಲಾರಿ ಕಂದಕಕ್ಕೆ ಉರುಳಿ ಸಂಭವಿಸಿದ ದುರ್ಘಟನೆಯಲ್ಲಿ 10 ಜನರು ಮೃತಪಟ್ಟು, 19 ಜನರು ಗಾಯಗೊಂಡ ಘಟನೆ ತಾಲೂಕಿನ ಗುಳ್ಳಾಪುರ ಬಳಿ ಬುಧವಾರ ಬೆಳಗಿನ ಜಾವ ನಡೆದಿದೆ.

ಯಲ್ಲಾಪುರ : ತರಕಾರಿ - ಹಣ್ಣು ತುಂಬಿದ್ದ ಲಾರಿ ಕಂದಕಕ್ಕೆ ಉರುಳಿ ಸಂಭವಿಸಿದ ದುರ್ಘಟನೆಯಲ್ಲಿ 10 ಜನರು ಮೃತಪಟ್ಟು, 19 ಜನರು ಗಾಯಗೊಂಡ ಘಟನೆ ತಾಲೂಕಿನ ಗುಳ್ಳಾಪುರ ಬಳಿ ಬುಧವಾರ ಬೆಳಗಿನ ಜಾವ ನಡೆದಿದೆ. ಗಾಯಗೊಂಡವರ ಪೈಕಿ 7 ಜನರ ಸ್ಥಿತಿ ಗಂಭೀರವಾಗಿದೆ. ಮೃತರೆಲ್ಲಾ ಹಾವೇರಿ ಜಿಲ್ಲೆ ಸವಣೂರಿನವರು.ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ 3 ಲಕ್ಷ ರು. ಮತ್ತು ಕೇಂದ್ರ ಸರ್ಕಾರದಿಂದ 2 ಲಕ್ಷ ರು. ಸೇರಿ ತಲಾ ಐದು ಲಕ್ಷ ರು. ಪರಿಹಾರ ಘೋಷಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು 11 ಜನರು ಮಣ್ಣಿನಲ್ಲಿ ಕೊಚ್ಚಿ ಹೋಗಿದ್ದ ದುರಂತ ಮಾಸುವ ಮುನ್ನವೇ ಜಿಲ್ಲೆ ಮತ್ತೊಂದು ಭೀಕರ ದುರಂತವನ್ನು ಕಂಡಿದೆ.

ಏನಾಯ್ತು?:

ಹಾವೇರಿ ಜಿಲ್ಲೆಯ ಸವಣೂರಿನಿಂದ ಹಣ್ಣು - ತರಕಾರಿಗಳನ್ನು ಲಾರಿಯಲ್ಲಿ ಹೇರಿಕೊಂಡು ವ್ಯಾಪಾರಸ್ಥರು ಕುಮಟಾದಲ್ಲಿ ಬುಧವಾರದ ಸಂತೆಗೆ ಹೊರಟಿದ್ದರು. ಮಂಗಳವಾರ ರಾತ್ರಿ ಸುಮಾರು 10.30ರ ವೇಳೆಗೆ ಲಾರಿ ಸವಣೂರಿನಿಂದ ಹೊರಟಿದ್ದು, ಲಾರಿಯಲ್ಲಿ ಚಾಲಕ ಸೇರಿ ಒಟ್ಟು 29 ಜನ ಇದ್ದರು.

ಯಲ್ಲಾಪುರ ಸಮೀಪದ ಗುಳ್ಳಾಪುರ ಪೆಟ್ರೋಲ್ ಬಂಕ್ ಬಳಿ ಬುಧವಾರ ಬೆಳಗಿನ ಜಾವ ಸುಮಾರು 4.30ರ ವೇಳೆಗೆ ಚಾಲಕನ ನಿಯಂತ್ರಣ ತಪ್ಪಿದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅನಂತರ ಹೆದ್ದಾರಿ ಪಕ್ಕದ 5 ಅಡಿ ಆಳದ ಕಂದಕಕ್ಕೆ ಉರುಳಿ ಬುಡಮೇಲಾಗಿ ಬಿದ್ದಿದೆ. ಲಾರಿಯ ಮಧ್ಯದಲ್ಲಿ ತರಕಾರಿಯ ಮೇಲೆ ಮಲಗಿದ್ದ 9 ಜನರ ತರಕಾರಿ ಮೂಟೆಯ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಒಬ್ಬರು ಸೇರಿ ಒಟ್ಟು 10 ಸಾವು ಕಂಡಿದ್ದಾರೆ.

ಕಾರಣ ಏನು?:

ದಟ್ಟವಾದ ಮಂಜು ಕವಿದ ಕಾರಣ ಚಾಲಕ ನಿಜಾಮ್‌ಗೆ ದಾರಿ ಕಾಣದ್ದರಿಂದಲೋ ಅಥವಾ ತೂಕಡಿಸಿದ್ದರಿಂದಲೋ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ ಬದುಕುಳಿದವರ ರೋಧನ ಮಗಿಲು ಮುಟ್ಟಿತ್ತು. ಅರ್ಧ ಗಂಟೆಯ ನಂತರ ಅಂದರೆ ಸುಮಾರು 5 ಗಂಟೆಗೆ 112 ವಾಹನ ಸ್ಥಳಕ್ಕೆ ಬಂದು ರಕ್ಷಣಾ ಕಾರ್ಯ ನಡೆಸಿತು. ಮೃತರು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಮೃತರು:

ಫಯಾಜ್‌ ಇಮಾಮ್‌ಸಾಬ್‌ ಜಮಖಂಡಿ (45), ವಾಸಿಮ್‌ ಮುಲ್ಲಾ ಮುಡಿಗೇರಿ(25), ಇಜಾಜ್‌ ಮಸ್‌ತಾಕ್‌ ಮುಲ್ಲಾ(20), ಸಾದುಕ್‌ ಬಾಷಾ ಪರಾಸ್‌(30), ಗುಲಾಮ್‌ ಹುಸೇನ್‌ ಗುಡುಸಾಬ್‌ ಜವಳಿ(25), ಇಮ್ತಿಯಾಜ್‌ ಮೊಹಮ್ಮದ್‌ ಜಾಫರ್‌ ಮುಡಗೇರಿ(40), ಅಲ್ಪಾಜ್‌ ಜಾಫರ್ ಮಂಡಕ್ಕಿ (25), ಜಿಲಾನಿ ಅಬ್ದುಲ್‌ ಗಫಾರ್‌ ಜಕಾತಿ(20), ಅಸ್ಲಾಂ ಬಾಬು ಬೆಣ್ಣಿ(24) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಲಾಲ್‌ ತಾರಾ(30) ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

7 ಜನರಿಗೆ ಗಂಭೀರ ಗಾಯ:

ಅಶ್ರಫ್‌ ನಬಿ ಸಾಬ್‌(18), ಖ್ವಾಜಾ ಮೊಹಮ್ಮದ್‌ ಗೌಸ್ ಕಿಸಮತಗಾರ್‌(22), ಮೊಹಮ್ಮದ್‌ ಸಾಧಿಕ್‌ ಖ್ವಾಜಾಮೀರ್‌ ಬತ್ತೇರಿ(25), ಖ್ವಾಜಾ ಮೈನು ಬಷೀರ್‌ ಅಹಮ್ಮದ್‌ ಕಾಲೆಕಾಲನ್ನವರ್‌(24), ನಿಜಾಮ್‌(30), ಮದ್ಲಾನ್‌ ಸಾಬ್‌(24), ಜಾಫರ್‌ ಮುಕ್ತಿಯಾರ್‌ ಪ್ರಾಸ್‌(22) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

12 ಜನರಿಗೆ ಗಾಯ:

ಮಲ್ಲಿಕ್ ರೆಹಾನ್‌ ಮೊಹಮ್ಮದ್‌ ರಫೀಕ್‌ ಅಕ್ಕಿ(21), ಅಪ್ತಾಬ್‌ ಬಷೀರ್‌ ಅಹಮಮದ್‌ ಮಂಚಕಿ(23), ಗೌಸ್‌ ಮೈದ್ದೀನ್‌ ಅಬ್ದುಲ್‌ ಗಣಿ ಬೊಮ್ಮನಹಳ್ಳಿ(30), ಇರ್ಫಾನ್‌ ಮುಕ್ಷುಲ್‌ ಗುಡಿಗೇರಿ(17), ನೂರ ಅಹಮ್ಮದ್‌ ಮೊಹಮ್ಮದ್‌ ಜಾಪರ್‌ ಜಮಖಂಡಿ(30), ಅಪ್ಸರ್‌ ಕಾಂಜಾಡ್‌(34), ಸುಭಾಷ ಗೌಡರ್‌(17), ಖಾದ್ರಿ ಗೂಡು ಸಾಬ್‌ ಜವಳಿ(26), ಸಾಬೀರ್‌ ಅಹಮ್ಮದ ಬಾಬಾ ಹುಸೇನ್‌ ಗವಾರಿ(38), ಮರ್ದಾನ್‌ ಸಾಬ್‌ ಕಮಲ್‌ ಬಾಷಾ ತಾರಾಡಿಗ(22), ರಪಾಯಿ ಬಾಕರ್‌ ಚೌರ(21), ಮೊಹಮ್ಮದ್‌ ಗೌಸ್ ಗಪಾರ್‌ ಅಕ್ತರ್‌(22) ಎಂಬವರು ಸಣ್ಣಪುಟ್ಟ ಗಾಯಗೊಂಡಿದ್ದು,12 ಜನರಿಗೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬೆಳಗ್ಗೆ 5 ಗಂಟೆಗೆ ರಕ್ಷಣಾ ಕಾರ್ಯ

ಬುಧವಾರ ನಸುಕಿನ 4.30ಕ್ಕೆ ಅಪಘಾತ ಉಂಟಾಗಿ ತರಕಾರಿ ಮಾರಾಟಗಾರರ ಆಕ್ರಂದನ ಕೇಳಿ ಬಂತು. ಮಾಹಿತಿ ಪಡೆದ ಪೊಲೀಸರು 5 ಗಂಟೆಗೆ ಹಾಜರಾಗಿ ಕಾರ್ಯಾಚರಣೆ ಆರಂಭಿಸಿದರು. 6 ಗಂಟೆಗೆ ಲಾರಿಯನ್ನು ಮೇಲಕ್ಕೆತ್ತಿ, ಅಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲಾಯಿತು. 9 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ಹುಬ್ಬಳ್ಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟರು. ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಶಿಗ್ಗಾಂವಿ ಶಾಸಕ ಯಾಸೀರ್‌ ಖಾನ್‌ ಪಠಾಣ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಸೂಕ್ತ ಚಿಕಿತ್ಸೆಗೆ ಸೂಚನೆ ನೀಡಿದರು.

ಸಂತ್ರಸ್ತರಿಗೆ 2 ಲಕ್ಷ ರು. ಪರಿಹಾರ: ಮೋದಿ

ನವದೆಹಲಿ: ಯಲ್ಲಾಪುರ ಬಳಿ ಲಾರಿ ಪಲ್ಟಿಯಾಗಿ, 10 ಮಂದಿ ಮೃತಪಟ್ಟ ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೃತರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಯಿಂದ 2 ಲಕ್ಷ ರು. ಹಾಗೂ ಗಾಯಾಳುಗಳಿಗೆ 50 ಸಾವಿರ ರು. ಪರಿಹಾರ ಘೋಷಿಸಿದ್ದಾರೆ. ‘ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತದಿಂದ ಅತೀವ ದುಃಖವಾಗಿದೆ. ಜೀವ ಕಳೆದುಕೊಂಡವರಿಗೆ ಸಂತಾಪಗಳು. ಗಾಯಾಳುಗಳು ಅತಿ ಶೀಘ್ರದಲ್ಲಿ ಗುಣಮುಖರಾಗಲಿ. ಸ್ಥಳೀಯ ಆಡಳಿತ ಸಂತ್ರಸ್ತರಿಗೆ ನೆರವು ನೀಡುತ್ತಿದೆ’ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!