₹75 ಲಕ್ಷದ ವಜ್ರದ ಉಂಗುರ ಎಗರಿಸಿದ ಬಿಳಿಗಡ್ಡದಾರಿ; ನಕಲಿ ವಜ್ರ ಇಟ್ಟು ಅಸಲಿ ಎಗರಿಸಿ ಪರಾರಿ

KannadaprabhaNewsNetwork | Published : Feb 25, 2024 1:47 AM

ಸಾರಾಂಶ

ನಗರದ ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಶೋ ರೂಮ್‌ಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಖತರ್ನಾಕ್‌ ವ್ಯಕ್ತಿಯೊಬ್ಬ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ನಕಲಿ ವಜ್ರದ ಉಂಗುರ ಇರಿಸಿ ಬರೊಬ್ಬರಿ ₹75 ಲಕ್ಷ ಮೌಲ್ಯದ ಅಸಲಿ ವಜ್ರದ ಉಂಗುರ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಪ್ರತಿಷ್ಠಿತ ಚಿನ್ನಾಭರಣ ಮಾರಾಟ ಶೋ ರೂಮ್‌ಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಖತರ್ನಾಕ್‌ ವ್ಯಕ್ತಿಯೊಬ್ಬ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ನಕಲಿ ವಜ್ರದ ಉಂಗುರ ಇರಿಸಿ ಬರೊಬ್ಬರಿ ₹75 ಲಕ್ಷ ಮೌಲ್ಯದ ಅಸಲಿ ವಜ್ರದ ಉಂಗುರ ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಎಂ.ಜಿ.ರಸ್ತೆಯ ಜೋಯಾಲುಕ್ಕಾಸ್‌ ಜುವೆಲ್ಲರಿ ಶೋ ರೂಮ್‌ನಲ್ಲಿ ಫೆ.18ರಂದು ಸಂಜೆ 6ರ ಸುಮಾರಿಗೆ ಈ ಘಟನೆ ನಡೆದಿದೆ. ಶೋ ರೂಮ್‌ನ ಉಸ್ತುವಾರಿ ವಿ.ಎಂ.ಶಿಬಿನ್‌ ನೀಡಿದ ದೂರಿನ ಮೇರೆಗೆ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು, ದುಷ್ಕರ್ಮಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪ್ರಕರಣದ ವಿವರ:

ಫೆ.18ರಂದು ಸಂಜೆ 6ರ ಸುಮಾರಿಗೆ ಬಿಳಿಗಡ್ಡಧಾರಿಯೊಬ್ಬರ ಗ್ರಾಹಕನ ಸೋಗಿನಲ್ಲಿ ಎಂ.ಜಿ.ರಸ್ತೆಯ ಜೋಯಾಲುಕ್ಕಾಸ್‌ ಜ್ಯುವೆಲ್ಲರಿ ಶೋ ರೂಮ್‌ಗೆ ಭೇಟಿ ನೀಡಿದ್ದಾನೆ. ಈ ವೇಳೆ ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳನ್ನು ತೋರಿಸುವಂತೆ ಷೋ ರೂಮ್‌ನ ಸಿಬ್ಬಂದಿಯನ್ನು ಕೇಳಿದ್ದಾನೆ. ಆಗ ಸಿಬ್ಬಂದಿ ಜಿಮ್ಮಿರಾಯ್‌ ಎಂಬಾತನ ವಿವಿಧ ವಿನ್ಯಾಸದ ವಜ್ರ ಆಭರಣಗಳನ್ನು ತೋರಿಸಿದ್ದಾನೆ. ಈ ನಡುವೆ ಆರೋಪಿಯು ಬೇರೆ ಆಭರಣಗಳನ್ನೂ ತೋರಿಸುವಂತೆ ಸಿಬ್ಬಂದಿಯ ಗಮನ ಬೇರೆಡೆ ಸೆಳೆದಿದ್ದಾನೆ.

ಗಮನ ಬೇರೆಡೆ ಸೆಳೆದು ಕೈ ಚಳಕ:

ಆಗ ಸಿಬ್ಬಂದಿ ಜಿಮ್ಮಿ ರಾಯ್‌ ಬೇರೆ ಆಭರಣ ತೆಗೆಯಲು ಹಿಂದಕ್ಕೆ ತಿರುಗಿದಾಗ ಆರೋಪಿಯು ಅಸಲಿ ವಜ್ರದ ಉಂಗುರ ಎತ್ತಿಕೊಂಡು ಆ ಜಾಗಕ್ಕೆ ನಕಲಿ ವಜ್ರದ ಉಂಗುರ ಇರಿಸಿದ್ದಾನೆ. ಕೆಲ ಹೊತ್ತಿನ ಬಳಿಕ ಜಿಮ್ಮಿರಾಯ್‌ ಆರೋಪಿಯ ವೈಯಕ್ತಿಕ ವಿವರ, ಆಧಾರ್‌, ಪಾನ್‌ ಕಾರ್ಡ್‌ ವಿವರಗಳನ್ನು ಕೇಳಿದ್ದಾನೆ. ಬಳಿಕ ಆರೋಪಿಯ ಸಬೂಬು ಹೇಳಿಕೊಂಡು ಷೋ ರೂಮ್‌ನಿಂದ ಹೊರಗೆ ಹೋಗಿದ್ದಾನೆ.

ಫೆ.19ರಂದು ಷೋ ರೂಮ್‌ ಸಿಬ್ಬಂದಿ ಆಭರಣಗಳನ್ನು ಪರಿಶೀಲಿಸುವಾಗ ನಕಲಿ ವಜ್ರದ ಉಂಗುರ ಇರುವುದು ಕಂಡು ಬಂದಿದೆ. ಬಳಿಕ ಷೋ ರೂಮ್‌ನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಬಿಳಿಗಡ್ಡಧಾರಿ ವ್ಯಕ್ತಿ ಅಸಲಿ ವಜ್ರದ ಉಂಗುರ ಎತ್ತಿಕೊಂಡು ನಕಲಿ ವಜ್ರದ ಉಂಗುರ ಇರಿಸಿ ಪರಾರಿಯಾಗಿರುವುದು ಕಂಡು ಬಂದಿದೆ.3ನೇ ಷೋ ರೂಮ್‌ನಲ್ಲಿ ಸಕ್ಸಸ್‌:

ಆರೋಪಿಯ ಬಗ್ಗೆ ಅನುಮಾನಗೊಂಡ ಶೋ ರೂಮ್‌ ಸಿಬ್ಬಂದಿ, ಆತ ನಗರದ ಬೇರೆ ಜುವೆಲ್ಲರಿ ಶೋ ರೂಮ್‌ನಗಳಲ್ಲಿ ಈ ರೀತಿಯ ಕೃತ್ಯಗಳು ನಡೆದಿರುವ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಆದೇ ಬಿಳಿಗಡ್ಡಧಾರಿ ಫೆ.17ರಂದು ಸಂಜೆ 5.30ಕ್ಕೆ ಮಾರತಹಳ್ಳಿಯ ಜೋಯಾಲುಕ್ಕಾಸ್‌ ಶೋ ರೂಮ್‌ಗೆ ಹೋಗಿರುವುದು ಮತ್ತು ಫೆ.18ರಂದು ಮಧ್ಯಾಹ್ನ 2 ಗಂಟೆಗೆ ಕಮ್ಮನಹಳ್ಳಿಯ ಜೋಯಾಲುಕ್ಕಾಸ್‌ ಶೋ ರೂಮ್‌ಗೆ ಗ್ರಾಹಕನ ಸೋಗಿನಲ್ಲಿ ಭೇಟಿ ನೀಡಿ, ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳನ್ನು ಕೇಳಿರುವುದು ತಿಳಿದು ಬಂದಿದೆ.

ಈ ವೇಳೆ ಆತ ಕೇಳಿದ ಮೌಲ್ಯದ ವಜ್ರದ ಆಭರಣಗಳು ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಬರಿಗೈಯಲ್ಲಿ ವಾಪಾಸ್‌ ಆಗಿದ್ದಾನೆ. ಆದರೆ, ಅದೇ ದಿನ ಸಂಜೆ ಎಂ.ಜಿ.ರಸ್ತೆಯ ಶೋ ರೂಮ್‌ಗೆ ಬಂದು ತನ್ನ ಕೈ ಚಳಕ ತೋರಿಸಿ ಪರಾರಿಯಾಗಿರುವುದು ಗೊತ್ತಾಗಿದೆ.ಬಂಧನಕ್ಕೆ ಬಲೆ:

ಗ್ರಾಹನ ಸೋಗಿನಲ್ಲಿ ಷೋ ರೂಮ್‌ಗೆ ಭೇಟಿ ನೀಡಿ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ದುಬಾರಿ ಮೌಲ್ಯದ ವಜ್ಯದ ಉಂಗುರ ಕದ್ದು ಪರಾರಿಯಾಗಿರುವ ದುಷ್ಕರ್ಮಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ, ದುಷ್ಕರ್ಮಿಯ ಬಂಧನಕ್ಕೆ ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article