ಕ್ಷೌರ ಮಾಡುವಾಗ ಮಾಡಿದ್ದ ಉಚಿತ ತಲೆ ಮಸಾಜ್‌ನಿಂದ ಎಡವಟ್ಟು : ಪಾರ್ಶ್ವವಾಯುಗೆ ತುತ್ತಾದ ಯುವಕ

KannadaprabhaNewsNetwork |  
Published : Sep 29, 2024, 01:32 AM ISTUpdated : Sep 29, 2024, 04:39 AM IST
ಸ್ಟ್ರೋಕ್‌ | Kannada Prabha

ಸಾರಾಂಶ

ಕ್ಷೌರ ಮಾಡುವಾಗ ಮಾಡಿದ್ದ ಉಚಿತ ತಲೆ ಮಸಾಜ್‌ನಿಂದ ವ್ಯಕ್ತಿಯೊಬ್ಬನ ನರ ವ್ಯವಸ್ಥೆಯೇ ಏರುಪೇರಾಗಿದೆ. ಇದರಿಂದ ಪ್ಯಾರಲಿಸೀಸ್‌ಗೆ ಒಳಗಾಗಿದ್ಧಾನೆ. ಮಸಾಜ್‌ ವೇಳೆ ಎಚ್ಚರದಿಂದ ಇರುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು : ಕ್ಷೌರದ ಅಂಗಡಿಯಲ್ಲಿ ಮಾಡಿಸಿಕೊಂಡ ಕುತ್ತಿಗೆ ಭಾಗದ ಮಸಾಜ್‌ ಎಡವಟ್ಟಾಗಿ ಯುವಕನೊಬ್ಬ ಪಾರ್ಶ್ವವಾಯುವಿಗೆ ತುತ್ತಾಗಿ ನರಕಯಾತನೆ ಕಂಡು ಹೊರಬಂದಿದ್ದಾನೆ. ಚಿಕಿತ್ಸೆ ಪಡೆದು, 2 ತಿಂಗಳ ವಿಶ್ರಾಂತಿ ಬಳಿಕ ಸದ್ಯ ಯುವಕ ಚೇತರಿಸಿಕೊಂಡಿದ್ದು, ಸೂಕ್ತ ತರಬೇತಿ ಇಲ್ಲದ, ವೃತಿಪರ ಅಲ್ಲದವರಿಂದ ಮಸಾಜ್‌ ಮಾಡಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸುವಂತೆ ವೈದ್ಯರು ತಿಳಿಸಿದ್ದಾರೆ.

ನಗರದಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡಿಕೊಂಡಿದ್ದ ಬಳ್ಳಾರಿ ಮೂಲದ 30 ವರ್ಷದ ಕಲ್ಪೇಶ್‌ (ಹೆಸರು ಬದಲಿಸಲಾಗಿದೆ) ಜೀವನ್ಮರಣ ಹೋರಾಟ ನಡೆಸಿ ಪಾರಾಗಿದ್ದಾರೆ.

ಸಹಜವಾಗಿ ಕ್ಷೌರಕ್ಕೆ ತೆರಳಿದ್ದಾಗ ಉಚಿತವಾಗಿ ತಲೆಭಾಗದ ಮಸಾಜ್‌ ಮಾಡಿಸಿಕೊಂಡಿದ್ದಾರೆ. ಈ ವೇಳೆ ಕ್ಷೌರಿಕ ಕುತ್ತಿಗೆಯನ್ನು ತಿರುಗಿಸಿದ ಕ್ಷಣ ನೋವುಂಟಾಗಿದೆ. ಆದರೆ, ಸರಿಹೋಗಬಹುದು ಎಂದುಕೊಂಡು ಮನೆಗೆ ವಾಪಸ್ಸಾಗಿದ್ದಾರೆ. ಆದರೆ, ಒಂದು ಗಂಟೆ ಅಂತರದಲ್ಲಿ ಮಾತನಾಡುವ ಹಾಗೂ ದೇಹದ ಎಡಭಾಗ ಸ್ವಾಧೀನ ಕಳೆದುಕೊಂಡ ಅನುಭವ ಉಂಟಾಗಿದೆ.

ಇದರಿಂದ ಆತಂಕಗೊಂಡ ಕಲ್ಪೇಶ್‌ ಆ್ಯಸ್ಟರ್‌ ಆರ್‌.ವಿ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ. ಕುತ್ತಿಗೆಯನ್ನು ತಿರುಗಿಸಿದ ಪರಿಣಾಮ ಶೀರ್ಷ ಧಮನಿಯಲ್ಲಿ (ಕುತ್ತಿಗೆ ಭಾಗದ ನರ) ಕಣ್ಣೀರು ತುಂಬಿಕೊಂಡಿರುವುದು ಹಾಗೂ ಮೆದುಳಿನ ಭಾಗಕ್ಕೆ ರಕ್ತ ಸಂಚಾರ ಕಡಿಮೆಯಾಗಿದ್ದರಿಂದ ಪಾರ್ಶ್ವವಾಯುವಿಗೆ ಕಾರಣ ಆಗಿರುವುದನ್ನು ದೃಢಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಆ್ಯಸ್ಟರ್‌ ಆರ್‌.ವಿ ಆಸ್ಪತ್ರೆ ಹಿರಿಯ ನರರೋಗ ತಜ್ಞ ಡಾ। ಶ್ರೀಕಂಠ ಸ್ವಾಮಿ, ಸಾಧಾರಣ ಪಾರ್ಶ್ವವಾಯುವಿಗಿಂತ ಭಿನ್ನವಾದ ಸಮಸ್ಯೆಗೆ ತುತ್ತಾಗಿದ್ದರು. ಬಲವಂತವಾಗಿ ಕುತ್ತಿಗೆ ತಿರುಚಿದ ಕಾರಣ ಈ ಸಮಸ್ಯೆ ಉಂಟಾಗಿತ್ತು. ಕಲ್ಪೇಶ್‌ಗೆ ರಕ್ತ ತೆಳುವಾಗಿಸುವ ಔಷಧಿಯನ್ನು ನೀಡಿ, ಪಾರ್ಶ್ವವಾಯು ಇನ್ನಷ್ಟು ಹೆಚ್ಚಾಗದಂತೆ ಚಿಕಿತ್ಸೆ ನೀಡಲಾಯಿತು. ಅವರು ಊರಿಗೆ ತೆರಳಿ ಚಿಕಿತ್ಸೆ ಪಡೆದ ಬಳಿಕವೇ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದರು.

ಕುತ್ತಿಗೆ ಮೂಳೆ, ಸೂಕ್ಷ್ಮ

ಬೆನ್ನಿನಿಂದ ಬಂದು ಕುತ್ತಿಗೆ ಮೂಲಕ ಹಾದುಹೋಗುವ ಮೂಳೆ ಮತ್ತು ಅದರ ಸುತ್ತಮುತ್ತಲಿನ ರಚನೆಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ. ಏಕಾಏಕಿ ಕುತ್ತಿಗೆ ತಿರುಗಿಸುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಸೂಕ್ತ ಮಾರ್ಗದರ್ಶನ, ತರಬೇತಿ ಇಲ್ಲದೆ ಮಸಾಜ್‌ ಮಾಡಬಾರದು. ಮಸಾಜ್‌ ಮಾಡಿಸಿಕೊಳ್ಳುವವರೂ ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಎಕ್ಸ್ ಪ್ರೆಸ್ ವೇನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ
ಕದೀಮರಿಗೆ ಸಾರ್ವಜನಿಕರಿಂದ ಧರ್ಮದೇಟು..!