ನಾಗಮಂಗಲ:
ತಾಲೂಕಿನ ಜುಟ್ಟನಹಳ್ಳಿ ಗ್ರಾಮದ ನಿಂಗೇಗೌಡರ ಪುತ್ರ ಮಹಾಲಿಂಗೇಗೌಡ (54) ಎಂಬುವರೇ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬೈಕ್ ಸವಾರ.
ಕಾರ್ಯನಿಮಿತ್ತ ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಮಕ್ಕೆ ಬೈಕ್‌ನಲ್ಲಿ ಬಂದಿದ್ದ ಮಹಾಲಿಂಗೇಗೌಡ ತಮ್ಮ ಸಹೋದರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸ್ವಗ್ರಾಮ ಜುಟ್ಟನಹಳ್ಳಿಗೆ ವಾಪಸ್ ತೆರಳುತ್ತಿದ್ದರು. ಇದೇ ವೇಳೆಗೆ ನಾಗಮಂಗಲದಿಂದ ಮೈಸೂರು ಕಡೆಗೆ ಸಂಚರಿಸುತ್ತಿದ್ದ ಹುಂಡೈ ವೆನ್ಯೂ ಕಾರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಾಲಿಂಗೇಗೌಡ ಸೇರಿ ಮೂವರು ಗಾಯಗೊಂಡಿದ್ದರು.ಡಿಕ್ಕಿಯ ರಭಸಕ್ಕೆ ಬೈಕ್ ಮತ್ತು ಕಾರು ಜಖಂಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಮಹಾಲಿಂಗೇಗೌಡ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದ ಇಬ್ಬರ ಪೈಕಿ ಕಾಚೇನಹಳ್ಳಿ ಗ್ರಾಮದ ಓರ್ವ ವ್ಯಕ್ತಿಗೆ ಕಾಲು ಮುರಿದಿವೆ ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ರಾಜೇಂದ್ರ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟು ಕಾರು ಮತ್ತು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಮಹಾಲಿಂಗೇಗೌಡರ ಮೃತದೇಹವನ್ನು ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದ್ದು, ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೂಜು ಅಡ್ಡೆ ಮೇಲೆ ದಾಳಿ: ನಾಲ್ವರು ವಶಕ್ಕೆ
ನಾಗಮಂಗಲ:ತಾಲೂಕಿನ ಗಡಿ ಗ್ರಾಮ ಚಂದ್ರಶೇಖರಪುರ ಗ್ರಾಮದಲ್ಲಿ ಇಸ್ವೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪೊಂದರ ಮೇಲೆ ಭಾನುವಾರ ರಾತ್ರಿ ದಿಢೀರ್ ದಾಳಿ ನಡೆಸಿರುವ ಬೆಳ್ಳೂರು ಠಾಣೆಯ ಪೊಲೀಸರು ಪಣಕಿಟ್ಟಿದ್ದ 6300 ರು. ನಗದು ಸೇರಿ ನಾಲ್ವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ಚಂದ್ರಶೇಖರಪುರ ಗ್ರಾಮದ ತಲೆಕೂದಲು ವ್ಯಾಪಾರಿ ರವಿ, ಇದೇ ಗ್ರಾಮದ ಕಾರು ಚಾಲಕ ಮಧು, ಕುಣಿಗಲ್ ತಾಲೂಕಿನ ಮಾಗಡಿ ಪಾಳ್ಯ ಗ್ರಾಮದ ವ್ಯಾಪಾರಿ ಇಮ್ರಾನ್‌ಖಾನ್ ಮತ್ತು ತುರುವೇಕೆರೆ ತಾಲೂಕಿನ ಹಾಡಗೊಂಡನಹಳ್ಳಿ ಗ್ರಾಮದ ಗಾರೆ ಕೆಲಸದ ಮಂಜುನಾಥ ಬಂಧಿತರು. ದಾಳಿ ನಡೆಸಿದ ವೇಳೆ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ಪರಾರಿಯಾಗಿದ್ದಾರೆ.
ಗ್ರಾಮದಲ್ಲಿ 6 ಮಂದಿಯ ಗುಂಪು ಇಸ್ವೀಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್‌ಐ ವೈ.ಎನ್.ರವಿಕುಮಾರ್ ನೇತೃತ್ವದ ಪೊಲೀಸರ ತಂಡ ಭಾನುವಾರ ರಾತ್ರಿ ದಿಢೀರ್ ದಾಳಿ ನಡೆಸಿ ಪಣಕಿಟ್ಟಿದ್ದ 6300 ರು. ನಗದು, ಇಸ್ವೀಟ್ ಕಾರ್ಡ್ ಗಳು, ಪ್ಲಾಸ್ಟಿಕ್ ತಾಟ್ ಸೇರಿ ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿದ್ದಾರೆ.