ಆಕಸ್ಮಿಕ ಬೆಂಕಿಗೆ ಒಕ್ಕಣೆ ಮಾಡಲು ಸಂಗ್ರಹಿಸಿಟ್ಟಿದ್ದ ರಾಗಿ, ಹುರುಳಿ ಬೆಳೆ ನಾಶ: ಅಪಾರ ನಷ್ಟ

KannadaprabhaNewsNetwork | Published : Feb 8, 2024 1:32 AM

ಸಾರಾಂಶ

ಬರಗಾಲದ ನಡುವೆ ಸಾಲ ಮಾಡಿ ಮಳೆ ಆಶ್ರಯದಲ್ಲಿ ರಾಗಿ ಮತ್ತು ಹುರುಳಿ ಬೆಳೆಯಲಾಗಿತ್ತು. ಕಟಾವು ಮಾಡಿಸಿದ್ದ ಕೂಲಿ ಹಣವನ್ನೂ ಸಹ ಕೊಟ್ಟಿರಲಿಲ್ಲ. ಒಕ್ಕಣೆ ಮಾಡಿದ ನಂತರ ರಾಗಿ ಮತ್ತು ಹುರುಳಿಯನ್ನು ಮಾರಿ ಕೂಲಿ ಹಣ ಕೊಡುವುದಾಗಿ ಕಟಾವು ಮಾಡಿದ್ದವರಿಗೆ ತಿಳಿಸಲಾಗಿತ್ತು. ಆಕಸ್ಮಿಕ ಬೆಂಕಿ ಅವಘಡದಿಂದಾಗಿ 40 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಈಗ ದಿಕ್ಕು ತೋಚದಂತಾಗಿದೆ ಎಂದು ರೈತ ಮಹಿಳೆ ವೃದ್ಧೆ ಲಕ್ಷ್ಮಮ್ಮ ರೋಧಿಸತ್ತಿದ್ದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಒಕ್ಕಣೆ ಮಾಡಲು ಸಂಗ್ರಹಿಸಿಟ್ಟಿದ್ದ ರಾಗಿ ಮತ್ತು ಹುರುಳಿ ಮೆದೆಗೆ ಆಕಸ್ಮಿಕ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಅಪಾರ ಪ್ರಮಾಣ ಹಾನಿಯಾಗಿರುವ ಘಟನೆ ತಾಲೂಕಿನ ಕರಡಹಳ್ಳಿ ಹೊರವಲಯದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಗ್ರಾಮದ ಲೇ.ಮರಿಯಪ್ಪನ ಪತ್ನಿ ಲಕ್ಷ್ಮಮ್ಮರಿಗೆ ಸೇರಿದ ಜಮೀನಿನಲ್ಲಿ ಬುಧವಾರ ಮಧ್ಯಾಹ್ನ ಒಕ್ಕಣೆಗೆ ಸಂಗ್ರಹಿಸಿಟ್ಟಿದ್ದ ರಾಗಿ ಮತ್ತು ಹುರುಳಿ ಮೆದೆ ಸಮೀಪದ ಬದುವಿನಲ್ಲಿ ಸಣ್ಣದಾದ ಬೆಂಕಿ ಉರಿಯುತ್ತಿತ್ತು.

ಇದೇ ಸಮಯದಲ್ಲಿ ಸ್ವಲ್ಪ ದೂರದಲ್ಲಿಯೇ ಕುರಿಗಳನ್ನು ಮೇಯಿಸುತ್ತಿದ್ದ ಲಕ್ಷ್ಮಮ್ಮನ ಮಗಳು ಮತ್ತು ಮೊಮ್ಮಗ ಬೆಂಕಿಯನ್ನು ನಂದಿಸಲು ಬರುತ್ತಿದ್ದ ವೇಳೆಗೆ ಗಾಳಿ ಬೀಸಿದ ಪರಿಣಾಮ ರಾಗಿ ಮತ್ತು ಹುರುಳಿ ಮೆದೆಗೆ ಬೆಂಕಿ ಹೊತ್ತು ಕೊಂಡಿದೆ. ಇದರಿಂದ ಬೆಂಕಿ ಜ್ವಾಲೆ ಹೆಚ್ಚಾಗಿ ಒಂದೇ ಮೆದೆಯಲ್ಲಿದ್ದ ರಾಗಿ ಮತ್ತು ಹುರುಳಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಬರಗಾಲದ ನಡುವೆ ಸಾಲ ಮಾಡಿ ಮಳೆ ಆಶ್ರಯದಲ್ಲಿ ರಾಗಿ ಮತ್ತು ಹುರುಳಿ ಬೆಳೆಯಲಾಗಿತ್ತು. ಕಟಾವು ಮಾಡಿಸಿದ್ದ ಕೂಲಿ ಹಣವನ್ನೂ ಸಹ ಕೊಟ್ಟಿರಲಿಲ್ಲ. ಒಕ್ಕಣೆ ಮಾಡಿದ ನಂತರ ರಾಗಿ ಮತ್ತು ಹುರುಳಿಯನ್ನು ಮಾರಿ ಕೂಲಿ ಹಣ ಕೊಡುವುದಾಗಿ ಕಟಾವು ಮಾಡಿದ್ದವರಿಗೆ ತಿಳಿಸಲಾಗಿತ್ತು. ಆಕಸ್ಮಿಕ ಬೆಂಕಿ ಅವಘಡದಿಂದಾಗಿ 40 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಈಗ ದಿಕ್ಕು ತೋಚದಂತಾಗಿದೆ ಎಂದು ರೈತ ಮಹಿಳೆ ವೃದ್ಧೆ ಲಕ್ಷ್ಮಮ್ಮ ರೋಧಿಸತ್ತಿದ್ದರು.

ಒಕ್ಕಣೆ ಮಾಡಲು ಇಟ್ಟಿದ್ದ ರಾಗಿ ಮತ್ತು ಹುರುಳಿ ಮೆದೆಗೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟವಾಗಿರುವ ಈ ಕುಟುಂಬ ಕಡುಬಡತನದ ನಡುವೆ ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುತ್ತಿದೆ. ಇದರ ಜೊತೆಗೆ ಆಕಸ್ಮಿಕ ಬೆಂಕಿ ಅವಘಡದಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ಸೂಕ್ತ ಪರಿಹಾರ ಕೊಟ್ಟು ಈ ಕುಟುಂಬದ ನೆರವಿಗೆ ನಿಲ್ಲಬೇಕೆಂದು ಸ್ಥಳೀಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈಚಲುಗುಡ್ಡೆ ಕಾವಲುವಿನಲ್ಲಿ ಬೆಂಕಿ ಅವಘಡಕ್ಕೆ ಕಬ್ಬು, ತೆಂಗು ಬೆಳೆ ನಾಶ

ಕಿಕ್ಕೇರಿ:

ಹೋಬಳಿಯ ಗಡಿಯಂಚಿನ ಈಚಲುಗುಡ್ಡೆ ಕಾವಲು ಹಾಗೂ ಗೋವಿಂದನಹಳ್ಳಿ ಕೊಪ್ಪಲು ಹೊರವಲಯ ಪ್ರದೇಶದಲ್ಲಿ ರೈತರ ಜಮೀನಿಗೆ ಬೆಂಕಿ ಬಿದ್ದು ತೆಂಗು, ಕಬ್ಬು ಸಸ್ಯಗಳು ನಾಶವಾಗಿವೆ.ಗೋವಿಂದನಹಳ್ಳಿ ಕೊಪ್ಪಲು ಶಾಮಣ್ಣ ಅವರ ಜಮೀನಿನಲ್ಲಿದ್ದ 400 ತೆಂಗಿನ ಸಸಿ, ಕಬ್ಬಿನ ಸಸಿ, ಜಮೀನುಗಳಿಗೆ ನೀರು ಉಣಿಸಲು ಅಳವಡಿಸಿದ್ದ ಹನಿ ನೀರಾವರಿ ಪೈಪ್‌ಗಳು ಅರೆಬರೆ ಸುಟ್ಟುಹೋಗಿದೆ. ಕೃಷ್ಣಪ್ಪನ ತಮ್ಮಣ್ಣ ಅವರ ಜಮೀನಿನಲ್ಲಿ ಬೆಳೆಯಲಾಗಿದ್ದ ಸುಮಾರು 600ಕ್ಕೂ ಹೆಚ್ಚು ಸಸಿಗಳು ಹಾಗೂ ಕಬ್ಬಿನ ಬೆಳೆ ಸುಟ್ಟು ಹೋಗಿದೆ.ಚಿಕ್ಕೇಗೌಡ ನಂಜೇಗೌಡರ ಜಮೀನಿನಲ್ಲಿ ಬೆಳೆದಿದ್ದ 2 ಎಕರೆ ಕಬ್ಬು ಸುಟ್ಟು ನಷ್ಟವಾಗಿದೆ. ವೈ.ಕೆ.ಕಂಬಯ್ಯ ಅವರ ಜಮೀನಿನಲ್ಲಿ ಇದ್ದ ಗಿಡಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದು ಆಗ್ನಿ ಶಾಮಕದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಬೆಂಕಿ ಬಿದ್ದ ಸ್ಥಳಕ್ಕೆ ತೆರಳಲು ರಸ್ತೆ ಇಲ್ಲದೆ ಪರದಾಡಿ ಬೀಟ್ ಮೂಲಕ ರಸ್ತೆ ಮಾಡಿಕೊಂಡು ಬೆಂಕಿ ನಂದಿಸಲು ಯಶಸ್ವಿಯಾದರು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳ ಅಧಿಕಾರಿ ಶಿವಣ್ಣ, ದಿನೇಶ್, ಯಮುನಪ್ಪ, ಶ್ರೀಧರ ಅವಟಿ, ಶ್ರೀಕಾಂತ ಮತ್ತಿತರರಿದ್ದರು.

Share this article