ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ಸಾಲ ಪಡೆದಿದ್ದ ವ್ಯಕ್ತಿಯ 7 ವರ್ಷದ ಮಗಳನ್ನು ಸಾಲ ಪಡೆದವರನ್ನು ತೋರಿಸುವಂತೆ ಕರೆದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ತಾಲೂಕಿನ ಬೆಳಕವಾಡಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.ಕೊಳ್ಳೇಗಾಲ ತಾಲೂಕಿನ ಸಿಲ್ಕಲ್ ಪುರ ಗ್ರಾಮದ ನಿವಾಸಿ ತಿ.ನರಸೀಪುರ ಬಜಾಜ್ ಪಿನ್ ಸರ್ವ್ ಮೈಕ್ರೋ ಫೈನಾನ್ಸ್ ಕಂಪನಿಯಲ್ಲಿ ಸೆಂಟರ್ ಮ್ಯಾನೇಜರ್ ಪಿ.ಅಜಿತ್ (32) ಬಂಧಿತ ಆರೋಪಿ.ತಿ.ನರಸೀಪುರ ತಾಲೂಕಿನ ಜಾಲಹಳ್ಳಿಯ ನವೀನ ತಮ್ಮ ತಾಯಿ ಮಂಗಳಮ್ಮ ಅವರ ಹೆಸರಿನಲ್ಲಿ ಆಟೋ ಖರೀದಿಗೆ ಬಜಾಜ್ ಪಿನ್ ಸರ್ವ್ ಮೈಕ್ರೋ ಫೈನಾನ್ಸ್ ನಲ್ಲಿ 40 ಸಾವಿರ ಸಾಲ ಪಡೆದಿದ್ದರು. ಮೇ ತಿಂಗಳ ಕಂತು ಕಟ್ಟಲು ತಡವಾಗಿತ್ತು. ಜೂ.16ರಂದು ನವೀನ, ಪತ್ನಿ ಮತ್ತು ಮಗಳೊಂದಿಗೆ ತಾಲೂಕಿನ ಪೂರಿಗಾಲಿಯ ಸಂಬಂಧಿಕರ ಮನೆಗೆ ಬಂದಿದ್ದರು.
ಪೂರಿಗಾಲಿ ಗ್ರಾಮದ ಸಂಬಂಧಿಕರ ಮನೆ ಬಳಿ ಬಂದು ನವೀನ ಅವರ ಅಪ್ರಾಪ್ತ ವಹಿಸಿನ 7 ವರ್ಷದ ಮಗಳನ್ನು ಪೋಷಕರ ಅನುಮತಿ ಇಲ್ಲದೆ ಬಲವಂತವಾಗಿ ಜೊತೆಯಲ್ಲಿ ಸಾಲ ಪಡೆದವರನ್ನು ತೋರಿಸುವಂತೆ ಕರೆದುಕೊಂಡು ಹೋಗಿ ನಂತರ ವಾಪಸ್ ಮನೆ ಬಳಿಗೆ ಕರೆದುಕೊಂಡು ಬಂದು ಬಿಟ್ಟು ಹೋಗಿದ್ದರು. ಈ ಸಂಬಂಧ ನವೀನ ಅವರು ಬೆಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಇ.ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ವಿ.ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ಪಿಎಸ್ಐ ಗಳಾದ ಬಿ.ವಿ.ಪ್ರಕಾಶ್, ಡಿ.ರವಿಕುಮಾರ್, ಸಿಬ್ಬಂದಿಗಳಾದ ನಾಗೇಂದ್ರ, ರಿಯಾಜ್ ಪಾಷ, ನಿಂಗರಾಜು, ರವಿಕಿರಣ್, ಲೋಕೇಶ್, ಸಿದ್ದರಾಜು, ಶಿವಕುಮಾರ್, ಸುಜನ್ ಮನೋಹರ್ ಶರ್ಮ, ಮಹೇಶ, ಅನಿನಾಶ್, ಮಧುಕಿರಣ್, ಮಲ್ಲಿಕಾರ್ಜುನ ಚುಳುಕಿ ತಂಡ ಆರೋಪಿ ಪಿ.ಅಜಿತ್ ನನ್ನು ತಮಿಳುನಾಡಿನ ಬಣ್ಣಾರಿ ಅಮ್ಮ ದೇವಸ್ಥಾನದ ಬಳಿ ಬಂಧಿಸಿ ಕೃತ್ಯ ದಿನ ಬಳಸಿದ್ದ ಬೈಕ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.