ಪೆರೋಲ್ ಅವಧಿ ಮುಗಿದರೂ ಜೈಲಿಗೆ ವಾಪಸ್ ಆಗದೆ ತಲೆಮರೆಸಿಕೊಂಡಿದ್ದ ಕೊಲೆ ಜೀವಾವಧಿ ಶಿಕ್ಷಾ ಬಂಧಿಯನ್ನು 8 ವರ್ಷಗಳ ಬಳಿಕ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
-ಕೊಲೆ ಕೇಸಲ್ಲಿ 2013ರಲ್ಲಿ ಜೈಲು ಸೇರಿದ್ದ ಆರೋಪಿ । ಬಳಿಕ ಜೀವಾವಧಿ ಶಿಕ್ಷೆ
-ತಾಯಿಗೆ ಅನಾರೋಗ್ಯ ಎಂದು 2018ರಲ್ಲಿ ಪೆರೋಲ್ ಪಡೆದು ಎಸ್ಕೇಪ್ ಆಗಿದ್ದ
---ಕನ್ನಡಪ್ರಭ ವಾರ್ತೆ ಬೆಂಗಳೂರು
ಪೆರೋಲ್ ಅವಧಿ ಮುಗಿದರೂ ಜೈಲಿಗೆ ವಾಪಸ್ ಆಗದೆ ತಲೆಮರೆಸಿಕೊಂಡಿದ್ದ ಕೊಲೆ ಜೀವಾವಧಿ ಶಿಕ್ಷಾ ಬಂಧಿಯನ್ನು 8 ವರ್ಷಗಳ ಬಳಿಕ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಾವಗಡ ಮೂಲದ ನರಸಿಂಹರೆಡ್ಡಿ (56) ಬಂಧಿತ. 2018ರಲ್ಲಿ ತಾಯಿಗೆ ಅನಾರೋಗ್ಯ ಕಾರಣ ನೀಡಿ ಪೆರೋಲ್ ಪಡೆದು ತಲೆಮರೆಸಿಕೊಂಡಿದ್ದ ಅಪರಾಧಿಯನ್ನು ಇದೀಗ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಬಂಧಿಸಲಾಗಿದೆ.
2013ರಲ್ಲಿ ಪಾವಗಡದಲ್ಲಿ ಮನೆಯೊಂದಕ್ಕೆ ನುಗ್ಗಿ ಮನೆ ಮಾಲೀಕರನ್ನು ಕೊಂದು, ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ನರಸಿಂಹರೆಡ್ಡಿ, ಮನೆ ಕೆಲಸದಾಕೆ ರಮಾ ಸೇರಿ ನಾಲ್ಕೈದು ಮಂದಿ ಆರೋಪಿಗಳನ್ನು ಪಾವಗಡ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಗೆ ಕೋರ್ಟ್ ಜೀವವಾಧಿ ಶಿಕ್ಷೆ ವಿಧಿಸಿತ್ತು. ಈ ಮಧ್ಯೆ 2018ರಲ್ಲಿ ನರಸಿಂಹರೆಡ್ಡಿ, ತಾಯಿಗೆ ಅನಾರೋಗ್ಯ ಕಾರಣ ನೀಡಿ ಪೆರೋಲ್ ಪಡೆದು ತೆರಳಿದ್ದ. ಆದರೆ, ಪೆರೋಲ್ ಅವಧಿ ಮುಗಿದರೂ ವಾಪಸ್ ಬಂದಿರಲಿಲ್ಲ. ನಂತರ ಆತನ ಸ್ವಂತ ಊರಾದ ಆಂಧ್ರದ ಅನಂತಪುರ ಜಿಲ್ಲೆಯ ಕನ್ನಂಪಲ್ಲಿ ಹಾಗೂ ರಾಜಾನುಕುಂಟೆಯ ಬಾಡಿಗೆ ಮನೆಯಲ್ಲೂ ಶೋಧಿಸಲಾಗಿತ್ತು. ಆದರೂ ಆರೋಪಿ ಪತ್ತೆಯಾಗಿರಲಿಲ್ಲ.
1 ಲಕ್ಷ ರು. ಬಹುಮಾನ ಕೂಡ ಘೋಷಣೆ:
ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸತತ 3 ವರ್ಷಗಳಿಂದ ಅಪರಾಧಿ ಪತ್ತೆ ಕಾರ್ಯ ನಡೆಸುತ್ತಿದ್ದರು. ಅಲ್ಲದೆ, 2024ರಲ್ಲಿ ಅಂದಿನ ಠಾಣಾಧಿಕಾರಿಗಳ ಸೂಚನೆ ಮೇರೆಗೆ ಪಿಎಸ್ಐ ನವೀನ್, ಸಿಬ್ಬಂದಿ ಜನಾರ್ಧನ್ ಮತ್ತು ತಂಡ ಮಾರುವೇಷದಲ್ಲಿ (ತರಕಾರಿ ವ್ಯಾಪಾರ ಹಾಗೂ ಕೂಲಿ ಕಾರ್ಮಿಕರ ರೀತಿ) ಅಪರಾಧಿಗಾಗಿ ಹತ್ತಾರು ದಿನಗಳ ಕಾಲ ಆ ಊರಿನಲ್ಲಿ ಉಳಿದು ಶೋಧ ನಡೆಸಿತ್ತು. ಆಗಲೂ ಅಪರಾಧಿಯ ಸುಳಿವು ಸಿಕ್ಕಿರಲಿಲ್ಲ. ಅಪರಾಧಿ ನಾಪತ್ತೆಯಾದ ಬಗ್ಗೆ 2.5 ವರ್ಷಗಳ ಹಿಂದೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಂದ ಲುಕ್ಔಟ್ ನೋಟಿಸ್ ಕೊಡ ಹೊರಡಿಸಲಾಗಿತ್ತು. ಆರೋಪಿಯ ಫೋಟೋ ಹಾಕಿ, ಆತನ ಬಗ್ಗೆ ಮಾಹಿತಿ ದೊರತೆ ಪೊಲೀಸರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ಹೊರಡಿಸಲಾಗಿತ್ತು. ಅಲ್ಲದೆ, ಮಾಹಿತಿದಾರರಿಗೆ 1 ಲಕ್ಷ ರು. ಬಹುಮಾನ ಕೂಡ ಘೋಷಣೆ ಮಾಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಾಗ ಬಂಧನ:
ಮತ್ತೊಂದೆಡೆ ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಸೂಚನೆ ಮೇರೆಗೆ ಎಸಿಪಿ ಸತೀಶ್, ಪಿಐ ನವೀನ್ ಕುಮಾರ್ ಮತ್ತು ಪಿಎಸ್ಐ ನವೀನ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ನಡುವೆ ಆಸ್ಪತ್ರೆಯೊಂದಕ್ಕೆ ನರಸಿಂಹರೆಡ್ಡಿ ಬಂದಿದ್ದಾನೆ ಎಂಬ ಬಗ್ಗೆ ಸ್ಥಳೀಯ ಬಾತ್ಮೀದಾರರ ಮೂಲಕ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಪಿಎಸ್ಐಗಳಾದ ನವೀನ್ ಮತ್ತು ಶ್ರೀನಿವಾಸ್ ಹಾಗೂ ಜನಾರ್ದನ್, ಆಸ್ಪತ್ರೆಗೆ ತೆರಳಿ ಅಪರಾಧಿಯನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಸರು ಬದಲಿಸಿಕೊಂಡಿದ್ದ ಅಪರಾಧಿ:
ಪೊಲೀಸರಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನರಸಿಂಹರೆಡ್ಡಿ ಎಂಬ ಹೆಸರನ್ನು ಶ್ರೀನಿವಾಸ ರೆಡ್ಡಿ ಎಂದು ಬದಲಿಸಿಕೊಂಡು ಓಡಾಡುತ್ತಿದ್ದ. ಇತ್ತೀಚೆಗೆ ನಡೆದ ಮಗಳ ಮದುವೆಗೂ ಆತ ಹಾಜರಾಗಿರಲಿಲ್ಲ. ಅಲ್ಲದೆ, ಮೊಬೈಲ್ ಬಳಸಿರಲಿಲ್ಲ. ಆಧಾರ್ ಕಾರ್ಡ್ ಕೂಡ ಇಟ್ಟುಕೊಂಡಿರಲಿಲ್ಲ. ಆದರೂ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.