ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ರದ್ದುಪಡಿಸಿದ ಬೆನ್ನಲ್ಲೇ, ಎಂಟು ತಿಂಗಳ ಬಳಿಕ ಚಲನಚಿತ್ರ ನಟ ದರ್ಶನ್ ತೂಗುದೀಪ ಹಾಗೂ ಅವರ ಪ್ರಿಯತಮೆ ಪವಿತ್ರಾಗೌಡ ಸೇರಿ ಐವರು ಗುರುವಾರ ರಾತ್ರಿ ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದರು.
ಜಾಮೀನು ರದ್ದುಗೊಂಡವರ ಪೈಕಿ ದರ್ಶನ್, ಅವರ ಪ್ರಿಯತಮೆ ಪವಿತ್ರಾಗೌಡ, ಪ್ರದೋಷ್, ಲಕ್ಷ್ಮಣ್ ಹಾಗೂ ನಾಗರಾಜ್‌ರನ್ನು ನಗರದ ಸೆಷನ್ಸ್ ಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ವಿಜಯನಗರ ಉಪ ವಿಭಾಗದ ಪೊಲೀಸರು ಹಾಜರುಪಡಿಸಿದರು. ಬಳಿಕ ನ್ಯಾಯಾಲಯ ಆ.24 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶಿಸಿದ ಮೇರೆಗೆ ದರ್ಶನ್ ಸೇರಿ ಐವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಬಿಡಲಾಯಿತು. ಇನ್ನುಳಿದ ಅನುಕುಮಾರ್ ಹಾಗೂ ಜಗದೀಶ್ ನನ್ನು ಚಿತ್ರದುರ್ಗದಲ್ಲಿ ಪೊಲೀಸರು ಬಂಧಿಸಿದ್ದು, ನಗರಕ್ಕೆ ಕರತರುವುದು ತಡವಾದ ಕಾರಣ ಆ ಇಬ್ಬರನ್ನೂ ನ್ಯಾಯಾಧೀಶರ ಮುಂದೆ ಶುಕ್ರವಾರ ಪೊಲೀಸರು ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಡಿಸೆಂಬರ್‌ನಲ್ಲಿ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದು ಬಳ್ಳಾರಿ ಕೇಂದ್ರ ಕಾರಾಗೃಹದಿಂದ ದರ್ಶನ್ ಬಿಡುಗಡೆಗೊಂಡಿದ್ದರು. ಈಗ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಪರಿಣಾಮ ನಟ ದರ್ಶನ್ ಹಾಗೂ ಅವರ ಸಹಚರರು ಮತ್ತೆ ಸೆರೆಮನೆಯ ನಾಲ್ಕು ಗೋಡೆಗಳ ಕೋಣೆಯಲ್ಲಿ ಕಾಲದೂಡುವಂತಾಗಿದೆ.
ಮಾಸ್ಕ್ ಧರಿಸಿ ಜೈಲಿಗೆ ತೆರಳಿದ ದರ್ಶನ್:
ನ್ಯಾಯಾಲಯದ ಆದೇಶ ಹೊರಬಿದ್ದ ಐದಾರು ತಾಸುಗಳಲ್ಲಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಸಕೆರೆಹಳ್ಳಿಯ ತಮ್ಮ ಪತ್ನಿ ಫ್ಲ್ಯಾಟ್‌ನಲ್ಲಿ ದರ್ಶನ್, ರಾಜರಾಜೇಶ್ವರಿನಗರದ ತಮ್ಮ ಮನೆಯಲ್ಲಿ ಪವಿತ್ರಾಗೌಡ, ಗಿರಿನಗರದಲ್ಲಿ ಪ್ರದೋಷ್, ಆರ್.ಆರ್.ನಗರದಲ್ಲೇ ಲಕ್ಷ್ಮಣ್, ಮೈಸೂರಿನಲ್ಲಿ ನಾಗರಾಜ್ ಹಾಗೂ ಚಿತ್ರದುರ್ಗದಲ್ಲಿ ಅನುಕುಮಾರ್ ಹಾಗೂ ಜಗದೀಶ್ ಅವರನ್ನು ಬಂಧಿಸಲಾಯಿತು.
ಬಳಿಕ ಚಿತ್ರದುರ್ಗದ ಆರೋಪಿಗಳ ಹೊರತುಪಡಿಸಿ ದರ್ಶನ್ ಸೇರಿ ಇನ್ನುಳಿದವರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಪೊಲೀಸರು ಕರೆತಂದರು. ಅಲ್ಲಿ ವೈದ್ಯಕೀಯ ತಪಾಸಣೆ ಬಳಿಕ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಯಲ್ಲಿ ವ್ಯಾನ್‌ನಲ್ಲಿ ಕರೆದೊಯ್ದು ಹಾಜರುಪಡಿಸಿದರು. ಈ ವೇಳೆ ತಲೆಗೆ ಟೋಪಿ ಹಾಗೂ ಮುಖಕ್ಕೆ ದರ್ಶನ್ ಮಾಸ್ಕ್ ಹಾಕಿಕೊಂಡಿದ್ದರು.
ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಪರಿಣಾಮ ರಾತ್ರಿ 8 ಗಂಟೆಗೆ ಪರಪ್ಪನ ಅಗ್ರಹಾರ ಕೇಂದ್ರಕ್ಕೆ ಆರೋಪಿಗಳನ್ನು ಪೊಲೀಸರು ಬಿಟ್ಟಿದ್ದಾರೆ.
ಘಟನೆ ಹಿನ್ನೆಲೆ:
ತಮ್ಮ ಪ್ರಿಯತಮೆಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ 2024ರ ಜೂ.7 ರಂದು ಚಿತ್ರದುರ್ಗದಿಂದ ಔಷಧ ಮಾರಾಟ ಮಳಿಗೆ ಕೆಲಸಗಾರ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಅಪಹರಿಸಿ ಹತ್ಯೆ ಮಾಡಲಾಗಿತ್ತು. ಎರಡು ದಿನಗಳ ಬಳಿಕ ಹತ್ಯೆ ಪ್ರಕರಣದ ಹಿಂದಿನ ರಹಸ್ಯ ಬಯಲಾಗಿ ದರ್ಶನ್ ರನ್ನು ಪೊಲೀಸರು ಬಂಧಿಸಿದ್ದರು.
ಕೊಲೆ ಪ್ರಕರಣದಲ್ಲಿ ಬಂಧಿತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ದರ್ಶನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆದ ಆರೋಪ ಕೇಳಿ ಬಂದಿತ್ತು. ಅಲ್ಲದೆ, ರೌಡಿಗಳ ಜತೆ ವಿಡಿಯೋ ಕಾಲ್ ಮಾತುಕತೆ ಹಾಗೂ ಜೈಲಿನಲ್ಲಿ ಆರಾಮ ಕುರ್ಚಿಯಲ್ಲಿ ಕೂತು ಸಿಗರೇಟ್ ಸೇದುತ್ತಾ ಚಹಾ ಮಗ್ ಹಿಡಿದಿರುವ ದರ್ಶನ್ ಫೋಟೋಗಳು ವೈರಲ್ ಆಗಿದ್ದವು. ಆಗ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ರನ್ನು ಕಾರಾಗೃಹ ಅಧಿಕಾರಿಗಳು ಸ್ಥಳಾಂತರಿಸಿದ್ದರು.
ಕೊನೆಗೆ ಏಳು ತಿಂಗಳು ಸೆರೆಮನೆಯಲ್ಲಿದ್ದ ದರ್ಶನ್ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಅನಾರೋಗ್ಯ ಕಾರಣ ನೀಡಿ ನ್ಯಾಯಾಲಯದಿಂದ ಅವರು ಜಾಮೀನು ಪಡೆದಿದ್ದರು. ಆದರೆ ಬೆನ್ನು ನೋವಿನ ಶಸ್ತ್ರ ಚಿಕಿತ್ಸೆ ನೆಪ ಹೇಳಿದ್ದ ಅವರು ಜೈಲಿಂದ ಹೊರಬಂದ ನಂತರ ತಮ್ಮ ಸಿನಿಮಾ ಚಿತ್ರೀಕರಣದಲ್ಲಿ ವ್ಯಸ್ತರಾದರು. ಆಗಲೂ ವಿದೇಶದಲ್ಲಿ ಸ್ನೇಹಿತರ ಜತೆ ಮೋಜು-ಮಸ್ತಿಯಲ್ಲಿದ್ದ ಪೋಟೋಗಳು ಹೊರಬಂದು ಮತ್ತೆ ಚರ್ಚೆ ಹುಟ್ಟು ಹಾಕಿದ್ದವು.
ಹೀಗೆ ಜೈಲಿಂದ ಹೊರಬಂದ ನಂತರವೂ ಒಂದಿಲ್ಲೊಂದು ಕಾರಣಕ್ಕೆ ದರ್ಶನ್ ಸುದ್ದಿಯಲ್ಲೇ ಇದ್ದರು. ಬೆನ್ನುನೋವಿನ ಶಸ್ತ್ರ ಚಿಕಿತ್ಸೆ ಸಹ ಮಾಡಿಸಿಕೊಳ್ಳದೆ ಸುಮ್ಮನಿದ್ದರು. ಇತ್ತ ಅವರ ಪ್ರಿಯತಮೆ ಪವಿತ್ರಾಗೌಡ ಮತ್ತೆ ತಮ್ಮ ಫ್ಯಾಷನ್ ಬೊಟಿಕ್ ಬ್ಯುಸಿನೆಸ್ ಅನ್ನು ಹೊಸ ಅವತಾರದಲ್ಲಿ ಶುರು ಮಾಡಿದ್ದರು. ಎಂಟು ತಿಂಗಳಿಂದ ನಿರಾಳರಾಗಿದ್ದ ದರ್ಶನ್ ತಂಡಕ್ಕೆ ಇದೀಗ ದಿಢೀರ್ ಸುಪ್ರೀಂ ಆದೇಶ ಸಂಕಷ್ಟ ತಂದಿಟ್ಟಿದೆ.-