ಸಿನಿಮೀಯ ಶೈಲಿಯಲ್ಲಿ ಬೆಳ್ಳಂಬೆಳಗ್ಗೆ ಕಿಲ್ಲಿಂಗ್‌ ಸ್ಟಾರ್‌ ಸ್ಥಳಾಂತರ, ದರ್ಶನ್‌ ಈಗ ಬಳ್ಳಾರಿ ಕೈದಿ

KannadaprabhaNewsNetwork |  
Published : Aug 30, 2024, 01:01 AM ISTUpdated : Aug 30, 2024, 04:23 AM IST
ದರ್ಶನ್‌ | Kannada Prabha

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಅವರ ನಾಲ್ವರು ಆಪ್ತರನ್ನು ಸಿನಿಮೀಯ ಶೈಲಿಯಲ್ಲಿ ಗುರುವಾರ ನಸುಕಿನಲ್ಲಿ ಬಿಗಿ ಭದ್ರತೆಯೊಂದಿಗೆ ಪೊಲೀಸರು ಸ್ಥಳಾಂತರಿಸಿ ನಿಟ್ಟುಸಿರು ಬಿಟ್ಟಿದ್ದಾರೆ.

 ಬೆಂಗಳೂರು :  ಜೈಲಿನಲ್ಲಿ ವಿಶೇಷ ಸೌಲಭ್ಯ ಪಡೆದ ಪ್ರಕರಣದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೇರೆಡೆಗೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಅವರ ನಾಲ್ವರು ಆಪ್ತರನ್ನು ಸಿನಿಮೀಯ ಶೈಲಿಯಲ್ಲಿ ಗುರುವಾರ ನಸುಕಿನಲ್ಲಿ ಬಿಗಿ ಭದ್ರತೆಯೊಂದಿಗೆ ಪೊಲೀಸರು ಸ್ಥಳಾಂತರಿಸಿ ನಿಟ್ಟುಸಿರು ಬಿಟ್ಟಿದ್ದಾರೆ.

ಹೊಸ ಜೈಲಿಗೆ ಕಾಲಿಟ್ಟ ಕೂಡಲೇ ದರ್ಶನ್ ಗ್ಯಾಂಗ್‌ನ ವಿಚಾರಣಾಧೀನ ಕೈದಿ ಸಂಖ್ಯೆ ಸಹ ಬದಲಾಗಿದ್ದು, ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರಿಗೆ 511 ಸಂಖ್ಯೆಯನ್ನು ಕಾರಾಗೃಹದ ಅಧಿಕಾರಿಗಳು ಕೊಟ್ಟಿದ್ದಾರೆ. ಮೊದಲ ಹಂತದಲ್ಲಿ ದರ್ಶನ್‌ ಹಾಗೂ ಅವರ ಆಪ್ತರಾದ ಪ್ರದೂಷ್‌, ಲಕ್ಷ್ಮಣ್‌, ಜಗದೀಶ್ ಹಾಗೂ ಧನರಾಜ್‌ ಸ್ಥಳಾಂತರಗೊಂಡಿದ್ದು, ಇನ್ನುಳಿದ ಐ‍ವರು ಶುಕ್ರವಾರ ಎತ್ತಂಗಡಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಸೂರ್ಯೋದಯಕ್ಕೂ ಮುನ್ನವೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ದರ್ಶನ್ ಗ್ಯಾಂಗ್ ಅನ್ನು ಕರೆದುಕೊಂಡು ಹೊರಟ ಪೊಲೀಸರು, ಕಾರಾಗೃಹಗಳಲ್ಲಿ ಹೊಸ ಕೈದಿಗಳು ದಾಖಲಾತಿ ಪಡೆಯುವ ಹೊತ್ತಿಗೆ ಪೂರ್ವನಿಗದಿತ ಜೈಲು ತಲುಪಿದ್ದಾರೆ. ಅಂತೆಯೇ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಪ್ರವೇಶಾತಿ ಪಡೆದರೆ, ಇತರೆ ಕೇಂದ್ರ ಕಾರಾಗೃಹಗಳಲ್ಲಿ ಅ‍ವರ ಆಪ್ತರು ದಾಖಲಾತಿಯಾಗಿದ್ದಾರೆ. ಜೈಲಿನಲ್ಲಿ ದರ್ಶನ್ ಗ್ಯಾಂಗ್‌ಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ದರ್ಶನ್ ಗ್ಯಾಂಗ್ ಸಾಗಿಸುವಾಗ ಮಾಧ್ಯಮಗಳು ಹಾಗೂ ದರ್ಶನ್‌ ಅವರ ಅಭಿಮಾನಿಗಳ ದಿಕ್ಕು ತಪ್ಪಿಸಲು ಪೊಲೀಸರು ಭಾರಿ ಯೋಜನೆ ರೂಪಿಸಿ ಅಚ್ಚುಕಟ್ಟಾಗಿ ಕಾರ್ಯಗತಗೊಳಿಸಿದ್ದಾರೆ.

ದರ್ಶನ್‌ ಸ್ಥಳಾಂತರ ಮಾಡಿದ್ದೇಕೆ?:

ಕೊಲೆ ಆರೋಪದಡಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ ದರ್ಶನ್, ಆ ಕಾರಾಗೃಹದಲ್ಲಿ ರಾಜಾತಿಥ್ಯ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಜೈಲಿನಲ್ಲಿ ರೌಡಿಗಳ ಜತೆ ಚಹಾ ಮಗ್‌ ಹಿಡಿದು ಸಿಗರೇಟ್ ಸೇದುತ್ತಾ ಕುರ್ಚಿಯಲ್ಲಿ ಜಾಲಿಯಾಗಿ ಕುಳಿತು ಹರಟುವ ಹಾಗೂ ರೌಡಿಯೊಬ್ಬನ ಜತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುವ ದೃಶ್ಯಾವಳಿ ಬಹಿರಂಗವಾಗಿ ಬಿರುಗಾಳಿ ಎಬ್ಬಿಸಿತ್ತು. ಈ ರಾಜಾತಿಥ್ಯ ಪ್ರಕರಣದ ಬೆಳಕಿಗೆ ಬಂದ ಕೂಡಲೇ ಕಾರಾಗೃಹದ ಮುಖ್ಯ ಅಧೀಕ್ಷಕ ಸೇರಿ 12 ಮಂದಿ ಅಧಿಕಾರಿ-ಸಿಬ್ಬಂದಿಯನ್ನು ಅಮಾನತುಗೊಳಿಸಿದ ರಾಜ್ಯ ಸರ್ಕಾರವು, ಪರಪ್ಪನ ಅಗ್ರಹಾರ ಕಾರಾಗೃಹದಿಂದ ದರ್ಶನ್ ಗ್ಯಾಂಗ್ ಎತ್ತಂಗಡಿಗೆ ಸೂಚಿಸಿತ್ತು. ಕೊನೆಗೆ ಬೇರೆ ಜೈಲಿಗೆ ದರ್ಶನ್ ಗ್ಯಾಂಗ್ ಸ್ಥಳಾಂತರಕ್ಕೆ ನ್ಯಾಯಾಲಯ ಅನುಮತಿ ಸಹ ನೀಡಿತು. ಈ ಅನುಮತಿ ಸಿಕ್ಕಿದರೂ ರಾಜಾತಿಥ್ಯ ಪ್ರಕರಣದ ತನಿಖೆ ಕಾರಣಕ್ಕೆ ಸ್ಥಳಾಂತರ ಪ್ರಕ್ರಿಯೆ ಎರಡು ದಿನಗಳು ವಿಳಂಬವಾಯಿತು.

ಮಾಧ್ಯಮಗಳ ದಿಕ್ಕು ತಪ್ಪಿಸಿದ ಪೊಲೀಸರು:

ದರ್ಶನ್ ಗ್ಯಾಂಗ್ ಸ್ಥಳಾಂತರದ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತೆ ವಹಿಸಿದ್ದರು. ಇದಕ್ಕಾಗಿ ಪಶ್ಚಿಮ ವಿಭಾಗದ ಡಿಸಿಪಿ ಎಸ್‌.ಗಿರೀಶ್ ಹಾಗೂ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರಿಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೊಣೆಗಾರಿಕೆ ನೀಡಿದ್ದರು. ಈ ಸ್ಥಳಾಂತರ ಕೆಲಸಕ್ಕೆ ಡಿಸಿಪಿಗಳ ಸಾರಥ್ಯದಲ್ಲಿ 8 ಎಸಿಪಿಗಳು, 10 ಇನ್ಸ್‌ಪೆಕ್ಟರ್‌ಗಳು ಹಾಗೂ 50 ಸಿಬ್ಬಂದಿ ತಂಡವನ್ನು ರಚಿಸಲಾಯಿತು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ದರ್ಶನ್ ಕರೆದೊಯ್ಯುವ ಮಾರ್ಗದಲ್ಲಿ ಮಾಧ್ಯಮಗಳು ಹಾಗೂ ದರ್ಶನ್‌ ಅಭಿಮಾನಿಗಳು ಬೆನ್ನುಹತ್ತುತ್ತಾರೆ ಎಂದು ಊಹಿಸಿದ್ದ ಪೊಲೀಸರು, ಮಾಧ್ಯಮಗಳ ದಿಕ್ಕು ತಪ್ಪಿಸಲು ಪ್ಲ್ಯಾನ್‌ ಮಾಡಿದರು. ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಖಾತ್ರಿಯಾದ ದಿನದಿಂದ ತುಮಕೂರು, ಚಿತ್ರದುರ್ಗ, ಚಳ್ಳಕರೆ ಮೂಲಕ ಬಳ್ಳಾರಿ ಮಾರ್ಗದಲ್ಲಿ ಸಾಗುವುದಾಗಿ ಮಾಧ್ಯಮಗಳಿಗೆ ಸುದ್ದಿ ಸೋರಿಕೆ ಮಾಡಿದ್ದರು. ಆದರೆ ಪೊಲೀಸರ ಪ್ಲ್ಯಾನ್‌ ಬಿ ಬೇರೆ ಇತ್ತು.

ರಾಜಾತಿಥ್ಯ ಪ್ರಕರಣದ ಕುರಿತು ದರ್ಶನ್‌ ಹಾಗೂ ಅವರ ಆಪ್ತ ನಾಗರಾಜ್‌ನನ್ನು ವಿಚಾರಣೆ ಮುಗಿದ ಬಳಿಕ ಸ್ಥಳಾಂತರಕ್ಕೆ ಪೊಲೀಸರು ಯೋಜಿಸಿದ್ದರು. ಅಂತೆಯೇ ಬುಧವಾರ ರಾತ್ರಿ 11.30ಕ್ಕೆ ದರ್ಶನ್‌ರವರ ವಿಚಾರಣೆ ಮುಗಿಸಿ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಎಸಿಪಿ ಆರ್‌.ಮಂಜುನಾಥ್ ನೇತೃತ್ವದ ತಂಡ ಜೈಲಿನಿಂದ ಹೊರಬಂದಿದೆ.

ಆನಂತರ ಪರಪ್ಪನ ಅಗ್ರಹಾರ ಜೈಲಿನ ಆವರಣಕ್ಕೆ ನಗರ ಸಶಸ್ತ್ರ ಮೀಸಲು ಪಡೆಯ 10 ವ್ಯಾನ್ ತಂದು ನಿಲ್ಲಿಸಿ ಪೊಲೀಸರು ಸ್ಥಳಾಂತರಕ್ಕೆ ಸಜ್ಜಾದರು. ನಂತರ ಗುರುವಾರ ನಸುಕಿನ 3 ಗಂಟೆ ಸುಮಾರಿಗೆ ಜೈಲಿಗೆ ಡಿಸಿಪಿಗಳಾದ ಗಿರೀಶ್, ಸಾರಾ ಫಾತಿಮಾ, ಎಸಿಪಿಗಳಾದ ಸದಾನಂದ್‌, ಭರತ್ ರೆಡ್ಡಿ, ಮಂಜುನಾಥ್ ಹಾಗೂ ರಂಗಪ್ಪ ಆಗಮಿಸಿದ್ದಾರೆ.

ಈ ಅಧಿಕಾರಿಗಳು ಸುದೀರ್ಘವಾಗಿ ಒಂದೂವರೆ ತಾಸು ಚರ್ಚಿಸಿ ಪ್ರಯಾಣದ ಮಾರ್ಗದ ನೀಲ ನಕ್ಷೆ ಸಿದ್ಧಪಡಿಸಿದ್ದಾರೆ. ಅಲ್ಲದೆ ದರ್ಶನ್‌ ಗ್ಯಾಂಗ್‌ ಅನ್ನು ಪ್ರತ್ಯೇಕವಾಗಿ ಕರೆದೊಯ್ಯಲು ಪೊಲೀಸರ ತಂಡಗಳನ್ನು ಅಧಿಕಾರಿಗಳು ರಚಿಸಿದರು. ಪ್ರತಿ ಆರೋಪಿಯನ್ನು ಮಿನಿ ಬಸ್‌ನಲ್ಲಿ ಜೈಲಿಗೆ ಕರೆದೊಯ್ಯಲು ನಿರ್ಧರಿಸಿದ ಅಧಿಕಾರಿಗಳು, ಆ ಬಸ್ಸಿಗೆ ಓರ್ವ ಎಸಿಪಿ ಹಾಗೂ ಇನ್ಸ್‌ಪೆಕ್ಟರ್‌ ಸೇರಿದಂತೆ 20 ಪೊಲೀಸರ ಭದ್ರತಾ ತಂಡವನ್ನು ನಿಯೋಜಿಸಿದರು.

ಬೆಳಗಿನ ಜಾವ 4.30ಕ್ಕೆ ಮೊದಲು ಜೈಲಿನಿಂದ ಬೆಳಗಾವಿಗೆ ಪ್ರದೂಷ್‌, ಶಿವಮೊಗ್ಗಕ್ಕೆ ಲಕ್ಷ್ಮಣ್‌, ಜಗದೀಶ್, ಧಾರವಾಡಕ್ಕೆ ಧನರಾಜ್‌ನನ್ನು ಕರೆದುಕೊಂಡು ಮೂರು ಬಸ್‌ಗಳು ಹಾಗೂ ನಾಲ್ಕು ಜೀಪುಗಳು ಜೈಲಿನಿಂದ ಹೊರಬಂದಿವೆ. ಜೈಲಿನಿಂದ ವಾಹನಗಳು ಹೊರಬಿದ್ದ ಕೂಡಲೇ ದರ್ಶನ್‌ ಅವರನ್ನು ಪೊಲೀಸರು ಕರೆದೊಯ್ಯುತ್ತಿದ್ದಾರೆ ಎಂದು ಭಾವಿಸಿ ಕೆಲ ಸುದ್ದಿವಾಹಿನಿಗಳ ಪ್ರತಿನಿಧಿಗಳು ಬೆನ್ನಟ್ಟಿದ್ದಾರೆ. ಕೊನೆಗೆ ನೆಲಮಂಗಲ ಟೋಲ್‌ಗೆ ತಲುಪಿದಾಗ ಆ ವಾಹನಗಳಲ್ಲಿ ದರ್ಶನ್ ಇಲ್ಲದ ಸಂಗತಿ ಸುದ್ದಿಗಾರರ ಅರಿವಿಗೆ ಬಂದಿದೆ.

ಅಷ್ಟರಲ್ಲಿ ಎರಡು ಜೀಪುಗಳು, ಮಿನಿ ಬಸ್ ಹಾಗೂ ವ್ಯಾನ್‌ನಲ್ಲಿ ಎಸಿಪಿ ಸದಾನಂದ ನೇತೃತ್ವದ 25 ಮಂದಿ ಪೊಲೀಸರ ತಂಡದ ಭದ್ರತೆಯಲ್ಲಿ ದರ್ಶನ್ ಬಳ್ಳಾರಿಗೆ ಹೊರಟಿದ್ದಾರೆ. ಆ ವೇಳೆ ಜೈಲಿನ ಬಳಿ ಇದ್ದ ಮತ್ತೆ ಕೆಲ ಮಾಧ್ಯಮಗಳು, ದರ್ಶನ್‌ ಇದ್ದ ಜೀಪನ್ನು ಮೇಖ್ರಿ ಸರ್ಕಲ್‌ವರೆಗೆ ಹಿಂಬಾಲಿಸಿವೆ. ಅಲ್ಲಿ ಮಾಧ್ಯಮಗಳ ವಾಹನವನ್ನು ಅಡ್ಡಗಟ್ಟಿದ ಅಧಿಕಾರಿಗಳು, ಮಾಧ್ಯಮಗಳ ದಿಕ್ಕು ತಪ್ಪಿಸುವ ಉದ್ದೇಶದಿಂದಲೇ ಜೀಪಿನಲ್ಲಿದ್ದ ದರ್ಶನ್‌ರವರನ್ನು ಮಿನಿ ಬಸ್ಸಿಗೆ ಹತ್ತಿಸಿ ಪಯಣ ಮುಂದುವರೆಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ವಾಹನ ಬದಲಾವಣೆಯಾಗಿದೆ. ಇದು ತಿಳಿಯದೆ ಮಾಧ್ಯಮ ಪ್ರತಿನಿಧಿಗಳು, ಪೂರ್ವಯೋಜಿತ ತುಮಕೂರು ಮಾರ್ಗದಲ್ಲೇ ದರ್ಶನ್‌ ಅವರನ್ನು ಪೊಲೀಸರು ಕರೆದೊಯ್ಯುತ್ತಿದ್ದಾರೆ ಎಂದು ಭಾವಿಸಿ ತುಮಕೂರು ರಸ್ತೆಯಲ್ಲಿ ಸಾಗಿದ್ದಾರೆ.

ಮೇಖ್ರಿ ಸರ್ಕಲ್‌ನಲ್ಲಿ ಕೆಲ ನಿಮಿಷಗಳು ಮಾಧ್ಯಮಗಳ ವಾಹನ ಅಡ್ಡಗಟ್ಟಿದ್ದ ಪೊಲೀಸರು, ದರ್ಶನ್‌ ಅವರನ್ನು ಕರೆದುಕೊಂಡು ಚಿಕ್ಕಬಳ್ಳಾಪುರ ಬೈಪಾಸ್‌, ಬಾಗೇಪಲ್ಲಿ, ಆಂಧ್ರಪ್ರದೇಶದ ಅನಂತಪುರ ಮೂಲಕ ಬಳ್ಳಾರಿ ತಲುಪಿದ್ದಾರೆ. ಇತ್ತ ಮಾಧ್ಯಮಗಳು ನೆಲಮಂಗಲ ತೆರಳಿದ ನಂತರ ದರ್ಶನ್‌ ಅವರ ಪ್ರಯಾಣದ ದಿಕ್ಕು ಬದಲಾಗಿದೆ ಎಂಬುದು ತಿಳಿದು ಮರಳಿವೆ. ನಂತರ ಬೆಳಗ್ಗೆ 10.20ರ ಸುಮಾರಿಗೆ ಬಳ್ಳಾರಿ ಕಾರಾಗೃಹ ತಲುಪಿದ ದರ್ಶನ್ ಅವರಿಗೆ ವೈದ್ಯಕೀಯ ತಪಾಸಣೆ ಬಳಿಕ ಜೈಲಿಗೆ ಅಧಿಕಾರಿಗಳು ಪ್ರವೇಶ ನೀಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಷೇರುಪೇಟೆಯಲ್ಲಿ ಹೂಡಿಕೆ ನೆಪದಲ್ಲಿ ಉದ್ಯಮಿಗೆ ₹8.3 ಕೋಟಿ ಧೋಖಾ
ಪಾದಚಾರಿಗಳಿಗೆ ಬೆಕ್ ಗುದ್ದಿಸಿ ಕೆಳಗೆ ಬಿದ್ದು ಅಪ್ರಾಪ್ತ ಸವಾರ ಸಾವು