;Resize=(412,232))
ಬೆಂಗಳೂರು : ತನ್ನೊಂದಿಗೆ ಸಹಬಾಳ್ವೆ ನಡೆಸುವಂತೆ ಚಲಚಿತ್ರ ನಟಿಗೆ ಬೆನ್ನುಬಿದ್ದು ಕಾಟ ಕೊಡುತ್ತಿದ್ದ ಆರೋಪದ ಮೇರೆಗೆ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕನೊಬ್ಬನನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾರತ್ತಹಳ್ಳಿ ಸಮೀಪದ ನಿವಾಸಿ ಅರವಿಂದ್ ವೆಂಕಟೇಶ್ ರೆಡ್ಡಿ ಬಂಧಿತನಾಗಿದ್ದು, ಶ್ರೀಲಂಕಾದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಶನಿವಾರ ರೆಡ್ಡಿ ಬಂಧನವಾಗಿದೆ. ಕೆಲ ದಿನಗಳ ಹಿಂದೆ ರೆಡ್ಡಿ ಕಿರುಕುಳದ ಬಗ್ಗೆ ರಾಜರಾಜೇಶ್ವರಿ ನಗರ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದರು. ಈ ಬಗ್ಗೆ ತನಿಖೆಗಿಳಿದ ವಿಜಯನಗರ ಉಪ ವಿಭಾಗದ ಎಸಿಪಿ ಎನ್. ಚಂದನ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಸುಬ್ರಮಣಿ ನೇತೃತ್ವದ ತಂಡ, ಆರೋಪಿ ಪತ್ತೆಗೆ ಬಲೆ ಬೀಸಿತ್ತು. ಅಷ್ಟರಲ್ಲಿ ವಿದೇಶಕ್ಕೆ ಹಾರಿದ್ದ ರೆಡ್ಡಿ ಅಲ್ಲಿಂದ ಮರಳಿದ ಕೂಡಲೇ ಪೊಲೀಸರು ಬಂಧಿಸಿದ್ದಾರೆ.
ಮೊದಲು ರೂಪದರ್ಶಿಯಾಗಿದ್ದ ಮಡಿಕೇರಿ ಜಿಲ್ಲೆಯ ಸಂತ್ರಸ್ತೆ, ತರುವಾಯ ಬಣ್ಣದ ಬದುಕಿಗೆ ಕಾಲಿಟ್ಟಿದ್ದಳು. ಕನ್ನಡದ 9 ಹೆಚ್ಚಿನ ಚಿತ್ರಗಳಲ್ಲಿ ಆಕೆ ನಾಯಕಿಯಾಗಿ ನಟಿಸಿದ್ದಾಳೆ. ರಿಯಲ್ ಎಸ್ಟೇಟ್ ಕಂಪನಿಯಾದ ಎವಿಆರ್ ಗ್ರೂಪ್ ಮಾಲಿಕ ಅರವಿಂದ ರೆಡ್ಡಿ, ಚಲನಚಿತ್ರ ನಿರ್ಮಾಣದಲ್ಲಿ ಸಹ ತೊಡಗಿಸಿಕೊಂಡಿದ್ದ. ಅಲ್ಲದೆ ಚಲನಚಿತ್ರ ರಂಗದ ಕಾರ್ಯಕ್ರಮಗಳಿಗೆ ಸಹ ಆತನ ಪ್ರಾಯೋಜಕತ್ವ ಇತ್ತು. ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ನಾಯಕ ಸಹ ಆಗಿದ್ದ ಎಂದು ತಿಳಿದು ಬಂದಿದೆ.
ಐದು ವರ್ಷಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ ಚಲನಚಿತ್ರ ರಂಗದ ಕಲಾವಿದರ ಕ್ರಿಕೆಟ್ ಕೂಟದಲ್ಲಿ ಅರವಿಂದ್ ರೆಡ್ಡಿಗೆ ಸಂತ್ರಸ್ತ ನಟಿ ಪರಿಚಯವಾಗಿದ್ದಳು. ಈ ಗೆಳೆತನ ಬಳಿಕ ಇಬ್ಬರಲ್ಲಿ ಆತ್ಮೀಯತೆ ಮೂಡಿತ್ತು. ತರುವಾಯ ಅವರು ಸಹಬಾಳ್ವೆ (ಲಿವಿಂಗ್ ಟು ಗೆದರ್) ಜೀವನ ನಡೆಸಿದ್ದರು. ಆಗ ಮನೆಗೆ ಕುಡಿದು ಬಂದು ನಟಿಗೆ ಕಿರುಕುಳ ಕೊಡಲಾರಂಭಿಸಿದ್ದ. ಈ ದೌರ್ಜನ್ಯ ಸಹಿಸಲಾರದೆ ಕೊನೆಗೆ ಆತನಿಂದ ಸಂತ್ರಸ್ತೆ ದೂರವಾಗಿದ್ದಳು. ಇದರಿಂದ ಕೆರಳಿದ ಅರವಿಂದ ರೆಡ್ಡಿ, ಮತ್ತೆ ತನ್ನೊಂದಿಗೆ ಸಹಬಾಳ್ವೆ ನಡೆಸುವಂತೆ ಒತ್ತಾಯಿಸಿ ನಟಿಗೆ ಕಿರುಕುಳ ಕೊಡುತ್ತಿದ್ದ. ತನ್ನ ಸಹಚರರ ಮೂಲಕ ಆಕೆಯ ಪೋಷಕರಿಗೆ ಧಮ್ಕಿ ಹಾಕಿಸಿದ್ದ. ಈ ಬೆಳವಣಿಗೆಯಿಂದ ಬೇಸತ್ತು ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ತಿಳಿದು ಬಂದಿದೆ.
ಕಣ್ಣೀರಿಟ್ಟ ಸಂತ್ರಸ್ತ ನಟಿ: ಈತನ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ನಟಿ ದೂರು ಕೊಟ್ಟಿದ್ದಳು. ಆದರೂ ಬಿಡದೆ ಆತನ ಹಿಂಸೆ ಮುಂದುವರಿದಿತ್ತು. ಈ ಕಿರುಕುಳ ಸಹಿಸಲಾರದೆ ನೊಂದ ನಟಿ, ಇತ್ತೀಚೆಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿಯಾಗಿ ಕಣ್ಣೀರಿಟ್ಟು ಕಷ್ಟ ಹೇಳಿಕೊಂಡಿದ್ದಳು. ಈ ನೋವಿಗೆ ಸ್ಪಂದಿಸಿದ ಆಯುಕ್ತರು, ಕೂಡಲೇ ನಟಿ ದೂರಿನ ಮೇರೆಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರಿಗೆ ಸೂಚಿಸಿದ್ದರು. ಆನಂತರ ಪ್ರಕರಣವು ಆರ್.ಆರ್.ನಗರ ಠಾಣೆಯಿಂದ ಗೋವಿಂದರಾಜನಗರ ಠಾಣೆಗೆ ವರ್ಗಾವಣೆಯಾಯಿತು. ಅಷ್ಟರಲ್ಲಿ ಶ್ರೀಲಂಕಾಕ್ಕೆ ತೆರಳಿದ್ದ ಅರವಿಂದ್ ಪತ್ತೆಗೆ ಲುಕ್ ನೋಟಿಸ್ ಅನ್ನು ಪೊಲೀಸರು ಜಾರಿಗೊಳಿಸಿದ್ದರು. ಅಂತೆಯೇ ವಿದೇಶದಿಂದ ಆತ ಬಂದಿಳಿದ ಕೂಡಲೇ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಮೀನು ಸಿಕ್ಕಿದ ಬೆನ್ನಲ್ಲೇ ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧಿತರಾಗಿದ್ದ ನಿರ್ಮಾಪಕ ವೆಂಕಟೇಶ ರೆಡ್ಡಿ ಸಂಜೆ ಬಿಡುಗಡೆಯಾಗಿದ್ದಾರೆ. ಶ್ರೀಲಂಕಾದಿಂದ ಬಂದಿಳಿದ ಕೂಡಲೇ ಅವರನ್ನು ಬಂಧಿಸಿದ್ದ ಗೋವಿಂದರಾಜನಗರ ಠಾಣೆ ಪೊಲೀಸರು, ಸಂಜೆ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಇದೇ ವೇಳೆ ಜಾಮೀನು ಕೋರಿ ಆರೋಪಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯದ ಪುರಸ್ಕರಿಸಿತು.
ನನ್ನ ಮೇಲೆ ನಟಿ ಮಾಡಿರುವ ಆರೋಪಗಳು ಸುಳ್ಳು. 2024ರಲ್ಲಿ ನಾವು ವಿವಾಹವಾಗಲು ನಿರ್ಧರಿಸಿದ್ದೇವು. ಆದರೆ ವೈಯಕ್ತಿಕ ಕಾರಣಗಳಿಂದ ಮದುವೆ ಆಗಲಿಲ್ಲ. ಎರಡು ವರ್ಷಗಳ ಹಿಂದೆ ಆಕೆಗೆ ಹೆಸರಿನಲ್ಲಿ ವಿನ್ಯಾಸಗೊಳಿಸಿ ಪೊರ್ಶೆ ಕಾರು ಕೊಡಿಸಿದ್ದೆ. ಹಲವು ಉಡುಗೊರೆ ಕೊಟ್ಟಿದ್ದೇನೆ. ನಾನು ಆಕೆ ಮಟ್ಟಿಗಿಳಿದು ಪ್ರತಿ ಆರೋಪ ಮಾಡಲ್ಲ. ನನ್ನ ವಿರುದ್ಧದ ಆಪಾದನೆಗಳಿಗೆ ಕಾನೂನು ಮೂಲಕ ಉತ್ತರ ಕೊಡುತ್ತೇನೆ.
ಅರವಿಂದ್ ವೆಂಕಟೇಶ್ ರೆಡ್ಡಿ ಉದ್ಯಮಿ ಹಾಗೂ ನಿರ್ಮಾಪಕ.