ಮಂಗಳೂರು: ನಾಪತ್ತೆಯಾಗಿದ್ದ ಉದ್ಯಮಿಯ ಮೃತದೇಹ ಪತ್ತೆ; ಆರು ಮಂದಿ ವಿರುದ್ಧ ಪ್ರಕರಣ

KannadaprabhaNewsNetwork |  
Published : Oct 08, 2024, 01:02 AM ISTUpdated : Oct 08, 2024, 04:12 AM IST
death

ಸಾರಾಂಶ

ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ ಅವರ ಸಹೋದರ, ಉದ್ಯಮಿ ಬಿ.ಎಂ. ಮುಮ್ತಾಜ್‌ ಅಲಿಯವರ ಮೃತದೇಹ ಕೂಳೂರಿನ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ. ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

 ಮಂಗಳೂರು : ಕೂಳೂರು ಸೇತುವೆ ಪಕ್ಕ ಬಿಎಂಡಬ್ಲ್ಯೂ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದ ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ ಅವರ ಸಹೋದರ, ಉದ್ಯಮಿ ಬಿ.ಎಂ. ಮುಮ್ತಾಜ್‌ ಅಲಿಯವರ ಮೃತದೇಹ 30 ತಾಸುಗಳ ಕಾರ್ಯಾಚರಣೆ ಬಳಿಕ ಮಂಗಳವಾರ ಬೆಳಗ್ಗೆ ಕೂಳೂರಿನ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಮ್ತಾಜ್‌ ಅಲಿ ಅವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟು ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಕೃಷ್ಣಾಪುರದ ಮಹಿಳೆ, ಆಕೆಯ ಪತಿ ಸೇರಿದಂತೆ ಆರು ಮಂದಿ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅವರುಗಳ ಬಂಧನಕ್ಕೆ ಬಲೆ ಬೀಸಲಾಗಿದೆ.

ಸೋಮವಾರ ಬೆಳಗ್ಗೆ 3.10ರ ವೇಳೆಗೆ ಮನೆಯಿಂದ ಹೊರಟಿದ್ದ ಅಲಿ, ಸುಮಾರು 4.30ರ ವೇಳೆಗೆ ಕೂಳೂರು ಸೇತುವೆ ಬಳಿ ತಮ್ಮ ಬಿಎಂಡಬ್ಲ್ಯೂ ಕಾರು ನಿಲ್ಲಿಸಿ ನಾಪತ್ತೆಯಾಗಿದ್ದರು. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌, ಅಗ್ನಿಶಾಮಕ, ಸ್ಥಳೀಯ ಯುವಕರು ಸೇರಿ ಒಟ್ಟು ಆರು ತಂಡಗಳು ರಾತ್ರಿವರೆಗೆ ಶೋಧ ಕಾರ್ಯ ನಡೆಸಿದರೂ ದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಗ್ಗೆ 6 ಗಂಟೆಗೆ ಮತ್ತೆ ಶೋಧ ಆರಂಭವಾಯಿತು. ಸುಮಾರು 10.30ರ ವೇಳೆಗೆ ಮುಮ್ತಾಜ್‌ ಅವರ ಮೃತದೇಹ ಕೂಳೂರು ಸೇತುವೆಯ ಕೆಲವೇ ಮೀಟರ್‌ ದೂರದಲ್ಲಿ ಪತ್ತೆಯಾಯಿತು.

ಬಳಿಕ ಮೃತದೇಹವನ್ನು ಎಜೆ ಆಸ್ಪತ್ರೆಗೆ ಕೊಂಡೊಯ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಿಕ, ಕೃಷ್ಣಾಪುರದ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಂಜೆ ವೇಳೆಗೆ ಕೃಷ್ಣಾಪುರದ ಈದ್ಗಾ ಮಸೀದಿಯಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಈ ಮಧ್ಯೆ, ಮಹಿಳೆ ಸೇರಿ ಆರು ಮಂದಿಯಿಂದ ಬೆದರಿಕೆ ಮತ್ತು ಕಿರುಕುಳದಿಂದಾಗಿ ಮುಮ್ತಾಜ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಆರು ಮಂದಿ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸೋಮವಾರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಮುಮ್ತಾಜ್‌ ಅವರು ಕೃತ್ಯಕ್ಕೆ ಕಾರಣರಾದ ವ್ಯಕ್ತಿಗಳನ್ನು ಹೆಸರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಆಡಿಯೊ ಸಂದೇಶ ಕಳುಹಿಸಿದ್ದರು. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್‌ ಅಗ್ರವಾಲ್‌ ತಿಳಿಸಿದ್ದಾರೆ.

ಬಸ್ಸಿಗೆ ಡಿಕ್ಕಿಯಾಗಿದ್ದ ಕಾರು:  ಸೋಮವಾರ ಮುಂಜಾನೆ 3.10ರ ಸುಮಾರಿಗೆ ಮನೆಯಿಂದ ಹೊರಟಿದ್ದ ಮುಮ್ತಾಜ್‌ ಅವರ ಬಿಎಂಡಬ್ಲ್ಯೂ ಕಾರು ಕೂಳೂರಿನ ಎಂಸಿಎಂ ಬಳಿಯ ರೈಲ್ವೆ ಗೇಟ್‌ ಬಳಿ ಖಾಸಗಿ ಬಸ್ಸಿಗೆ ಡಿಕ್ಕಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಅಪಘಾತಕ್ಕೆ ಒಳಗಾದ ಬಸ್ಸನ್ನು ಗುರುತಿಸಲಾಗಿದ್ದು, ಈ ಕುರಿತು ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆದಿದೆ.

ಬ್ಲಾಕ್ ಮೇಲ್‌ನಿಂದಲೇ ನನ್ನ ಸಹೋದರ ಈ ನಿರ್ಧಾರಕ್ಕೆ ಬಂದಿದ್ದಾನೆ. ಶೈಕ್ಷಣಿಕ, ಧಾರ್ಮಿಕ ಕಾರ್ಯಗಳಿಂದ ಹೆಸರು ಗಳಿಸಿದ್ದ. ಇದನ್ನು ಸಹಿಸದೆ ಕೆಲವು ಶಕ್ತಿಗಳು ಕುತಂತ್ರ ಮಾಡಿ ಸಾವಿಗೆ ಕಾರಣರಾಗಿದ್ದಾರೆ. ಆತನ ಫೋನನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ನನ್ನ ಸಹೋದರನ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಲಿ.

- ಮೊಹಿಯುದ್ದೀನ್‌ ಬಾವ, ಮಾಜಿ ಶಾಸಕ.

ಆಯಿಷಾ ರೆಹಮತ್‌ ಮಾಸ್ಟರ್‌ ಮೈಂಡ್‌: ಸುರತ್ಕಲ್‌ ಕೃಷ್ಣಾಪುರದ 7ನೇ ಬ್ಲಾಕ್‌ ನಿವಾಸಿ ಆಯಿಷಾ ರೆಹಮತ್‌ ಎಂಬಾಕೆಯೇ ಪ್ರಕರಣದ ಮಾಸ್ಟರ್‌ ಮೈಂಡ್‌. ಮುಮ್ತಾಜ್‌ ಅಲಿಗೆ ನಿರಂತರ ಬೆದರಿಕೆ, ಹಣದ ಬೇಡಿಕೆ ಇಟ್ಟಿದ್ದ ಈಕೆಗೆ ಆಕೆಯ ಪತಿ ಶೋಯೆಬ್‌ ಕೂಡ ಸಾಥ್‌ ನೀಡಿದ್ದ. ಜತೆಗೆ ಕಾಟಿಪಳ್ಳ ಬೊಳ್ಳಾಜೆಯ ಅಬ್ದುಲ್‌ ಸತ್ತಾರ್‌, ಬಂಟ್ವಾಳ ಸಜಿಪಮುನ್ನೂರು ನಿವಾಸಿ ಖಲಂದರ್‌ ಶಾಫಿ, ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಮುಸ್ತಫಾ, ಇದೇ ಊರಿನ ಮೊಹಮ್ಮದ್‌ ಸಿರಾಜ್‌ ಸಲಾಂ ಎಂಬುವರ ಮೇಲೂ ಪ್ರಕರಣ ದಾಖಲಾಗಿದೆ. ಇವರ ಪತ್ತೆಗೆ ಪೊಲೀಸ್‌ ತಂಡಗಳು ಕಾರ್ಯಾಚರಣೆ ಆರಂಭಿಸಿವೆ.

ಹಣಕ್ಕಾಗಿ ವ್ಯವಸ್ಥಿತ ರೀತಿಯ ಹನಿಟ್ರಾಪ್‌?: ವಿದ್ಯಾಸಂಸ್ಥೆ ಮಾತ್ರವಲ್ಲದೆ ವಿವಿಧ ಉದ್ಯಮಗಳನ್ನು ಹೊಂದಿದ್ದ ಮುಮ್ತಾಜ್‌, ಪ್ರಭಾವಿ ವ್ಯಕ್ತಿಯಾಗಿದ್ದರು. ಆಯಿಷಾ ರೆಹಮತ್‌, ಇತರರ ಜತೆ ಸೇರಿ ವ್ಯವಸ್ಥಿತವಾಗಿ ಹನಿಟ್ರಾಪ್‌ ನಡೆಸಿದ್ದೇ ಮುಮ್ತಾಜ್‌ ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಆಯಿಷಾ ಹಲವು ವರ್ಷಗಳಿಂದ ಮುಮ್ತಾಜ್‌ ಅಲಿಗೆ ಪರಿಚಯವಿದ್ದು, ಮುಮ್ತಾಜ್‌ ಅವರ ಸಂಸ್ಥೆಯಲ್ಲೇ ಉದ್ಯೋಗಕ್ಕಿದ್ದಳು. ಈ ನಡುವೆ 2-3 ತಿಂಗಳಿಂದೀಚೆಗೆ ಸೆಕ್ಸ್‌ ವಿಡಿಯೋ ಇದೆ ಎಂದು ಹೇಳಿ ಮುಮ್ತಾಜ್‌ಗೆ ಕಿರುಕುಳ ನೀಡಲಾರಂಭಿಸಿದ್ದಳು. ಮಾತ್ರವಲ್ಲದೆ, ವಿವಾಹವಾಗುವಂತೆ ಬೆದರಿಕೆಯೊಡ್ಡುತ್ತಿದ್ದಳು. ವಿವಾಹಕ್ಕೆ ಮುಮ್ತಾಜ್‌ ನಿರಾಕರಿಸಿದ್ದರಿಂದ ಹಣಕ್ಕಾಗಿ ಪದೇ ಪದೆ ಸತಾಯಿಸುತ್ತಿದ್ದಳು. ರೆಹಮತ್‌ಗೆ ಮುಮ್ತಾಜ್‌ 50 ಲಕ್ಷ ರು.ಗಳನ್ನು ನೀಡಿದ್ದು, ಅದರಲ್ಲಿ 25 ಲಕ್ಷ ರು.ಗಳನ್ನು ಚೆಕ್‌ ಮೂಲಕ ಪಾವತಿಸಿದ್ದಾರೆ.

ನಂತರವೂ ಹೆಚ್ಚಿನ ಹಣಕ್ಕೆ ರೆಹಮತ್‌ ಬೇಡಿಕೆ ಇಟ್ಟಾಗ ಮುಮ್ತಾಜ್‌ ನಿರಾಕರಿಸಿದ್ದಾರೆ. ಈ ವೇಳೆ ಮುಮ್ತಾಜ್‌ ಅವರ ರಾಜಕೀಯ ವಿರೋಧಿ ಅಬ್ದುಲ್‌ ಸತ್ತಾರ್‌ನ್ನು ಸಂಪರ್ಕಿಸಿ ಎಲ್ಲ ವಿಚಾರ ತಿಳಿಸಿದ್ದಾಳೆ. ಈ ಕಾಲ್‌ ರೆಕಾರ್ಡ್‌ನ ಆಡಿಯೋ ಇಟ್ಟುಕೊಂಡು ಸತ್ತಾರ್‌ ಮತ್ತು ಉಳಿದ ಮೂವರು ಮುಮ್ತಾಜ್‌ ಅಲಿಗೆ 2 ಕೋಟಿ ರು. ಕೊಡುವಂತೆ ಬೆದರಿಕೆಯೊಡ್ಡಿದ್ದಾರೆ ಎನ್ನಲಾಗಿದೆ. ಈ ನಡುವೆ ಆಯಿಷಾ ರೆಹಮತ್‌, ಮುಮ್ತಾಜ್‌ ಅವರ ಪತ್ನಿಯನ್ನು ಭೇಟಿಯಾಗಿದ್ದು, ಇದರ ಬಳಿಕ ಮುಮ್ತಾಜ್‌ ಕುಟುಂಬದಲ್ಲಿ ತೀವ್ರ ಗೊಂದಲ ಸೃಷ್ಟಿಯಾಗಿತ್ತು. ಹೀಗಾಗಿ, ಮರ್ಯಾದೆಗೆ ಅಂಜಿ ಮುಮ್ತಾಜ್‌ ಆತ್ಮಹತ್ಯೆ ತೀರ್ಮಾನ ಕೈಗೊಂಡರು ಎಂದು ತಿಳಿದು ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಹಣಕ್ಕಾಗಿ ಪರಿಚಿತನನ್ನೇ ಕಿಡ್ನಾಪ್‌ ಮಾಡಿದ್ದ ನಾಲ್ವರ ಬಂಧನ
ಧರ್ಮರಾಯಸ್ವಾಮಿ ದೇಗುಲದ ನೆಕ್ಲೆಸ್‌ ಕಳವು