ಬೆಳ್ತಂಗಡಿ : ಪಂಜಾಬ್‌ನಲ್ಲಿ ಮೇ 17ರಂದು ಆತ್ಮಹತ್ಯೆ ಮಾಡಿಕೊಂಡ ಧರ್ಮಸ್ಥಳದ ಬೋಳಿಯಾರು ಮೂಲದ ಏರೋಸ್ಪೇಸ್ ಎಂಜಿನಿಯರ್ ಆಕಾಂಕ್ಷಾ ನಾಯರ್ (22) ಅವರ ಅಂತ್ಯಸಂಸ್ಕಾರ ಬುಧವಾರ ಸ್ವಗ್ರಾಮದಲ್ಲಿ ನೆರವೇರಿತು.
ವಿಮಾನದ ಮೂಲಕ ಪಂಜಾಬ್‌ನಿಂದ ದೆಹಲಿಗೆ, ಅಲ್ಲಿಂದ ಬೆಂಗಳೂರಿಗೆ ಬಂದ ಮೃತದೇಹವನ್ನು ಬೆಂಗಳೂರಿನಿಂದ ಆ್ಯಂಬುಲೆನ್ಸ್ ಮೂಲಕ ರಸ್ತೆ ಮಾರ್ಗದಲ್ಲಿ ಮನೆಗೆ ತರಲಾಯಿತು. ಬಳಿಕ, ಬುಧವಾರ ಬೆಳಗ್ಗೆ 8.45ಕ್ಕೆ ಅವರ ಮೃತದೇಹವನ್ನು ಚಿಕ್ಕಪ್ಪ (ತಂದೆ ಸುರೇಂದ್ರನ್ ಅವರ ಸಹೋದರ) ಪ್ರಕಾಶ್ ಅವರ ಮನೆಗೆ ತರಲಾಯಿತು. ಮನೆಯ ಅಂಗಳದಲ್ಲಿ ಮೃತದೇಹದ ಅಂತಿಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಅಲ್ಲೇ ಅಂತಿಮ ವಿಧಿ ವಿಧಾನಗಳನ್ನು ಪೂರೈಸಿ, ಅವರ ಮನೆಯ ಸನಿಹವೇ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಮುಂದಿನ ತನಿಖಾ ದೃಷ್ಟಿಯಿಂದ ಮೃತದೇಹವನ್ನು ಸುಡದೆ ಮಣ್ಣು ಮಾಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು. ಮಲಯಾಳಿ ಹಿಂದೂ ಪದ್ಧತಿಯ ಪ್ರಕಾರ ಅಂತಿಮ ಸಂಸ್ಕಾರದ ಕ್ರಿಯೆ ಮನೆಯ ಸನಿಹ ನೆರವೇರಿತು.
ಈ ಮಧ್ಯೆ, ಆಕಾಂಕ್ಷಾ ನಾಯರ್ ತಾಯಿ ಅಸ್ವಸ್ಥರಾಗಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವೇಳೆ, ಸುದ್ದಿಗಾರರ ಜೊತೆ ಮಾತನಾಡಿ, ನನ್ನ ಮಗಳು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ. ಅವಳನ್ನು ಪ್ರೊಫೆಸರ್ ದಂಪತಿಯೇ ಅದೇನೋ ಕುತಂತ್ರ ಹೆಣೆದು ಸಾಯಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಕಾಲೇಜಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಅಲ್ಲಿನ ಇನ್‌ಸ್ಪೆಕ್ಟರ್ ಮಟ್ಟದ ಅಧಿಕಾರಿಯೊಬ್ಬರು ಅವರನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ. ನಾವು ಕೊಟ್ಟ ದೂರನ್ನು ಆರಂಭದಲ್ಲಿ ಗಣನೆಗೆ ತೆಗೆದುಕೊಳ್ಳದೆ ಅವರಾಗಿಯೇ, ನನ್ನ ಮಗಳು ಖಿನ್ನತೆಯಿಂದ ಆತ್ಮಹತ್ಯೆ ಮಾಡಿದ್ದು ಎಂದು ಎಫ್‌ಐಆರ್ ದಾಖಲಿಸಿದ್ದರು. ಅದರ ಪ್ರತಿಯನ್ನು ನಮಗೆ ನೀಡಿದಾಗ, ಅದು ಪಂಜಾಬಿ ಭಾಷೆಯಲ್ಲಿದ್ದುದರಿಂದ ಸ್ಥಳೀಯ ಮಾಧ್ಯಮದವರ ಸಹಕಾರದಿಂದ ಅದನ್ನು ಓದಿ ಕೇಳಿಸಿಕೊಂಡ ಬಳಿಕ ನಾವು ಪ್ರತ್ಯೇಕ ದೂರು ನೀಡಿದೆವು. ಮಗಳು ಕರಾಟೆ ಬ್ರೌನ್ ಬೆಲ್ಟ್ ಕೂಡ ಮಾಡಿದ್ದಳು. ಹೀಗಾಗಿ ಆಕೆಯ ಸಾವಿನಲ್ಲಿ ಏನೋ ದೊಡ್ಡ ಮೋಸ ಇದೆ. ನಮ್ಮ ಮಗಳನ್ನು ಅತ್ಯಂತ ಪ್ರೀತಿಯಿಂದ ಸಾಕಿದ್ದೇವೆ. ಅವಳ ವಿದ್ಯಾಭ್ಯಾಸಕ್ಕಾಗಿ 25 ಲಕ್ಷ ರು.ಗೂ ಅಧಿಕ ವೆಚ್ಚ ಮಾಡಿದ್ದೇವೆ. ಅದಕ್ಕಾಗಿ ಪರ್ಸನಲ್ ಲೋನ್, ಚಿನ್ನ ಅಡವು ಇಟ್ಟು ಕೂಡ ಸಾಲ ಮಾಡಿದ್ದೇವೆ ಎಂದು ಕಂಬನಿಗರೆದರು.