ಅಮೆರಿಕನ್ನರ ಡಿಜಿಟಲ್ ಅರೆಸ್ಟ್ ಮಾಡಿ ₹200 ಕೋಟಿ ಲೂಟಿ: 16 ಮಂದಿ ಬಂಧನ

KannadaprabhaNewsNetwork |  
Published : Oct 15, 2025, 02:07 AM ISTUpdated : Oct 15, 2025, 05:24 AM IST
COP 3 | Kannada Prabha

ಸಾರಾಂಶ

  ಅಮೆರಿಕಾ ಪ್ರಜೆಗಳನ್ನು ‘ಡಿಜಿಟಲ್ ಅರೆಸ್ಟ್’ಗೊಳಪಡಿಸಿ ಕೋಟ್ಯಂತರ ರು. ಹಣ ಸುಲಿಗೆ ಮಾಡಿದ್ದ ಅಂತಾರಾಷ್ಟ್ರೀಯ ಮಟ್ಟದ ಸೈಬರ್ ವಂಚಕರ ಜಾಲವೊಂದನ್ನು ಭೇದಿಸಿದ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು, ಈ ಸಂಬಂಧ ನಕಲಿ ಬಿಪಿಓವೊಂದರ ಕಂಪನಿ ಮೇಲೆ ದಾಳಿ ನಡೆಸಿ 16 ಮಂದಿಯನ್ನು ಸೆರೆ ಹಿಡಿದಿದ್ದಾರೆ.

  ಬೆಂಗಳೂರು  :  ರಾಜಧಾನಿಯಲ್ಲಿ ಕುಳಿತು ಅಮೆರಿಕಾ ಪ್ರಜೆಗಳನ್ನು ‘ಡಿಜಿಟಲ್ ಅರೆಸ್ಟ್’ಗೊಳಪಡಿಸಿ ಕೋಟ್ಯಂತರ ರು. ಹಣ ಸುಲಿಗೆ ಮಾಡಿದ್ದ ಅಂತಾರಾಷ್ಟ್ರೀಯ ಮಟ್ಟದ ಸೈಬರ್ ವಂಚಕರ ಜಾಲವೊಂದನ್ನು ಭೇದಿಸಿದ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರು, ಈ ಸಂಬಂಧ ನಕಲಿ ಬಿಪಿಓವೊಂದರ ಕಂಪನಿ ಮೇಲೆ ದಾಳಿ ನಡೆಸಿ 16 ಮಂದಿಯನ್ನು ಸೆರೆ ಹಿಡಿದಿದ್ದಾರೆ.

ಇದುವರೆಗೆ ವಿದೇಶದಿಂದ ಭಾರತೀಯರನ್ನು ‘ಡಿಜಿಟಲ್ ಅರೆಸ್ಟ್‌’ಗೆ ಒಳಪಡಿಸುತ್ತಿದ್ದ ಸೈಬರ್ ವಂಚಕರು, ಈಗ ಜಾಗತಿಕ ಮಟ್ಟದಲ್ಲಿ ‘ಐಟಿ ಹಬ್‌’ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಿಂದ ಪರದೇಶದ ಪ್ರಜೆಗಳಿಗೆ ಗಾಳ ಹಾಕಿದ್ದಾರೆ.

ಗುಜರಾತ್‌ನ ಮಾದೇವ್ ಸಿಂಗ್, ಮಹಾರಾಷ್ಟ್ರದ ಫ್ರಾನ್ಸಿಸ್‌, ಕಾರ್ತಿಕ್ ರಾಜ್‌, ಸುನೀಲ್‌, ಅರವಿಂದ್‌ ಅನ್ನಿ ಪೂಜಾರಿ, ಗುರು ಪ್ರಸನ್ನ, ರಿಶೀತ್ ರಮೇಶ್‌ ಸಾಲಿಯಾನ್‌, ಇಂದ್ ಲಾಮ್ಲನಿ ಯಾದವ್, ರೋಹನ್, ಮೇಘಾಲಯದ ಮಿಂಟ್‌ ಕಂಕೈ, ರೇಮಿಸನ್‌ ಬಮೊನ್‌, ಫಾನಿ ಲೆಯ್ಬಾಹ್‌, ಎಲ್ಜಿಬಾ ಮೇರಿ ಮಾರ್ಬನಿಂಗ್‌, ಒಡಿಶಾದ ರಾಕೇಶ್‌ ಕುಮಾರ್ ಸಿಂಗ್, ಮಧ್ಯಪ್ರದೇಶದ ರಾಮಕೃಷ್ಣ, ಪಶ್ಚಿಮ ಬಂಗಾಳದ ಪ್ರಿಯಾಂಕ ಗುರುಂಗ್‌ ಬಂಧಿತರು.

ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಮಾಸ್ಟರ್‌ ಮೈಂಡ್‌ಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇತ್ತೀಚೆಗೆ ಎಚ್‌ಎಸ್‌ಆರ್‌ ಲೇಔಟ್‌ 4ನೇ ಹಂತದಲ್ಲಿ ಸೈಬಿಟ್ಸ್ ಸಲೂಷನ್ ಕಂಪನಿ ಹೆಸರಿನಲ್ಲಿ ಮೇಲೆ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ದಾಳಿ ನಡೆಸಿದಾಗ ಸೈಬರ್ ವಂಚನೆ ಜಾಲ ಬಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಸಾರಾ ಫಾತಿಮಾ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆಯ ಎಸಿಪಿ ಗೋವಿರ್ಧನ್ ಗೋಪಾಲ್ ನೇತೃತ್ವದ ಎಚ್‌ಎಸ್‌ಆರ್ ಲೇಔಟ್ ಠಾಣೆ ಪಿಐ ಹರೀಶ್ ಹಾಗೂ ಸಿಇಎನ್ ಠಾಣೆ ಪಿಐ ಪಿ.ಎನ್‌. ಈಶ್ವರಿ ತಂಡ ನಡೆಸುತ್ತಿದೆ ಎಂದು ಆಯುಕ್ತರು ಹೇಳಿದ್ದಾರೆ.

ತರಬೇತಿ, ವಸತಿ, ಸಂಬಳ

ಕಳೆದ ಎರಡು ವರ್ಷಗಳಿಂದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಕಾಲ್ ಸೆಂಟರ್ ಕಂಪನಿ ಕಾರ್ಯಚಟುವಟಿಕೆ ನಡೆಸಿದೆ. ತಮ್ಮ ಕಂಪನಿಗೆ ಹೊರರಾಜ್ಯಗಳ 20 ರಿಂದ 25 ಯುವಕರನ್ನು ಆರೋಪಿಗಳು ನೇಮಿಸಿಕೊಂಡಿದ್ದರು. ಬಳಿಕ ವಿದೇಶಿ ಪ್ರಜೆಗಳಿಗೆ ಹೇಗೆ ಡಿಜಿಟಲ್ ಅರೆಸ್ಟ್‌ಗೊಳಪಡಿಸಬೇಕು ಎನ್ನುವುದನ್ನು ಆನ್‌ಲೈನ್‌ ಮೂಲಕ ಆರೋಪಿಗಳು ತರಬೇತಿ ನೀಡಿದ್ದರು.

ಇದಕ್ಕಾಗಿ ಸಂಭಾಷಣೆಗೆ ಸ್ಕ್ರಿಫ್ಟ್ ಸಹ ಕೊಟ್ಟಿದ್ದರು. ಅಲ್ಲದೆ ಬಿಟಿಎಂ ಲೇಔಟ್‌ ಹಾಗೂ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ಪ್ರತ್ಯೇಕವಾಗಿ ಪಿಜಿಗಳಲ್ಲಿ ಆ ನೌಕರರಿಗೆ ಊಟ-ವಸತಿ ಕಲ್ಪಿಸಿದ್ದರು. ಸಂಜೆ ಕೆಲಸಕ್ಕೆ ಬಂದರೆ ಮುಂಜಾನೆವರೆಗೆ ವಿದೇಶಿಯರ ಜತೆ ಅವರು ಮಾತನಾಡಬೇಕಿತ್ತು. ಒಮ್ಮೆ ಕಚೇರಿಯೊಳಗೆ ಪ್ರವೇಶಿಸಿದ ಕೂಡಲೇ ಬಾಗಿಲು ಬಂದ್ ಮಾಡುತ್ತಿದ್ದರು. ಕಚೇರಿಯಲ್ಲಿ ಕೂಡಿ ಹಾಕಿ ‘ಡಿಜಿಟಲ್ ಅರೆಸ್ಟ್’ ಸಂತ್ರಸ್ತರಿಗೆ ನೌಕರರಿಂದ ಕರೆ ಮಾಡಿಸುತ್ತಿದ್ದರು.

ಹೇಗೆ ಡಿಜಿಟಲ್ ಅರೆಸ್ಟ್?

ಈ ಸಿಬ್ಬಂದಿಗೆ ಪ್ರತಿ ತಿಂಗಳು 20 ರಿಂದ 25 ಸಾವಿರ ರು. ವೇತನ ಹಾಗೂ 2 ರಿಂದ 4 ಲಕ್ಷ ರು.ವರೆಗೆ ಕಮಿಷನ್‌ ರೂಪದಲ್ಲಿ ಹಣ ಸಂದಾಯವಾಗುತ್ತಿತ್ತು. ಮೂರು ವಾರಗಳ ಕಾಲ ಟೆಲಿ ಕಾಲರ್ ತರಬೇತಿ ನೀಡಿದ ನಂತರ ಕಂಪನಿಯವರು ಸೂಚಿಸಿದಂತೆ ಅಮೆರಿಕಾ ಗಡಿ ಭದ್ರತಾ ಪಡೆ, ಅಮೆರಿಕಾ ಅಂಚೆ ಸೇವಾ ಇಲಾಖೆ, ಅಮೆರಿಕಾ ಕಸ್ಟಮ್ಸ್ ಹಾಗೂ ಬಾರ್ಡರ್ ಪ್ರೋಟೆಷನ್ ಫೋರ್ಸ್ ಅಧಿಕಾರಿಗಳ ಸೋಗಿನಲ್ಲಿ ಅಮೆರಿಕಾ ಪ್ರಜೆಗಳಿಗೆ ಕರೆ ಮಾಡುತ್ತಿದ್ದರು.

ಅಮೆರಿಕಾ ಪ್ರಜೆಗಳಿಗೆ ಸಹ ಡ್ರಗ್ಸ್ ಕೇಸ್ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವುದಾಗಿ ಹೆದರಿಸಿ ನಕಲಿ ಬಂಧನ ವಾರೆಂಟ್ ಹಾಗೂ ನಕಲಿ ಪೊಲೀಸ್ ಐಡಿ ತೋರಿಸಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದರು. ನಂತರ ನಮ್ಮ ಮಾತನ್ನು ಕೇಳುವಂತೆ ಸಂತ್ರಸ್ತರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಹೀಗೆ ವಂಚನೆ ಬಲೆಗೆ ಬಿದ್ದ ಸಂತ್ರಸ್ತರಿಂದ ಹಣವನ್ನು ಕಂಪನಿಯ ವ್ಯಾಲೇಟ್‌ ಅಥವಾ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಈ ಕೃತ್ಯಕ್ಕೆ ಲೈವ್ ಸರ್ವರ್‌ ಸಾಫ್ಟ್‌ವೇರ್ ನಲ್ಲಿ ಆರೋಪಿಗಳು ವ್ಯವಹರಿಸಿದ್ದಾರೆ.

ಅಮೆರಿಕಾ ಜತೆ ಕೆನಡಾ ಪ್ರಜೆಗಳಿಗೆ ಕಾಟ:

ಅಮೆರಿಕಾ ನಾಗರಿಕರ ಜತೆ ಮಾತನಾಡಲು ಜಸ್ಟ್‌ಪೇಸ್ಟ್‌.ಇಟಿ ಸೈಟ್‌ (https://justpaste.it/) ಬಳಸಿ ಸ್ಕ್ರಿಫ್ಟ್ ಗಳನ್ನು ಸಿದ್ಧಗೊಳಿಸುತ್ತಿದ್ದರು. ಅಲ್ಲದೆ ವಿವಿಧ ಆನ್‌ಲೈನ್‌ ಆ್ಯಪ್‌ ಬಳಸಿ ಇಂಟರ್ ನೆಟ್‌ ಮೂಲಕ ಕರೆಗಳನ್ನು ಮಾಡಿ ಅಮೇರಿಕಾ ಹಾಗೂ ಕೆನಡಾ ಪ್ರಜೆಗಳಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಆಯುಕ್ತರು ವಿವರಿಸಿದ್ದಾರೆ.

ತನಿಖೆಗೆ ಎಫ್‌ಬಿಐ ನೆರವು ಕೋರಿಕೆ: ಸೈಬರ್ ವಂಚನೆ ಜಾಲದ ತನಿಖೆ ಸಲುವಾಗಿ ಅಮೆರಿಕಾದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ (ಎಫ್‌ಬಿಐ) ನ ನೆರವನ್ನು ಪೊಲೀಸರು ಕೋರಿದ್ದಾರೆ.

ಈ ಪ್ರಕರಣ ಸಂಬಂಧ ಎಫ್‌ಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಮೆರಿಕಾದಲ್ಲಿರುವ ಸಂತ್ರಸ್ತರ ಪತ್ತೆಗೆ ಸಹಕರಿಸುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಹಣ ಕಳೆದುಕೊಂಡ ಸಂತ್ರಸ್ತರು ಪತ್ತೆಯಾದರೆ ತನಿಖೆಗೆ ಮಹತ್ವದ ಸಾಕ್ಷ್ಯವಾಗಲಿದೆ ಎಂದು ಜಂಟಿ ಆಯುಕ್ತ (ಪಶ್ಚಿಮ) ವಂಶಿಕೃಷ್ಣ ತಿಳಿಸಿದ್ದಾರೆ.

ಓದಿದ್ದು 10ನೇ ಕ್ಲಾಸ್‌, ಇಂಗ್ಲೀಷ್‌ನಲ್ಲಿ ಪಂಟರ್

ಬಿಪಿಓ ಕೆಲಸದಲ್ಲಿದ್ದ ಬಹುತೇಕರು 10ನೇ ತರಗತಿ ಓದಿದ್ದರು. ಆದರೆ ಅಮೆರಿಕಾ ಪ್ರಜೆಗಳ ರೀತಿಯಲ್ಲಿ ಆರೋಪಿಗಳು ಇಂಗ್ಲೀಷ್ ಮಾತನಾಡುತ್ತಿದ್ದರು. ಹಣದಾಸೆ ತೋರಿಸಿ ಕೃತ್ಯಕ್ಕೆ ಹೊರ ರಾಜ್ಯಗಳ ಯುವ ಸಮೂಹವನ್ನು ಬಳಸಿಕೊಂಡಿದ್ದಾರೆ. ಅಲ್ಲದೆ ಈ ಕಟ್ಟಡದ ಮಾಲಿಕನಿಗೆ ಸಹ ಕಂಪನಿ ಕಾರ್ಯಚಟುವಟಿಕೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.

ಕಂಪನಿ ಪರಿಶೀಲಿಸಿದ ಆಯುಕ್ತ

ಎಚ್‌ಎಸ್‌ಆರ್‌ ಲೇಔಟ್‌ ಸಮೀಪದ ಸೈಬಿಟ್ಸ್‌ ಸಲೂಷನ್‌ ಪ್ರೈ.ಲಿಮಿಟೆಡ್‌ (Cybits Solution Pvt) ಕಂಪನಿಗೆ ಮಂಗಳವಾರ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಏನೇನು ಜಪ್ತಿ? 41 ಕಂಪ್ಯೂಟರ್‌ಗಳು, 4 ರೋಟೆರ್‌, 1 ಇಪಿಎಬಿಎಕ್ಸ್‌ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಡಿಶಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಮೇಘಾಲಯ, ಮಹಾರಾಷ್ಟ್ರ, ಮಹಾರಾಷ್ಟ್ರದ 16 ಮಂದಿಯನ್ನು ಬಂಧಿಸಲಾಗಿದೆ.

150 ರಿಂದ 200 ಕೋಟಿ ವಂಚನೆ

ಎರಡು ವರ್ಷಗಳಿಂದ ಈ ವಂಚನೆ ಕಂಪನಿ ಕಾರ್ಯನಿರ್ವಹಿಸಿದ್ದು, ಸುಮಾರು 150 ರಿಂದ 200 ಕೋಟಿವರೆಗೆ ವಂಚಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರತಿ ಸಿಬ್ಬಂದಿಗೆ ಸಂಬಳವಲ್ಲದೆ ಕಮಿಷನ್ ರೂಪದಲ್ಲಿ 2 ರಿಂದ 4 ಲಕ್ಷ ರು. ಹಣ ಸಂದಾಯವಾಗಿದೆ. ಈ ಆರ್ಥಿಕ ವಹಿವಾಟಿನ ಅಂದಾಜಿನ ಮೇರೆಗೆ ಕೋಟ್ಯಂತರ ರು. ವಂಚನೆ ನಡೆದಿರಬಹುದು. ಹಾಗೆ ಈ ವ್ಯವಹಾರವು ಡಾಲರ್‌ ಮೂಲಕ ನಡೆದಿದೆ. ಹೀಗಾಗಿ ಭಾರತೀಯ ಕರೆನ್ಸಿಗೆ ಹೋಲಿಕೆ ಮಾಡಿದಾಗ ವಂಚನೆ ಮೊತ್ತವು ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಡಿಜಿಟಲ್ ಅರೆಸ್ಟ್‌ಗೆ ಸಂತ್ರಸ್ತರಿಗೆ ಕರೆ ಮಾಡಲು ಬಿಪಿಒ ಕಂಪನಿಯನ್ನು ನಗರದಲ್ಲಿ ತೆರೆದಿರುವ ಸಾಧ್ಯತೆಗಳಿವೆ. ಈ ಕೃತ್ಯಕ್ಕೆ ಸಮವಸ್ತ್ರದ ಪೊಲೀಸ್ ಅಧಿಕಾರಿಗಳ ತೋರಿಸಲು ಆರೋಪಿಗಳು ಬೇರೆಡೆ ಸ್ಟುಡಿಯೋ ಮಾಡಿರಬಹುದು. ಈ ವಂಚನೆ ಜಾಲದ ಪ್ರಮುಖ ಆರೋಪಿಗಳ ಬಂಧನ ತನಿಖೆ ನಡೆದಿದೆ.

-ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತ, ಬೆಂಗಳೂರು

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು
ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ