ದಿವ್ಯಾ ವಂಸತಾ ಗ್ಯಾಂಗ್‌ ವಿರುದ್ಧ ಮತ್ತೊಂದು ಕೇಸ್‌!

KannadaprabhaNewsNetwork |  
Published : Jul 07, 2024, 01:25 AM ISTUpdated : Jul 07, 2024, 05:07 AM IST
Divya Vasantha

ಸಾರಾಂಶ

ಸುಲಿಗೆ ಯತ್ನ ವಿವಾದದಲ್ಲಿ ಸಿಲುಕಿರುವ ರಾಜ್ ನ್ಯೂಸ್‌ ಕಾರ್ಯನಿರ್ವಾಹಕ ಎನ್ನಲಾದ ರಾಜಾನುಕುಂಟೆ ವೆಂಕಟೇಶ್ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಮತ್ತೊಂದು ಸುಲಿಗೆ ಪ್ರಕರಣ ದಾಖಲಾಗಿದೆ.

 ಬೆಂಗಳೂರು : ಸುಲಿಗೆ ಯತ್ನ ವಿವಾದದಲ್ಲಿ ಸಿಲುಕಿರುವ ರಾಜ್ ನ್ಯೂಸ್‌ ಕಾರ್ಯನಿರ್ವಾಹಕ ಎನ್ನಲಾದ ರಾಜಾನುಕುಂಟೆ ವೆಂಕಟೇಶ್ ವಿರುದ್ಧ ಇಂದಿರಾನಗರ ಠಾಣೆಯಲ್ಲಿ ಮತ್ತೊಂದು ಸುಲಿಗೆ ಪ್ರಕರಣ ದಾಖಲಾಗಿದೆ.

ಇಂದಿರಾ ನಗರದ 80 ಅಡಿ ರಸ್ತೆಯ ಮೈಕಲ್ ಪಾಳ್ಯ ಸಮೀಪದ ಸಹರಾ ಇಂಟರ್ ನ್ಯಾಷನಲ್ ಸ್ಪಾದ ವ್ಯವಸ್ಥಾಪಕ ಮಹೇಶ್ ಶೆಟ್ಟಿಗೆ ಬೆದರಿಸಿ 1 ಲಕ್ಷ ರು ಸುಲಿಗೆ ಮಾಡಿದ್ದು, ಈ ಬಗ್ಗೆ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ರಾಜ್ ನ್ಯೂಸ್‌ ಸಿಇಒ ವೆಂಕಟೇಶ್ ಹಾಗೂ ಇತರರ ವಿರುದ್ಧ ಇಂದಿರಾನಗರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈಗಾಗಲೇ ಇಂದಿರಾನಗರದ ಮತ್ತೊಂದು ಸ್ಪಾನ ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರು ಸುಲಿಗೆ ಯತ್ನಿಸಿದ ಪ್ರಕರಣದಲ್ಲಿ ವೆಂಕಟೇಶ್ ಹಾಗೂ ನಿರೂಪಕಿ ದಿವ್ಯಾ ವಸಂತಾ ಸೋದರ ಸಂದೇಶ್ ಬಂಧನವಾಗಿದೆ.

ವಿಡಿಯೋ ಇದೆ ಎಂದು ಬೆದರಿಸಿ ಸುಲಿಗೆ

ಜೂ.20 ರಂದು ನನ್ನ ಮೊಬೈಲ್‌ಗೆ ಕರೆ ಮಾಡಿ ರಾಜ್ ಟಿವಿ ಸಿಇಓ ವೆಂಕಟೇಶ್ ಎಂದು ಪರಿಚಯಿಸಿಕೊಂಡ. ಬಳಿಕ ನಿಮ್ಮ ಸ್ಪಾ ಬಗ್ಗೆ ಮಾತನಾಡಬೇಕಿದೆ ಎಂದು ಹೇಳಿ ಯಲಹಂಕ ಉಪನಗರದ ಬಳಿಗೆ ಬರುವಂತೆ ಆತ ಸೂಚಿಸಿದ. ಅಂತೆಯೇ ಪೂರ್ವನಿಗದಿತ ಸಮಯಕ್ಕೆ ಆತನನ್ನು ಭೇಟಿಯಾಗಿದ್ದೆ. ಆಗ ವಿಡಿಯೋವೊಂದನ್ನು ತೋರಿಸಿ ನಿಮ್ಮ ಸ್ಪಾನಲ್ಲಿ ಅನೈತಿಕ ಚಟುವಿಟಕೆ ನಡೆಯುತ್ತಿದೆ. ನೀವು 25 ಲಕ್ಷ ರು ಕೊಟ್ಟರೆ ವಿಡಿಯೋ ಡಿಲೀಟ್ ಮಾಡುತ್ತೇನೆ. ಇಲ್ಲದೆ ಹೋದರೆ ನನ್ನ ಚಾನೆಲ್‌ನಲ್ಲಿ ಪ್ರಸಾರ ಮಾಡುತ್ತೇನೆ ಎಂದು ಬೆದರಿಸಿದ್ದಾಗಿ ದೂರಿನಲ್ಲಿ ಮಹೇಶ್ ಶೆಟ್ಟಿ ಉಲ್ಲೇಖಿಸಿದ್ದಾರೆ.

ಈ ಬ್ಲ್ಯಾಕ್‌ಮೇಲ್ ಬಗ್ಗೆ ನನ್ನ ಸ್ಪಾ ಮಾಲಿಕ ಮಧುಸೂಧನ್‌ ಅವರಿಗೆ ತಿಳಿಸಿದೆ. ಆದರೆ ನಗರದಿಂದ ಹೊರ ಇದ್ದ ಕಾರಣ ಅವರು ನನಗೆ ಪ್ರಕರಣ ಇತ್ಯರ್ಥಪಡಿಸುವಂತೆ ಹೇಳಿದರು. ಅಂತೆಯೇ ವೆಂಕಟೇಶ್ ಅವರನ್ನು ಸಂಪರ್ಕಿಸಿ ನನ್ನ ಬಳಿ ತಾವು ಹೇಳಿದಷ್ಟು ಹಣ ಕೊಡಲು ಸಾಧ್ಯವಿಲ್ಲವೆಂದು ಹೇಳಿದೆ. ಇದಾದ ಬಳಿಕ ಪದೇ ಪದೇ ಕರೆ ಮಾಡಿ ಹಣಕ್ಕೆ ವೆಂಕಟೇಶ್ ಒತ್ತಾಯಿಸಿದ್ದ. ಅಂತಿಮವಾಗಿ 1 ಲಕ್ಷ ರು ಆತನಿಗೆ ಹಂತ ಹಂತವಾಗಿ ಪಾವತಿಸಿದೆ. ಅಲ್ಲದೆ ಪ್ರತಿ ತಿಂಗಳು 19ನೇ ತಾರೀಖು 20 ಸಾವಿರ ಹಣ ನೀಡುವಂತೆ ವೆಂಕಟೇಶ್ ತಾಕೀತು ಮಾಡಿದ್ದ ಎಂದು ಶೆಟ್ಟಿ ಹೇಳಿದ್ದಾರೆ.

ದಿವ್ಯಾ ವಸಂತಾ ಪತ್ತೆಗೆ ಹುಡುಕಾಟ

ಈ ಸುಲಿಗೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಿರೂಪಕಿ ದಿವ್ಯಾ ವಸಂತಾ ಗ್ಯಾಂಗ್‌ ಪತ್ತೆಗೆ ಜೆ.ಬಿ.ನಗರ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ನಂತರ ಆಕೆ ತಲೆಮರೆಸಿಕೊಂಡಿದ್ದಾಳೆ.

ರಾಜ್‌ ನ್ಯೂಸ್ ಸಿಬ್ಬಂದಿ ಅಲ್ಲ: ಸ್ಪಷ್ಟನೆ

ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪದ ಮೇಲೆ ಬಂಧಿತರಾಗಿರುವ ಆರೋಪಿಗಳಿಗೂ ರಾಜ್‌ ನ್ಯೂಸ್‌ಗೂ ಯಾವುದೇ ಸಂಬಂಧವಿಲ್ಲವೆಂದು ಆ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ. ರಾಜ್‌ ನ್ಯೂಸ್‌ನಲ್ಲಿ ನಾವು ಯಾವುದೇ ಸಿಇಓ ಹುದ್ದೆಯನ್ನು ಸೃಷ್ಟಿಸಿಲ್ಲ. ರಾಜಾನುಕುಂಟೆ ವೆಂಕಟೇಶ್ ಎಂಬುವವರು 3 ತಿಂಗಳಿಂದ ನಮ್ಮ ಸಂಸ್ಥೆಯಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ಸಂಸ್ಥೆಯ ಸಿಇಓ ಹಾಗೂ ಉದ್ಯೋಗಿಯಲ್ಲ. ಸಿಇಓ ಎಂದು ವೆಂಕಟೇಶ್ ಹೇಳಿಕೊಂಡಿರುವುದಕ್ಕೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ರಾಜ್ ನ್ಯೂಸ್ ಎಂಡಿ ಹೇಳಿದ್ದಾರೆ. ಇನ್ನುಳಿದ ಆರೋಪಿಗಳು ನಮ್ಮ ಸಂಸ್ಥೆಯ ಉದ್ಯೋಗಿಗಳಲ್ಲ. ಆರೋಪಿಗಳು ರಾಜ್‌ ನ್ಯೂಸ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದರಿಂದ ಕಾನೂನು ಕ್ರಮಕ್ಕೆ ಮುಂದಾಗಿದ್ದೇವೆ. ರಾಜ್ ನ್ಯೂಸ್‌ ಹೆಸರನ್ನು ಈ ಆರೋಪಿಗಳ ಜತೆ ಸೇರಿಸಬಾರದು ಎಂದು ಎಂಡಿ ಮನವಿ ಮಾಡಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?
ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕನಿಂದ ಗೃಹಿಣಿಗೆ ಕಿರುಕುಳ