ಕೆಟ್ಟ ಭಾವನೆ ಸೃಷ್ಟಿಸಿ ತಾಯಿ ಕೊಲ್ಲಲು ಮಗನನ್ನು ಪ್ರಚೋದಿಸಿದ್ದ ತಂದೆಯ ಬಂಧನ!

KannadaprabhaNewsNetwork |  
Published : Feb 07, 2024, 01:50 AM IST
ಕ್ರೈಂ... | Kannada Prabha

ಸಾರಾಂಶ

ಜಸ್ಟೀಸ್ ಭೀಮಯ್ಯ ಲೇಔಟ್‌ನಲ್ಲಿ ನಡೆದಿದ್ದ ಅಪ್ರಾಪ್ತ ಮಗನಿಂದಲೇ ತಾಯಿ ಹತ್ಯೆ ಪ್ರಕರಣದಲ್ಲಿ ಮೃತಳ ಪತಿಯನ್ನು ಪೊಲೀಸರು ಬಂಧಿಸಿದ್ದು, ಅನೈತಿಕ ಸಂಬಂಧ ಶಂಕೆ ಮೇರೆಗೆ ತನ್ನ ಪತ್ನಿ ಕೊಲ್ಲಲು 17 ವರ್ಷದ ಮಗನಿಗೆ ಆರೋಪಿ ಪ್ರಚೋದಿಸಿದ್ದು ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಜಸ್ಟೀಸ್ ಭೀಮಯ್ಯ ಲೇಔಟ್‌ನಲ್ಲಿ ನಡೆದಿದ್ದ ಅಪ್ರಾಪ್ತ ಮಗನಿಂದಲೇ ತಾಯಿ ಹತ್ಯೆ ಪ್ರಕರಣದಲ್ಲಿ ಮೃತಳ ಪತಿಯನ್ನು ಕೂಡಾ ಕೆ.ಆರ್‌.ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೃಷಿಕ ಚಂದ್ರಪ್ಪ ಬಂಧಿತನಾಗಿದ್ದು, ಅನೈತಿಕ ಸಂಬಂಧ ಶಂಕೆ ಮೇರೆಗೆ ತನ್ನ ಪತ್ನಿ ಕೊಲ್ಲಲು 17 ವರ್ಷದ ಮಗನಿಗೆ ಆರೋಪಿ ಪ್ರಚೋದಿಸಿದ್ದ. ಕೃತ್ಯ ಎಸಗಿದ ಬಳಿಕ ಮಗನನ್ನು ಪೊಲೀಸರಿಗೆ ಶರಣಾಗತಿ ಮಾಡಿಸಿ ಆತ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ತನಿಖೆ ವೇಳೆ ಹತ್ಯೆ ಕೃತ್ಯದಲ್ಲಿ ಚಂದ್ರಪ್ಪ ಸಹ ಪಾಲ್ಗೊಂಡಿರುವುದಕ್ಕೆ ಪುರಾವೆ ಸಿಕ್ಕಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಪತ್ನಿ ನಡವಳಿಕೆ ಮೇಲೆ ಶಂಕೆ:

25 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚಂದ್ರಪ್ಪ ಹಾಗೂ ಚಿಂತಾಮಣಿ ತಾಲೂಕಿನ ನೇತ್ರಾವತಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದರು. ಹಲವು ವರ್ಷಗಳಿಂದ ಜಸ್ಟಿಸ್ ಭೀಮಯ್ಯ ಲೇಔಟ್‌ನಲ್ಲಿ ಚಂದ್ರಪ್ಪ ಕುಟುಂಬ ನೆಲೆಸಿತ್ತು. ಮುಳಬಾಗಿಲು ತಾಲೂಕಿನಲ್ಲಿ ಎರಡು ಎಕರೆಯಲ್ಲಿ ಕೃಷಿ ಮಾಡುತ್ತಿದ್ದ ಚಂದ್ರಪ್ಪ, ಭೀಮಯ್ಯ ಲೇಔಟ್‌ನಲ್ಲಿ ಏಳೆಂಟು ಮನೆಗಳನ್ನು ಕಟ್ಟಿಸಿ ಬಾಡಿಗೆಗೆ ನೀಡಿದ್ದಾನೆ. ಇನ್ನು ಆತನ ಮಕ್ಕಳ ಪೈಕಿ ಮಗ ಮೊದಲನೇ ವರ್ಷದ ಡಿಪ್ಲೋಮಾ ಹಾಗೂ ವಿದೇಶದಲ್ಲಿ ಅವರ ಪುತ್ರಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದಾಳೆ. ಸಾಫ್ಟ್‌ವೇರ್ ಕಂಪನಿಯಲ್ಲಿ ನೇತ್ರಾವತಿ ಉದ್ಯೋಗದಲ್ಲಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

ತನ್ನ ಪತ್ನಿ ಶೀಲ ಶಂಕಿಸಿ ಮನೆಯಲ್ಲಿ ಪದೇ ಪದೇ ಆತ ಜಗಳ ಮಾಡುತ್ತಿದ್ದ. ಅಲ್ಲದೆ ತನ್ನ ಮಗನಿಗೂ ಸಹ ‘ನಿನ್ನ ತಾಯಿ ಚಾರಿತ್ರ್ಯಹೀನಳು. ಬೇರೊಬ್ಬರ ಜತೆ ಆಕೆಗೆ ಸಲುಗೆ ಇದೆ’ ಎಂದು ಹೇಳಿ ತಾಯಿ ವಿರುದ್ಧ ಮಗನನ್ನು ಚಂದ್ರಪ್ಪ ಎತ್ತಿಕಟ್ಟಿದ್ದ. ಕೊನೆಗೆ ತಾಯಿಯನ್ನು ಕೊಲ್ಲಲು ತಂದೆಗೆ ಮಗನ ಜತೆ ಕೈ ಮೀಸಲಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗನ ಶರಣಾಗತಿ, ತಂದೆ ಚಿತಾವಣೆ:

ಪೂರ್ವನಿಯೋಜಿತ ಸಂಚಿನಂತೆ ಶುಕ್ರವಾರ ನಸುಕಿನಲ್ಲಿ ನಿದ್ರೆಯಲ್ಲಿದ್ದ ನೇತ್ರಾವತಿ ಮೇಲೆ ಕಬ್ಬಿಣದ ಸಲಾಕೆಯಿಂದ ತಂದೆ-ಮಗ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಆನಂತರ ಅಪ್ರಾಪ್ತ ಮಗ ಬಂಧಿತನಾದರೆ ಬೇಗ ಜೈಲಿನಿಂದ ಹೊರಬರುತ್ತಾನೆ ಎಂದು ಚಿತಾವಣೆ ಮಾಡಿದ ಚಂದ್ರಪ್ಪ, ತಾನು ಊರಿಗೆ ಹೋಗಿರುವುದಾಗಿ ಕತೆಕಟ್ಟಿ ಮಗನನ್ನು ಪೊಲೀಸರ ಮುಂದೆ ಶರಣಾಗತಿ ಮಾಡಿಸಿದ್ದ. ಇತ್ತ ‘ತಿಂಡಿ ಮಾಡುವ ವಿಚಾರವಾಗಿ ತಾಯಿ ಜತೆ ಜಗಳವಾಯಿತು. ಆಗ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ ನಮ್ಮಮ್ಮನ ಮೇಲೆ ಹಲ್ಲೆ ನಡೆಸಿ ಕೊಲೆ’ ಮಾಡಿದ್ದಾಗಿ ಕೆ.ಆರ್‌.ಪುರ ಪೊಲೀಸರ ಮುಂದೆ ಮೃತಳ ಮಗ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಆದರೆ ಬೆಳಗ್ಗೆ 6 ಗಂಟೆಗೆ ತಿಂಡಿ ವಿಷಯವಾಗಿ ಜಗಳ ನಡೆಯಲು ಸಾಧ್ಯವೇ ಎಂಬ ಶಂಕೆ ಪೊಲೀಸರಿಗೆ ಮೂಡಿತು. ಆಗ ತನಿಖೆಯನ್ನು ಚುರುಕುಗೊಳಿಸಿದಾಗ ಕೊನೆಗೆ ಚಂದ್ರಪ್ಪನ ಸುಳ್ಳು ನಾಟಕ ಬಯಲಾಯಿತು.

ರಾಡ್‌ ಮೇಲೆ ಆರೋಪಿಗಳ ಬೆರಳಚ್ಚು:

ಪ್ರತಿದಿನ ಮುಳಬಾಗಿಲಿಗೆ ತೆರಳಿ ಸಂಜೆ ಚಂದ್ರಪ್ಪ ಮರಳುತ್ತಿದ್ದ. ಅಂತೆಯೇ ಕೃತ್ಯ ನಡೆದ ದಿನ ತಾನು 5 ಗಂಟೆಗೆ ಮುಳಬಾಗಿಲಿನ ತೋಟಕ್ಕೆ ಹೋಗಿದ್ದಾಗಿ ಆತ ಹೇಳಿದ್ದ. ಆದರೆ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್‌ ಮೇಲೆ ಅಪ್ರಾಪ್ತ ಮಗನ ಮಾತ್ರವಲ್ಲದೆ ತಂದೆ ಬೆರಳಚ್ಚು ಸಹ ಮೂಡಿತ್ತು. ಈ ಮಾಹಿತಿ ಆಧರಿಸಿ ಚಂದ್ರಪ್ಪನನ್ನು ತೀವ್ರವಾಗಿ ಪ್ರಶ್ನಿಸಿದಾಗ ಕೊನೆಗೆ ಸತ್ಯ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌